Wednesday, 9th October 2024

Cricketer Jonty Rhodes: ಗ್ರಾಮೀಣ ಪ್ರದೇಶದಲ್ಲಿ ಶಾಲೆಗಳಲ್ಲಿ ಸಮಗ್ರ ಪೋಷಣೆಗೆ ಮುಂದಾಗಿರುವ ಸದ್ಗುರು ಕಾರ್ಯ ಶ್ಲಾಘನೀಯ- ಜಾಂಟಿರೋಡ್ಸ್

ಚಿಕ್ಕಬಳ್ಳಾಪುರ: ಗ್ರಾಮೀಣ ಪ್ರದೇಶದ ಶಾಲೆಗಳ ಮಕ್ಕಳಿಗೆ ಹಸಿವನ್ನು ನೀಗಿಸುವ ಸತ್ಕಾರ್ಯ ಮಾಡುತ್ತಿರುವ ಸದ್ಗುರು ಮಧುಸೂಧನ್ ಸಾಯಿ ಅವರ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರ ಜಾಂಟಿರೋಡ್ಸ್ ಅಭಿಪ್ರಾಯಪಟ್ಟರು.

ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ಅನ್ನಪೂರ್ಣ ಯೋಜನೆಯ ಸಾಧನೆ ಸಂಭ್ರಮಾಚರಣೆಯ ಪ್ರಯುಕ್ತ, ಏರ್ಪಡಿಸಿದ್ದ ‘ಪೋಷಣೆಯ ಶಕ್ತಿ’ ಎಂಬ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕೇವಲ ಹೊಟ್ಟೆ ತುಂಬಿಸುವುದಕ್ಕಿಂತ, ಸಮಗ್ರ ಪೋಷಣೆ ಬಹಳ ಮುಖ್ಯ. ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ – ಸಮಗ್ರ ಪೋಷಣೆ ನೀಡುವಲ್ಲಿ ನಿಸ್ವಾರ್ಥವಾಗಿ ಕಾರ್ಯನಿರ್ವಹಿಸುತ್ತಿದೆ. ಕ್ರಿಕೆಟ್ ಆಟದಲ್ಲಿ ಅವಶ್ಯಕವಾಗಿ ಬೇಕಿರುವುದು ಒಗ್ಗಟ್ಟು ಮತ್ತು ಕೂಡಿ ಕೆಲಸ ಮಾಡುವುದು. ಈ ಸಾಧನೆಯ ಹಿಂದೆ, ಈ ಸಭೆಯಲ್ಲಿ ಕುಳಿತಿರುವ ಸಂಸ್ಥೆಯ ಅತ್ಯದ್ಭುತ ತಂಡವು ಒಗ್ಗಟ್ಟಿನಿಂದ ಕಾರ್ಯೋನ್ಮುಖವಾಗಿರುವುದರ ಫಲವಾಗಿ, ಈ ಪೋಷಣಾ ಕಾರ್ಯ ಕ್ರಮವು ಅಪರಿಮಿತ ಗಾತ್ರದಲ್ಲಿ ಯಶಸ್ಸನ್ನು ಸಾಧಿಸುತ್ತಿದೆ. ಇವರೆಲ್ಲರಿಗೂ, ನನ್ನ ಹಾರ್ದಿಕ ಅಭಿನಂದನೆ ಗಳು ಎಂದರು

ಶ್ರೀ ಮಧುಸೂದನ ಸಾಯಿ ಜಾಗತಿಕ ಮಾನವೀಯ ಸೇವಾ ಅಭಿಯಾನದ ಪೌಷ್ಟಿಕ ಆಹಾರ ಸೇವಾ ಕಾರ್ಯಕ್ರಮ ಗಳನ್ನು ನಿರ್ವಹಿಸುತ್ತಿರುವ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ಅಸಾಮಾನ್ಯ ಮೈಲಿಗಲ್ಲನ್ನು ಸಾಧಿಸಿದೆ. ಪ್ರಸ್ತುತ ಭಾರತದಾದ್ಯಂತ ೧೦ ದಶಲಕ್ಷ ಗ್ರಾಮೀಣ ಮತ್ತು ನಗರ ಪ್ರದೇಶಗಳ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲಾ ಮಕ್ಕಳಿಗೆ ಉಚಿತ ಬೆಳಗಿನ ಉಪಾಹಾರವನ್ನು ನೀಡುವುದರ ಮೂಲಕ ಅವರಲ್ಲಿರುವ ಕಣ್ಣರಿಯದ ಹಸಿವನ್ನು ನಿವಾರಿಸಿ, ಪುಷ್ಟಿಯುತ ಮತ್ತು ಸದೃಢ ಶರೀರಗಳನ್ನು ಪೋಷಿಸುತ್ತಿದೆ ಎಂದರು.

ಮಧುಸೂದನ ಸಾಯಿ ಮಾತನಾಡಿ ಕೋವಿಡ್ 19 ರ ಸಾಂಕ್ರಾಮಿಕದ ಮುಂಚೆ, ನಮ್ಮ ಸಂಸ್ಥೆಯು 5 ಲಕ್ಷ ಮಕ್ಕಳಿಗೆ ಪ್ರತಿದಿನ ಉಪಾಹಾರವನ್ನು ವಿತರಿಸುತ್ತಿತ್ತು. ಕೋವಿಡ್ ನಂತರದಲ್ಲಿ ಶಾಲೆಗಳು ತೆರೆದಾಗ, ನಾವು ಈ ನಮ್ಮ ಕಾರ್ಯ ಕ್ರಮವನ್ನು 10 ದಶಲಕ್ಷ ಮಕ್ಕಳಿಗೆ ವಿಸ್ತರಿಸಿದೆವು. ಈ ಕಾರ್ಯಕ್ರಮಕ್ಕೆ ಸಹಕಾರ ತೋರಿದ ಕರ್ನಾಟಕ ಹಾಗು ತೆಲಂಗಾಣ ಸರ್ಕಾರಗಳಿಗೆ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು. ಮುಂಬರುವ ಶೈಕ್ಷಣಿಕ ವರ್ಷದಿಂದ, ಈ ಕಾರ್ಯ ಕ್ರಮವನ್ನು ಅಂಗನವಾಡಿ ಕೇಂದ್ರಗಳಲ್ಲಿಯೂ ವಿಸ್ತರಿಸುವ ಯೋಜನೆಯಿದ್ದು, 4 ವರ್ಷದ ಮಗುವಿನಿಂದ ಹಿಡಿದು, ಎಲ್ಲಾ ಮಕ್ಕಳಿಗೆ ಅವಶ್ಯಕವಾದ ಪೋಷಕಾಂಶಗಳನ್ನು ಪೂರೈಸುವ ಗುರಿ ಹೊಂದಿದ್ದೇವೆ.

ಮ್ಮ ಧ್ಯೇಯದೃಷ್ಟಿ ಸ್ಪಷ್ಟವಾಗಿದೆ: ಭಾರತದ ಪ್ರತಿಯೊಂದು ಮಗವು ತನ್ನ ಕಲಿಕೆ, ಬೆಳವಣಿಗೆಗೆ ಬೇಕಾದ ಅಗತ್ಯ ಪೋಷಣೆಯನ್ನು ಪಡೆಯುವ ಮೂಲಕ ತಮ್ಮ ದಿನಚರಿಯನ್ನು ಶುರು ಮಾಡುವಂತಾಗಬೇಕು” ಎಂದು ವ್ಯಕ್ತ ಪಡಿಸಿದರು. ಕಳೆದ 12 ವರ್ಷಗಳಲ್ಲಿ ಜಗತ್ತಿನ ಅತಿ ದೊಡ್ಡ ಬೆಳಗಿನ ಉಪಾಹಾರ ಯೋಜನೆ ಮುನ್ನಡೆ, ಭಾರತದ ಮೊಟ್ಟ ಮೊದಲ ಸಂಪೂರ್ಣ ಉಚಿತ ಸನಿವಾಸ ಗುರುಕುಲ ಮಾದರಿ ಸಮೂಹ ಶಾಲೆಗಳು ಮತ್ತು ಖಾಸಗಿ ಗ್ರಾಮೀಣ ವಿಶ್ವವಿದ್ಯಾಲಯ ಸ್ಥಾಪನೆ. ಭಾರತದ ಮೊಟ್ಟ ಮೊದಲ ಸಂಪೂರ್ಣ ಉಚಿತ ಸನಿವಾಸ ಗ್ರಾಮೀಣ ವೈದ್ಯಕೀಯ ಮಹಾವಿದ್ಯಾಲಯದ ಸ್ಥಾಪನೆ, ತನ್ಮೂಲಕ ಜಗತ್ತಿನ ಅತಿ ದೊಡ್ಡ ಶಿಶು ಹೃದಯ ಚಿಕಿತ್ಸಾ ಸಮೂಹ ಆಸ್ಪತ್ರೆಗಳ ಸ್ಥಾಪನೆಯ ಶ್ರೇಯ ನಮ್ಮ ಸಂಸ್ಥೆಗಿದೆ ಎಂದರು.

ಈ ಟ್ರಸ್ಟ್, ಬಹು ಮತ್ತು ಸೂಕ್ಷ್ಮ ಪೋಷಕಾಂಶಗಳನ್ನು ಪೂರೈಸುವ ‘ಸಾಯಿ ಶ್ಯೂರ್’ ಪುಷ್ಟಿಪೇಯದ ಪುಡಿಯನ್ನು ತಯಾರಿಸುವ ಉತ್ಪಾದನಾ ಘಟಕವನ್ನು ಹೊಂದಿದ್ದು, ಅದರ ಮೂಲಕ ದೇಶದ 25 ರಾಜ್ಯಗಳು ಮತ್ತು 4 ಕೇಂದ್ರಾ ಡಳಿತ ಪ್ರದೇಶಗಳ ಸರ್ಕಾರಿ ಶಾಲೆಗಳಿಗೆ ಈ ಉತ್ಪನ್ನವನ್ನು ಪೂರೈಸಲಾಗುತ್ತಿದೆ. ಕರ್ನಾಟಕ ರಾಜ್ಯವೊಂದರಲ್ಲೇ ಸರಿಸುಮಾರು 55 ಲಕ್ಷ ಶಾಲಾ ಮಕ್ಕಳಿಗೆ, ಅನುದಿನ ಈ ‘ಸಾಯಿ ಶ್ಯೂರ್’ ಪುಷ್ಟಿಪೇಯವನ್ನು ವಿತರಿಸಲಾಗುತ್ತಿದೆ ಎಂದರು.

ಅತಿಥಿಗಳಾಗಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಿಲ್ಲೆಟ್ಸ್ ರಿಸರ್ಚ್‌ʼನ ನಿರ್ದೇಶಕಿ ಡಾ ತಾರಾ ಸತ್ಯವತಿ, ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯ ಆಯುಕ್ತ ಶ್ರೀ ವೈ.ಎಸ್.ಪಾಟೀಲ್ ಅವರು ಭಾಗವಹಿಸಿದ್ದರು. ಜೊತೆಗೆ 250ಕ್ಕೂ ಹೆಚ್ಚು ರೈತ ಬಾಂಧವರು ಮತ್ತು 100ಕ್ಕೂ ಹೆಚ್ಚು ಕಾರ್ಪೊರೇಟ್ ಮುಖ್ಯಸ್ಥರು ಸಹ ಪಾಲ್ಗೊಂಡಿದ್ದರು.

ಇದೇ ಸಮಯದಲ್ಲಿ ಕಾರ್ಪೋರೇಟ್ ಪಾಲುದಾರರು, ರೈತ ಬಾಂಧವರು ಮತ್ತು ಈ ಪೌಷ್ಟಿಕ ಆಹಾರ ವಿತರಣಾ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಮುನ್ನಡೆಸುವಲ್ಲಿ ಪ್ರಧಾನ ಪಾತ್ರ ವಹಿಸಿದ ಮಹನೀಯರನ್ನು ಗುರುತಿಸಿ, ಪುರಸ್ಕರಿಸಲಾಯಿತು.

ಇದನ್ನೂ ಓದಿ: Chickballapur News: ಎನ್.ನರಸಿಂಹಮೂರ್ತಿಗೆ ಗುರುಶ್ರೇಷ್ಠ ಪ್ರಶಸ್ತಿ ಗರಿ