Sunday, 15th December 2024

CPIM: ರಾಜಕೀಯ ಮೀಸಲಾತಿಯಿಂದ ಕೃಷಿಕೂಲಿ ಕಾರ್ಮಿಕ ದಲಿತರ ಬದುಕು ಸುಧಾರಣೆ ಕಂಡಿಲ್ಲ-ಸಿಪಿಐಎಂ ಕೇಂದ್ರ ಸಮಿತಿ ಸದಸ್ಯ ಕೆ.ಪ್ರಕಾಶ್

ಚಿಕ್ಕಬಳ್ಳಾಪುರ: ಸಾಮಾಜಿಕ ಆರ್ಥಿಕ ಸಮಾನತೆ ಬರದ ಹೊರತು ಅಂಬೇಡ್ಕರ್ ಭಾರತದ ಮೂಲನಿವಾಸಿ ದಲಿತ ಶೋಷಿತ ದಮನಿತರ ಬದುಕಿಗೆ ಆಸರೆಯಾಗುತ್ತದೆ ಎಂಬ ಕಾರಣಕ್ಕಾಗಿ ಸಂವಿಧಾನದತ್ತವಾಗಿ ನೀಡಲಾಗಿರುವ ರಾಜಕೀಯ ಅಧಿಕಾರದಿಂದ ಈ ೭೮ ವರ್ಷಗಳಲ್ಲಿ ಹೇಳಿಕೊಳ್ಳುವ ರೀತಿಯಲ್ಲಿ ಸುಧಾರಣೆಯೇನೂ ಆಗಿಲ್ಲ ಎಂದು ಸಿಪಿಐಎಂ ಕೇಂದ್ರ ಸಮಿತಿ ಸದಸ್ಯ ಕೆ.ಪ್ರಕಾಶ್ ತಿಳಿಸಿದರು.

ನಗರದ ಕೆಇಬಿ ಸಮುದಾಯ ಭವನದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್‌ನ ಜಿಲ್ಲಾ ಶಾಖೆ ಆಯೋಜಿಸಿದ್ದ 6ನೇ ರಾಜ್ಯ ಸಮ್ಮೇಳನನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ರಾಜಕೀಯ ಸಮಾನತೆ ಮುಂದಿಟ್ಟುಕೊಂಡು ಸಾಮಾಜಿಕ ಆರ್ಥಿಕ ಸಮಾನತೆ ಸಾಧಿಸಬೇಕು ಎಂದು ಅಂಬೇಡ್ಕರ್ ಹೇಳಿದ್ದರು.ಇವತ್ತಿನ ಸಂದರ್ಭದಲ್ಲಿ ಇದನ್ನು ಮಾಡಲು ಆಗುತ್ತದೆಯಾ?ಯುವಜನತೆ ನೀವು ಯೋಚನೆ ಮಾಡ ಬೇಕಿದೆ. 1949ರಲ್ಲಿ ಚೀನಾ ಕ್ರಾಂತಿಯಾಗುತ್ತದೆ. 1947ರಲ್ಲಿ ಭಾರತ ಸ್ವಾತಂತ್ರ್ಯ ಪಡೆಯುತ್ತದೆ.

ಚೀನಾಗಿಂತ ಎರಡು ವರ್ಷ ಮೊದಲೇ ಸ್ವಾತಂತ್ರ್ಯ ಪಡೆದ ದೇಶದಲ್ಲಿ ಕೇವಲ 78 ವರ್ಷಗಳ ದಲಿತ ಹಿಂದುಳಿದ ಬಡವರು ದುಬಾರಿ ಶಿಕ್ಷಣಕ್ಕೆ ಬೇಸತ್ತಿದ್ದಾರೆ. ಸರಕಾರಿ ಆಸ್ಪತ್ರೆಗಳಲ್ಲಿ ಸಮರ್ಪಕ ಚಿಕಿತ್ಸೆಗಾಗಿ ಗೋಗೆರೆಯುತ್ತಿದ್ದಾರೆ. ಉದ್ಯೋಗ ಭದ್ರತೆಗಾಗಿ ಯುವಜನತೆ ಬೀದಿಗಿಳಿಯುವ ಪರಿಸ್ಥಿತಿ ಎದುರಾಗಿದೆ. ಬಡವರಿಗೆ ಒಂದು ನ್ಯಾಯ, ಶ್ರೀಮಂತ ರಿಗೆ ಒಂದು ನ್ಯಾಯ ಎನ್ನುವಂತಾಗಿದೆ. ಮೂಲಭೂತ ಸೌಕರ್ಯಗಳಿಗಾಗಿ ಸರ್ಕಾರವನ್ನು ಅಂಗಲಾಚುವ ಪರಿಸ್ಥಿತಿ ನಿರ್ಮಾಣವಾಗಿದೆ.ಕಾರಣ ಶೇ.10ರಷ್ಟಿರುವ ಶ್ರೀಮಂತರ ಕೈಯಲ್ಲಿ ದೇಶದ ಸಂಪತ್ತು ಕ್ರೋಡೀಕರವಾಗಿದೆ.

ಆದರೆ ನಮಗಿಂತ 2 ವರ್ಷ ತಡವಾಗಿ ಕ್ರಾಂತಿಗೆ ಒಳಗಾದ ಚೀನಾ ದೇಶವು ಇಂದು ಜಗತ್ತಿನ ಶ್ರೀಮಂತ ರಾಷ್ಟçವಾಗಿ ಹೊರಹೊಮ್ಮಿದೆ. ಕಾರಣ ಅಲ್ಲಿನ ಜನರ ತೆರಿಗೆಯ ಪಾಲು ನೇರವಾಗಿ ಸರಕಾರದ ಖಜಾನೆಗೆ ಸೇರುತ್ತಿದೆ. ನಮ್ಮಲ್ಲಿ ಖಾಸಗಿ ರಂಗ ಬೆಳೆದಂತೆ ಸರಕಾರಿ ರಂಗ ಬೆಳೆಯಲಿಲ್ಲ.ಏರ್‌ಟೆಲ್, ಜಿಯೋ ಬೆಳೆದಂತೆ ಬಿಎಸ್‌ಎನ್‌ಎಲ್ ಲಾಕ್‌ಔಟ್ ಹಂತ ತಲುಪುತ್ತಿರುವ ಹಾಗೆ ಅಸಮಾನತೆ, ಬಡತನ, ನಿರುದ್ಯೋಗ, ಪ್ರತಿಯೊಂದಕ್ಕೂ ಸರಕಾರದ ಅವಲಂಭನೆ ಹೆಚ್ಚಾಗುವಂತೆ ಆಗಿದೆ.ಇಂತಹ ಸೂಕ್ಷ್ಮತೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹೊತ್ತಾಗಬೇಕು ಎಂದರು.

ಸ್ವಾಗತ ಸಮಿತಿ ಅಧ್ಯಕ್ಷ ಡಾ.ಅನಿಲ್ ಆವುಲಪ್ಪ ಮಾತನಾಡಿ ಎಸ್‌ಎಫ್‌ಐ ಸದಾ ಕಾಲಕ್ಕೂ ಶೋಷಿತರ ಬಡವರ ದಲಿತ ಪರವಾಗಿ ಚಿಂತಿಸುವ ಸಂಘಟನೆಯಾಗಿದ್ದು ಮನುಷ್ಯಕುಲದ ಉನ್ನತಿಯನ್ನು ತನ್ನ ಧ್ಯೇಯವಾಗಿಸಿ ಕೊಂಡಿದೆ. ಸಮಾಜವಾದದ ಉದ್ದೇಶ ಹೊಂದಿರುವ ನಾವು ಸಮಾನತೆಯನ್ನು ಸಾಧಿಸಲು ವರ್ಗರಹಿತ ಸಮಾಜ ವನ್ನು ನಿರ್ಮಿಸಬೇಕಿದೆ.

ಜಾತಿ ಧರ್ಮ ಕುಲಗೋತ್ರಗಳ ಜಂಜಾಟದಲ್ಲಿ ಮುಳುಗಿರುವ ಭಾರತದಲ್ಲಿ ವರ್ಗ ಸಂಘರ್ಷ ಆಗದ ಹೊರತು ಸಮಾನತೆ ಕಾಣಲು ಸಾಧ್ಯವಿಲ್ಲ ಎಂಬುದನ್ನು ಸಂಘಟನೆ ಬಲವಾಗಿ ನಂಬಿದೆ. ವಿದ್ಯಾರ್ಥಿಗಳು ಸಂಘಟಿತ ಹೋರಾಟದಿಂದ ಸಮಾಜದಲ್ಲಿ ಏನೆಲ್ಲಾ ಬದಲಾವಣೆ ತರುವಂತೆ ಮಾಡುವ ಶಕ್ತಿ ಹೊಂದಿದ್ದಾರೆ ಎಂಬುದಕ್ಕೆ ರಷ್ಯಾ, ಚೀನಾ, ಫ್ರಾನ್ಸ್, ಕ್ಯೂಬಾ, ವಿಯೆಟ್ನಾಂ ಕ್ರಾಂತಿಗಳೇ ಸಾಕ್ಷಿ ಎಂದರು.

ಭಾರತದಲ್ಲಿ ೧೯೩೬ರಲ್ಲಿ ಮೊದಲ ಎಸ್‌ಎಫ್‌ಐ ಸಮ್ಮೇಳನ ಲಕ್ನೋದಲ್ಲಿ ನಡೆದಾಗ ಮಹಮದಾಲಿ ಜಿಲ್ಲಾ ಅದರ ಅಧ್ಯಕ್ಷರಾಗಿದ್ದರು.ಜವಹರಲಾಲ್ ನೆಹರು ಉದ್ಘಾಟನೆ ಮಾಡಿದ್ದರು.ಅಲ್ಲಿಂದ ಇಲ್ಲಿವರೆಗೆ ಅನೇಕ ಏಳುಬೀಳು ಗಳನ್ನು ಕಂಡಿರುವ ಸಂಘಟನೆ ಸ್ಪಷ್ಟವಾದ ಸೈದ್ಧಾಂತಿಕ ಹಿನ್ನೆಲೆಯಿಟ್ಟುಕೊಂಡು ದೇಶದ ಉದ್ದಗಲ್ಲಕ್ಕೂ ಬೆಳೆದು ನಿಂತಿದೆ. ಚಿಕ್ಕಬಳ್ಳಾಪುರದಲ್ಲಿ 16ನೇ ರಾಜ್ಯ ಸಮ್ಮೇಳನ ನಡೆಯುತ್ತಿದೆ. ಇಲ್ಲಿ ಭಾಗಿಯಾದ ತಮಗೆಲ್ಲರಿಗೂ ಅನಂತ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

16ನೇ ರಾಜ್ಯ ಸಮ್ಮೇಳನದಲ್ಲಿ 10 ನಿರ್ಣಯಗಳನ್ನು ಕೈಗೊಳ್ಳುವ ಮೂಲಕ ಇವುಗಳ ಅನುಷ್ಟಾನಕ್ಕೆ ಆಳುವ ಸರಕಾರಗಳ ಮೇಲೆ ಒತ್ತಡ ತರುವಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಎಸ್‌ಫ್‌ಐ ಸಂಗಾತಿಗಳಿಗೆ ಮನವಿ ಮಾಡಿದರು.ಇದೇ ವೇಳೆ ನೂತನ ರಾಜ್ಯ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ಎಸ್‌ಎಫ್‌ಐ ರಾಜ್ಯಾಧ್ಯಕ್ಷರಾಗಿ ಕೋಲಾರದ ಶಿವಕುಮಾರ್, ವಿಜಯಕುಮಾರ್, ಸಂಗನಗೌಡ ಮೈಸೂರು ಇವರನ್ನು ಆಯ್ಕೆ ಮಾಡಲಾಯಿತು. ವೇದಿಕೆಯಲ್ಲಿ ಎಸ್‌ಎಫ್‌ಐ ಮುಖಂಡರು ಕಾರ್ಯಕರ್ತರು, ಸಿಪಿಐಎಂ ಮುಖಂಡರು ಕಾರ್ಯಕರ್ತರು ಇದ್ದರು.

ಇದನ್ನೂ ಓದಿ: Chikkaballapur News: ತಾಂತ್ರಿಕ ಹುದ್ದೆಯ ವೇತನ ನೀಡಿ ಕೆಲಸದ ಒತ್ತಡ ಕಡಿಮೆ ಮಾಡಿ ಎಂದು ಪ್ರತಿಭಟನೆ