Thursday, 12th December 2024

ಸೋಲಿನ ಹತಾಶೆಯಿಂದ ಕಾಂಗ್ರೆಸ್ ನಾಯಕರಿಂದ ಅವಹೇಳನಕಾರಿ ಮಾತು: ವಿಪಕ್ಷ ನಾಯಕ ಆರ್.ಅಶೋಕ

R Ashok

ಬೆಂಗಳೂರಿನಲ್ಲಿ ಟ್ಯಾಂಕರ್ ಲಾಬಿ, ಬಾಯ್ ಬೆಂಗಳೂರು ಎನ್ನುತ್ತಿರುವ ಜನರು

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಸೋಲುವ ಹತಾಶೆಯಿಂದಾಗಿ ಕಾಂಗ್ರೆಸ್ ನಾಯಕರು ಸಂಸ್ಕಾರವಿಲ್ಲದೆ ಮಾತ ನಾಡುತ್ತಿದ್ದಾರೆ. ಚುನಾವಣೆಯಲ್ಲಿ ಸೋಲು ಖಚಿತವಾಗಿರುವುದರಿಂದ ಉಚಿತ ಯೋಜನೆಗಳು ಇರುವುದಿಲ್ಲ ಎಂಬುದು ಖಚಿತವಾಗಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ನಾಯಕರು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಸೋಲಿನ ಹತಾಶೆಯಿಂದಾಗಿ ಈ ರೀತಿಯ ಮಾತುಗಳು ಬರುತ್ತಿವೆ. ರಾಹುಲ್‌ ಗಾಂಧಿ ಈಗಾಗಲೇ ಮೋದಿ ಸಮುದಾಯದ ಬಗ್ಗೆ ಮಾತನಾಡಿ ಜೈಲಿಗೆ ಹೋಗುವ ಸ್ಥಿತಿಗೆ ಬಂದಿದ್ದಾರೆ. ಹಿರಿಯಕ್ಕನ ಚಾಳಿ ಮನೆಮಂದಿಗೆ ಎನ್ನುವಂತೆ ಆ ಚಾಳಿ ಎಲ್ಲ ಕಾಂಗ್ರೆಸ್‌ ನಾಯಕರಿಗೆ ಬಂದಿದೆ. ಚಾಯ್‌ವಾಲ, ಚೌಕಿದಾರ್‌ ಚೋರ್‌, ಮೋದಿಗೆ ಪರಿವಾರ ಇಲ್ಲ ಹೀಗೆ ಅನೇಕ ಟೀಕೆಗಳನ್ನು ಮಾಡಿದಾಗ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಲಾಗಿದೆ. ಸಚಿವ ಶಿವರಾಜ ತಂಗಡಗಿ ಹಾಗೂ ಇತರೆ ಮುಖಂಡರು ಸೋಲಿನ ಹತಾಶೆಯಿಂದ ಈ ರೀತಿ ಮಾತಾಡುತ್ತಿದ್ದಾರೆ ಎಂದರು.

ಸಚಿವ ಶಿವರಾಜ ತಂಗಡಗಿ ಬಿಜೆಪಿ ಸಚಿವರಾಗಿದ್ದಾಗ ಸೋನಿಯಾ ಗಾಂಧಿಗೆ ಹೊಡೆಯಿರಿ ಎನ್ನುತ್ತಿದ್ದು, ಈಗ ಮೋದಿಗೆ ಹೇಳು ತ್ತಿದ್ದಾರೆ. ಮುಂದೆ ಜನರೇ ಅವರಿಗೆ ಹೊಡೆಯಲಿದ್ದಾರೆ. ನಾಡಿನ ಸಂಸ್ಕೃತಿಯನ್ನು ಎತ್ತಿಹಿಡಿಯಬೇಕಾದ ಇವರು ಬಾಯಲ್ಲಿ ಸಂಸ್ಕೃತಿ ತೋರಿಸುತ್ತಿದ್ದಾರೆ. ಇವರನ್ನು ಸಮರ್ಥಿಸುವವರು ಹಳ್ಳಿ ಭಾಷೆ ಬಳಕೆ ಎಂದು ಹೇಳುತ್ತಿದ್ದಾರೆ. ಇವರ ಗುರು ಸಿಎಂ ಸಿದ್ದರಾಮಯ್ಯ ಪ್ರಧಾನಿಯನ್ನು ಅವನು, ಇವನು ಎಂದಿದ್ದಾರೆ. ರಾಷ್ಟ್ರಪತಿಯವರನ್ನು, ಆರ್ಥಿಕ ಸಚಿವರನ್ನು ಏಕವಚನದಲ್ಲಿ ಕರೆಯುತ್ತಾರೆ. ರಾಜ್ಯದಲ್ಲಿ ಸಂಸ್ಕಾರ ಇಲ್ಲದ ಸರ್ಕಾರವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವ ತಂಗಡಗಿ ನಿರುದ್ಯೋಗದ ಬಗ್ಗೆ ಮಾತಾಡುತ್ತಾರೆ. 50 ವರ್ಷದ ಆಡಳಿತ ನಡೆಸಿದ ಕಾಂಗ್ರೆಸ್‌ ಈ ಸಮಸ್ಯೆ ಬಗೆಹರಿಸಲಿಲ್ಲ. ಕೇಂದ್ರ ಸರ್ಕಾರದ ರೋಜ್‌ಗಾರ್‌ ಮೇಳ ಯೋಜನೆಯಡಿ 2024 ರ ಫೆಬ್ರವರಿ 13 ರಂದು ಒಂದೇ ದಿನ 1 ಲಕ್ಷ ಜನರಿಗೆ ನೇಮಕಾತಿ ಪತ್ರ ನೀಡಲಾಗಿದೆ. ಈವರೆಗೆ 10 ರೋಜ್‌ಗಾರ್‌ ಮೇಳ ನಡೆಸಿದ್ದು, 6.5 ಲಕ್ಷ ಯುವಜನರಿಗೆ ಉದ್ಯೋಗ ದೊರೆತಿದೆ. ಕಾಂಗ್ರೆಸ್‌ ಸರ್ಕಾರ ಎಷ್ಟು ನಿರುದ್ಯೋಗಿಗಳಿಗೆ ಈವರೆಗೆ ಯುವನಿಧಿ ನೀಡಿದೆ ಎಂದು ತಿಳಿಸಲಿ ಎಂದರು‌.

ಬಾಯ್ ಬೆಂಗಳೂರು

ಬ್ರ್ಯಾಂಡ್‌ ಬೆಂಗಳೂರು ಬಾಂಬ್‌ ಬೆಂಗಳೂರು ಆಗಿದೆ. ಈಗ ಎಲ್ಲರೂ ನೀರಿಲ್ಲದೆ ವಲಸೆ ಹೋಗಿ ಬಾಯ್‌ ಬೆಂಗಳೂರು ಆಗುತ್ತಿದೆ. ಜಲಮಂಡಳಿ ಎಲ್ಲಿಂದ ನೀರು ನೀಡುತ್ತೇವೆ ಎನ್ನುವುದನ್ನು ಬಿಟ್ಟು ಮುಂದಿನ ಐದು ವರ್ಷದಲ್ಲಿ ಕೆರೆ ತುಂಬಿಸುತ್ತೇವೆ ಎನ್ನುತ್ತಿ ದ್ದಾರೆ. ನಗರದಲ್ಲಿ ಟ್ಯಾಂಕರ್‌ ಲಾಬಿ ನಡೆಯುತ್ತಿದ್ದು, ಕಲುಷಿತ ನೀರಿನಿಂದ ಜನರಿಗೆ ರೋಗ ಬರುತ್ತಿದೆ ಎಂದರು.

ಉಚಿತ ಇಲ್ಲ, ಕಾಂಗ್ರೆಸ್‌ ಸೋಲು ಖಚಿತ

ಲೋಕಸಭೆ ಚುನಾವಣೆಯ ಬಳಿಕ ಗ್ಯಾರಂಟಿ ಯೋಜನೆಗಳು ಇರುವುದಿಲ್ಲ ಎಂದು ಕಾಂಗ್ರೆಸ್‌ ಶಾಸಕರೇ ಹೇಳಿದ್ದಾರೆ. ಉಚಿತ ಇರುವುದೋ ಇಲ್ಲವೋ ಗೊತ್ತಿಲ್ಲ. ಆದರೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋತು ಮನೆ ಸೇರುವುದು ಖಚಿತ, ನರೇಂದ್ರ ಮೋದಿ ಹ್ಯಾಟ್ರಿಕ್‌ ಗೆಲುವು ನಿಶ್ಚಿತ. ಈ ಬಾರಿ ಕಾಂಗ್ರೆಸ್‌ ಮುಕ್ತ ಭಾರತ ನಿರ್ಮಾಣವಾಗಲಿದೆ. ನಮ್ಮ ಒಬ್ಬ ಮತದಾರ ಒಂದು ಬೆರಳಿನ ಮೂಲಕ ಮತ ಚಲಾಯಿಸಿ ಇಡೀ ಭ್ರಷ್ಟಾಚಾರದ ಕಾಂಗ್ರೆಸ್‌ ಹಸ್ತವನ್ನು ನುಂಗಿ ಹಾಕಲಿದ್ದಾರೆ ಎಂದರು.

ವಾರ್ತಾ ಇಲಾಖೆಯಲ್ಲಿ ಹೇಮಂತ್‌ ನಿಂಬಾಳ್ಕರ್‌ ಕೆಲಸ ಮಾಡುತ್ತಿದ್ದು, ಅವರ ಪತ್ನಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ತಿಳಿಸಿದರು.