Friday, 22nd November 2024

ಸಿಎಂ ಹಿಂಬಾಲಕರೇ ಗಲಭೆ ಮಾಡಬಹುದು ಎಂಬುದು ಹರಿಪ್ರಸಾದ್ ಗೆ ಗೊತ್ತಿರಬಹುದು: ಸಿ.ಟಿ.ರವಿ

ಕೊಪ್ಪಳ: ದೇಶ ಇಬ್ಬಾಗ ಮಾಡಲು ಸಹಿ ಹಾಕಿದ ಕಾಂಗ್ರೆಸ್, ತುಂಡಾದ ಭಾರತದಲ್ಲೂ ಹಿಂದುಗಳು ನೆಮ್ಮದಿಯಿಂದ ಇರಲು ಬಿಡುತ್ತಿಲ್ಲ. ಓಟ್ ಬ್ಯಾಂಕ್ ರಾಜಕಾರಣಕ್ಕೆ ರಾಮ ಮಂದಿರ ಉದ್ಘಾಟನೆಗೆ ಅಡ್ಡಿ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಸಿ.ಟಿ.ರವಿ ವಾಗ್ದಾಳಿ ಮಾಡಿದರು.

ಕೊಪ್ಪಳದ ಆಂಜನಾದ್ರಿ ಬೆಟ್ಟದಲ್ಲಿ ಹನುಮಂತನ ದರ್ಶನ ಪಡೆದು ಶುಕ್ರವಾರ ಮಾತನಾಡಿ, ಕರಸೇವಕರ ಬಂಧನ‌ ವಿಚಾರಕ್ಕೆ ಪ್ರತಿಕ್ರಿಯಿಸಿದರು.

ಹಿಂದು ವಿರೋಧಿ ಬುದ್ದಿ ಕಾಂಗ್ರೆಸ್ ನ ಡಿಎನ್ಎ ನಲ್ಲೇ ಬಂದಿದೆ. ಕಾಂಗ್ರೆಸ್ ಸರಕಾರ ಮಾಡಿದ ತಪ್ಪು ಸಮರ್ಥನೆ ಮಾಡಿಕೊಳ್ಳುಲು ಸುಳ್ಳುಗಳ ಸಭೂಬು ಹೇಳುತ್ತಿದ್ದಾರೆ.‌ ಈಗ ರಾಮ ಮಂದಿರ ನಿರ್ಮಾಣ ಮಾಡಿ, ಉದ್ಘಾಟನೆ ಮಾಡುತ್ತಿರುವುದನ್ನು ಕಾಂಗ್ರೆಸ್ ಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಈ ಕಾರಣಕ್ಕೆ ಹಿಂದೂ ಕಾರ್ಯಕರ್ತರನ್ನು ಹುಡುಕಿ ಕೇಸ್ ಹಾಕುತ್ತಿದ್ದಾರೆ. ಹುಬ್ಬಳ್ಳಿ, ಶಿವಮೊಗ್ಗ, ಚಿಕ್ಕಮಗಳೂರು ಸೇರಿ ಎಲ್ಲ ಕಡೆ ಹಿಂದೂ ಕಾರ್ಯಕರ್ತರ ಮೇಲೆ ಕೇಸ್ ಹಾಕುತ್ತಿದ್ದಾರೆ. ಕಾಂಗ್ರೆಸ್ ನವರು ಏನಾದರೂ ಮಾಡಲಿ. ನಮ್ಮ ಕಾರ್ಯಕರ್ತರ ಜೊತೆ ನಾವಿದ್ದೇವೆ.‌ ಕಾರ್ಯಕರ್ತರ ರಕ್ಷಣೆ ನಾವು ಮಾಡುತ್ತೇವೆ.‌ ಸವಾಲು ಸ್ವೀಕರಿಸಿ ನ್ಯಾಯಯುತ ಹೋರಾಟ ಮಾಡುತ್ತೇವೆ. ಜೈಲಿಗೆ ಹೋಗೊದು ನಮಗೇನು ಹೊಸದಲ್ಲ. ನಮ್ಮ ಮೇಲೆ ಕೇಸ್ ಹಾಕಿದ್ರೆ ನಾವೆ ಜೈಲು ಬರೋ ಚಳುವಳಿ ಮಾಡುತ್ತೇವೆ ಎಂದು ಎಚ್ಚರಿಸಿದರು.

ಬಿ.ಕೆ.ಹರಿಪ್ರಸಾದ್ ಅವರ ಗೋದ್ರಾ ಮಾದರಿ ಗಲಭೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಹರಿಪ್ರಸಾದ್ ಅವರಿಗೆ ಸಿದ್ದರಾಮಯ್ಯ ಅವರ ಒಳಸುಳಿ ಚನ್ನಾಗಿ ಗೊತ್ತಿದೆ. ಸಿಎಂ ಯಾರ ರಕ್ಷಣೆ ಮಾಡುತ್ತಾರೆ ಎಂದು ಎಲ್ಲರಿಗೂ ಗೊತ್ತಿದೆ. ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ಕೊಲೆ ಮಾಡಿದವರ ಕೇಸ್ ವಾಪಸ್ ಪಡೆದಿದ್ದಾರೆ. ಸಿಎಂ ಹಿಂಬಾಲಕರು ಈ ರೀತಿ ಕೃತ್ಯ ಎಸಗಬಹುದು ಎಂಬ ಸೂಚನೆ ಹರಿಪ್ರಸಾದ್ ಅವರಿಗೆ ಇರಬಹುದು. ಆ ಮಾಹಿತಿಯ ಮೇಲೆ ಹರಿಪ್ರಸಾದ ಈ ಹೇಳಿಕೆ ನೀಡಿರುತ್ತಾರೆ. ಅವರನ್ನ ತನಿಖೆಗೆ ಒಳಪಡಿಸಬೇಕು ರಾಮಭಕ್ತರಿಗೆ ರಕ್ಷಣೆ ಕೊಡಬೇಕು ಎಂದು ನಾನು ಸರಕಾರಕ್ಕೆ ಒತ್ತಾಯ ಮಾಡುತ್ತೇನೆ ಎಂದರು.

ಅಂಜನಾದ್ರಿ ಅಭಿವೃದ್ಧಿ ವಿಚಾರದಲ್ಲಿ ಸಚಿವ ಶಿವರಾಜ ತಂಗಡಗಿ ಉದ್ದುದ್ದ ಮಾತಾಡಿದ್ದಾರೆ.‌ ಸೋಲು ಗೆಲುವು ಸಹಜ. ಸುಮಾರು 60 ವರ್ಷ ಅಧಿಕಾರ ನಡೆಸಿ ಕಾಂಗ್ರೆಸ್ ಏಕೆ ಅಂಜನಾದ್ರಿ ಅಭಿವೃದ್ಧಿ ಮಾಡಲಿಲ್ಲ. ವ್ಯಕ್ತಿಗತ ರಾಮಭಕ್ತಿಯನ್ನು ನಾನು ಪ್ರಶ್ನೆ ಮಾಡಲ್ಲ. ಪಕ್ಷದ ನಿಲುವು ಏನು ಎಂದು ಹೇಳಲಿ. ಶಿವರಾಜ ತಂಗಡಗಿ ಅವರ ರಾಮಭಕ್ತಿ ಸ್ವಾರ್ಥದ ನೆಲೆಯಿಂದ ಕೂಡಿರೋದು ರಾಷ್ಟ್ರದ ಭಕ್ತಿ ಅಲ್ಲ ಎಂದರು. ‌

ದತ್ತಪೀಠಕ್ಕೆ ಅನ್ಯಾಯ ಮಾಡುವ ಕೆಲಸ ಕಾಂಗ್ರೆಸ್ ಮಾಡಿದೆ. ಕಳೆದ 7 ವರ್ಷದ ಹಿಂದೆ ಭಗವಾಧ್ವಜ ಹಾರಿಸಿದ್ದಾರೆ ಎಂಸು ಕೇಸ್ ಹಾಕಿದ್ದಾರೆ. ಸಿದ್ದರಾ ಮಯ್ಯಗೆ ಕೇಸರಿ ಕಂಡರೆ ಆಗಲ್ಲ ಎಂದು ಗೊತ್ತಾಗಿದೆ. ಪೀಠದ ಆಸ್ತಿಯನ್ನು ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದೇವೆ. ಅಕ್ರಮ ಘೋರಿ ನಿರ್ಮಾಣವಾಗಿದೆ. ಅದನ್ನ ಸ್ಥಳಾಂತರ ಮಾಡಬೇಕು. ಕಂದಾಯ ಇಲಾಖೆಯ ಪ್ರಕಾರ ದತ್ತಪೀಠ ಬೇರೆ, ಬಾಬಾಬುಡನ್ ದರ್ಗಾ ಬೇರೆ.‌ ದತ್ತಪೀಠವನ್ನು ಪೂರ್ಣ ಪ್ರಮಾಣ ದಲ್ಲಿ ಹಿಂದುಗಳ ವಶಕ್ಕೆ ನೀಡಬೇಕು ಎಂದು ಹೋರಾಟ ಮಾಡುತ್ತಿದ್ದೇವೆ.

ಲಕ್ಷ್ಮಣ ಸವದಿ ರಾಮ ಮಂದಿರಕ್ಕೆ ದೇಣಿಗೆ ನೀಡಿದ್ದಾಗಿ ಹೇಳಿಕೊಂಡ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೊಟ್ಟಿದ್ದು ಕೆಟ್ಟಿತೆನಬೇಡ ಎಂದು ಮಾತ್ರ ಸವದಿ ಅವರಿಗೆ ಹೇಳಲು ಬಯಸುತ್ತೇನೆ. ಹಣ ಕೊಟ್ಟ ಆಧಾರದಲ್ಲಿ ಯಾರಿಗೂ ಆಮಂತ್ರಣ ಕೊಟ್ಟಿಲ್ಲ. ದಾನ ಕೊಟ್ಟಿದ್ದು ಹೇಳೋದು ಸೂಕ್ತ ಅಲ್ಲ ಅಂತ ಹಿರಿಯರು ಹೇಳಿದ್ದಾರೆ. ಜನೆವರಿ 22ರ ನಂತರ ನಾನು ಅಯೋಧ್ಯೆಗೆ ಹೋಗುತ್ತಿದ್ದೇನೆ. ಸವದಿ ಅವರೆ ಜೊತೆಗೆ ಹೋಗೊಣ ಬನ್ನಿ ಎಂದು ಆಹ್ವಾನ ನೀಡಿದರು.

ಮಂತ್ರಾಕ್ಷತೆಯೂ ಅನ್ನಭಾಗ್ಯದ ಅಕ್ಕಿ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಕ್ಕಿ ಬೆಳೆದ ರೈತನೇ ನನ್ನದು ಎಂದು ಹೇಳಲ್ಲ. ವಾಸ್ತವದಲ್ಲಿ ಇವರು ಒಂದು ಕೆಜಿ ಅಕ್ಕಿಯನ್ನೂ ಕೊಡುತ್ತಿಲ್ಲ. ರೈತ ಬೆಳೆಯದೆ ಇದ್ದರೆ ನಾನು ಕೊಟ್ಟೆ ಎಂದು ಹೇಳಲು ಆಗುತ್ತಾ? ಎಲ್ಲವೂ ಭಗವಂತ ಕೊಟ್ಟಿದ್ದು‌ ಎಂದು ಸಿ.ಟಿ. ರವಿ ಹೇಳಿದರು.

*

ಶ್ರೀರಾಮನ ಭಂಟ ಹನುಮಂತನ ದರ್ಶನ ಪಡೆದು ನಂತರ ಅಯೋದ್ಯೆಗೆ ಹೋಗಬೇಕು ಎಂಬ ಸಂಕಲ್ಪದೊಂದಿಗೆ ಇಲ್ಲಿಗೆ ಬಂದಿದ್ದೇನೆ. ಉತ್ತರ ಮತ್ತು ದಕ್ಷಿಣ ಎರಡು ಬೇರೆ ಬೇರೆ ಅಲ್ಲ ಒಂದೇ ಎನ್ನುವ ಸಂದೇಶ ರಾಮ ಮತ್ತು ಹನುಮನ ಭಕ್ತಿ. ಈ ಹಿನ್ನೆಲೆ ಇಂದು ಅಂಜನಾದ್ರಿಗೆ ಬೇಟಿ ನೀಡಿ ದರ್ಶನ ಪಡೆದಿದ್ದೇನೆ.

– ಸಿ.ಟಿ.ರವಿ, ಮಾಜಿ ಸಚಿವ