Tuesday, 24th September 2024

Archana Kamath Death: ಗಂಡ ಮದುವೆಯಾಗುತ್ತಾನೆ, ಮಗು ಅನಾಥ: ಅಂಗ ದಾನ ಮಾಡಲು ಹೋಗಿ ಮೃತಪಟ್ಟ ಅರ್ಚನಾ ಬಗ್ಗೆ ನೆಟ್ಟಿಗರ ಬೇಸರ

Archana Kamath Death

ಸಂಬಂಧಿಕರಿಗೆ ಯಕೃತ್ ದಾನ (liver donor) ಮಾಡಲು ಹೋಗಿ ಮಂಗಳೂರಿನ ಉಪನ್ಯಾಸಕಿ (Mangalore Lecturer) ಅರ್ಚನಾ ಕಾಮತ್ ಮೃತಪಟ್ಟ (Archana Kamath Death) ಸುದ್ದಿ ರಾಜ್ಯಾದ್ಯಂತ ಕಳವಳ ಉಂಟು ಮಾಡಿತ್ತು. ಬೇರೊಬ್ಬರ ಜೀವ ಉಳಿಸುವ ಯತ್ನದಲ್ಲಿ 33 ವರ್ಷದ ಅರ್ಚನಾ ಅವರ ಸಾವಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ವೈರಲ್ (Viral News) ಆಗಿದ್ದು, ಸಾಕಷ್ಟು ಮಂದಿಯಲ್ಲಿ ಚರ್ಚೆಯನ್ನು ಉಂಟು ಮಾಡಿದೆ.

ಎಕ್ಸ್ ನಲ್ಲಿ ಅನೇಕರು ಅರ್ಚನಾ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಅನೇಕ ನೆಟ್ಟಿಗರು ಈ ಬಗ್ಗೆ ತಮ್ಮ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದ ಅರ್ಚನಾ ಕಾಮತ್‌, ತಮ್ಮ ಶೇ. 60ರಷ್ಟು ಲಿವರ್‌ ಅನ್ನು ದಾನ ಮಾಡಿದ್ದರು. ಆದರೆ, ಶಸ್ತ್ರಚಿಕಿತ್ಸೆಯ ಬಳಿಕ ಎದುರಾದ ಸಮಸ್ಯೆಗಳಿಂದ ಅವರು ಸಾವನ್ನಪ್ಪಿದ್ದರು. ಬೆಂಗಳೂರಿನಲ್ಲಿ ದಾಖಲಾಗಿದ್ದ 65 ವರ್ಷದ ಸಂಬಂಧಿಗೆ ಲಿವರ್‌ ನೀಡುವ ಉದ್ದೇಶದಿಂದ ಮಂಗಳೂರಿನಲ್ಲಿ 15 ದಿನಗಳ ಹಿಂದೆ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಈ ವೇಳೆ ಅವರ ಶೇ. 60ರಷ್ಟು ಲಿವರ್‌ ಅನ್ನು ಕತ್ತರಿಸಲಾಗಿತ್ತು. ಬಳಿಕ ಲಿವರ್‌ ಸೋಂಕಿಗೆ ಅವರು ತುತ್ತಾಗಿದ್ದರು.

ಸಮಾಜಮುಖಿ ಚಿಂತನೆ ಹೊಂದಿದ್ದ ಅರ್ಚನಾ ಅವರು ಪತಿ ಚೇತನ್‌ ಕಾಮತ್‌, 4 ವರ್ಷದ ಪುತ್ರ ಕ್ಷಿತಿಜ್‌ ಮತ್ತು ತಂದೆ-ತಾಯಿಯನ್ನು ಅಗಲಿದ್ದರು.

ಅರ್ಚನಾ ಅವರ ಸಾವು ಅಂತರ್ಜಾಲದಲ್ಲಿ ಮಿಶ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಕೆಲವರು ಅವರ ಪತಿ ಮತ್ತು ಕುಟುಂಬವನ್ನು “ಸ್ವಾರ್ಥಿಗಳು” ಎಂದು ಟೀಕಿಸಿದ್ದಾರೆ. ಅನೇಕರು ಅರ್ಚನಾ ಅವರು ಸ್ವಇಚ್ಛೆಯಿಂದ ಅತ್ತೆಯ ಸಹೋದರಿಗೆ ಯಕೃತ್ ಭಾಗವನ್ನು ದಾನ ಮಾಡಲು ಮುಂದಾಗಿದ್ದರು ಎಂದು ಹೇಳಿದ್ದಾರೆ. ಇದಕ್ಕೆ ಕಾಮೆಂಟ್ ಮಾಡಿರುವ ಒಬ್ಬರು, ಯಕೃತ್ತು ದಾನ ಮಾಡಲು ತಮ್ಮ ಯುವ ಪತ್ನಿಗೆ ಅವಕಾಶ ನೀಡಿದ ಪತಿಯನ್ನು ದೂಷಿಸಿದ್ದಾರೆ.

ಅರ್ಚನಾ ಅವರ ಸಾವು ದುಃಖಕರವಾಗಿದೆ ಎಂದು ಅನೇಕರು ಹೇಳಿದ್ದು, ಯಕೃತ್ತಿನ ದಾನಿಯಾಗಿ ಅವರಿಗೆ ಅನ್ಯಾಯವಾಗಿದೆ ಎಂದು ಹೇಳಿದ್ದಾರೆ.

ಅವರ ಪತಿಯನ್ನು ಅನೇಕರು ದೂಷಿಸಿದ್ದು, ಅವರು ಯಾವ ರೀತಿಯ ಗಂಡ ಮತ್ತು ಕುಟುಂಬದವರು. ಅಂತಹ ಯುವತಿಯನ್ನು 65 ವರ್ಷದ ಅತ್ತೆಯ ಸಹೋದರಿಗೆ ಲಿವರ್ ನೀಡಲು ಏಕೆ ಅನುಮತಿ ಕೊಟ್ಟರು. ಅದೂ ಅವರು ಚಿಕ್ಕ ಮಗುವನ್ನು ಹೊಂದಿರುವಾಗ ಏಕೆ ಮನವರಿಕೆ ಮಾಡಲಿಲ್ಲ.. ಸ್ವಾರ್ಥಿ ಕುಟುಂಬ ಎಂದು ಪ್ರತಿಭಾ ಸುರೇಶ ಎಂಬವರು ದೂರಿದ್ದಾರೆ.

Bengaluru Woman Murder: ಪ್ರೇಯಸಿಯನ್ನು ಕೊಚ್ಚಿ ಫ್ರಿಜ್‌ನಲ್ಲಿ ತುಂಬಿದ ಪಾತಕಿ ಪಶ್ಚಿಮ ಬಂಗಾಳದಲ್ಲಿ ಕಣ್ಮರೆ

ಯಾವುದೇ ಶಸ್ತ್ರಚಿಕಿತ್ಸೆಯು ಅಪಾಯವಿಲ್ಲದೆ ಬರುವುದಿಲ್ಲ. ಆಕೆಯ ಪತಿ ಮತ್ತೆ ಮದುವೆಯಾಗಬಹುದು ಮತ್ತು ಸಂಗಾತಿಯನ್ನು ಹುಡುಕಬಹುದು. ಆದರೆ ಮಗುವಿಗೆ ತಾಯಿ ಇರುವುದಿಲ್ಲ ಎಂದು ಶಿವ ಮುದ್ಗಿಲ್ ತಿಳಿಸಿದ್ದಾರೆ.
ಮಾನಸಿಕ ಆರೋಗ್ಯ ಮತ್ತು ಮಹಿಳಾ ಸಬಲೀಕರಣದ ಬಗ್ಗೆ ಅರಿವು ಮೂಡಿಸುವ ಸೈಕೋಥೆರಪಿಸ್ಟ್ ಮಾಹೀನ್ ಘನಿ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಇದು ಭಯಾನಕವಾಗಿದೆ. ಮಹಿಳೆಯರಿಂದ ಅಂತ್ಯವಿಲ್ಲದ ಅವಾಸ್ತವಿಕ ನಿರೀಕ್ಷೆಗಳನ್ನು ಮಾಡಲಾಗುತ್ತದೆ. 33 ವರ್ಷ ವಯಸ್ಸಿನವಳು ಹೆಚ್ಚು ವಯಸ್ಸಾದ ಅತ್ತೆಗೆ ತನ್ನ ಯಕೃತ್ತಿನ ಭಾಗವನ್ನು ಏಕೆ ದಾನ ಮಾಡಬೇಕೆಂದು ಎಲ್ಲರೂ ನಿರೀಕ್ಷಿಸಿರಬಹುದು. ಈಗ ಮಗು ತಾಯಿಯಿಲ್ಲದೆ ಅನಾಥವಾಗಿದೆ. ತಾಯಿ ಸಮಾಜಕ್ಕೆ ತ್ಯಾಗಿ ಆಗಿರಬಹುದು. ಆದರೆ ಈ ಸಂಸ್ಕೃತಿ ಬದಲಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.