ಮುಂಬೈ: ಮಹಾರಾಷ್ಟ್ರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಬಾಳಾಸಾಹೇಬ್ ಥೋರಟ್ ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಅವರಿಂದ ತನಗೆ ಅವಮಾನವಾಗಿದೆ ಎಂದು ದೂರಿರುವ ಥೋರಟ್, ಅವರೊಂದಿಗೆ (ಪಟೋಲೆ), ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಳುಹಿಸಿದ್ದ ಪತ್ರದಲ್ಲಿ ಬರೆದಿದ್ದಾರೆ. ಪತ್ರದ ಜತೆಗೆ ರಾಜೀನಾಮೆ ಪತ್ರವನ್ನೂ ಕಳುಹಿಸಿದ್ದಾರೆ.
ಥೋರಟ್ ಅವರು ದೃಢ ನಿಲುವು ತಾಳಿದ್ದು, ತಮ್ಮ ನಿರ್ಧಾರವನ್ನು ಬದಲಿಸುವ ಸಾಧ್ಯತೆ ಇಲ್ಲ ಎಂದು ಮೂಲಗಳು ತಿಳಿಸಿವೆ.
ಬಾಳಾಸಾಹೇಬ್ ಥೋರಟ್ ಅವರ ಸಂಬಂಧಿ ನಾಸಿಕ್ ಪದವೀಧರ ಕ್ಷೇತ್ರದ ಎಂಎಲ್‌ಸಿ ಸುಧೀರ್ ತಾಂಬೆ ಅವರು ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಯಾಗಿದ್ದರೂ ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದ್ದರು. ತಾಂಬೆ ಅವರು ತಮ್ಮ ಮಗ ಸತ್ಯಜಿತ್ ತಾಂಬೆಯನ್ನು ಸ್ವತಂತ್ರವಾಗಿ ಸ್ಪರ್ಧಿಸುವಂತೆ ಮಾಡಿದರು, ಸತ್ಯಜಿತ್ ಅವರು ಚುನಾವಣೆಯಲ್ಲಿ ಗೆದ್ದರು. ಫೆಬ್ರವರಿ 2 ರಂದು ಫಲಿತಾಂಶಗಳನ್ನು ಪ್ರಕಟಿಸ ಲಾಯಿತು.
ಎಂಎಲ್ ಸಿ ಚುನಾವಣೆಯಲ್ಲಿ ಪಕ್ಷ ವಿರೋಧ ಚಟುವಟಿಕೆ ನಡೆಸಿದ್ದ ಸುಧೀರ್ ತಾಂಬೆ ಹಾಗೂ ಸತ್ಯಜಿತ್ ತಾಂಬೆ ಅವರನ್ನು ಕಾಂಗ್ರೆಸ್ ಅಮಾನತುಗೊಳಿಸಿತ್ತು.
ರಾಜ್ಯ ಕಾಂಗ್ರೆಸ್ ನಾಯಕತ್ವದಿಂದ ನನಗೆ ಅವಮಾನವಾಗಿದೆ. ತಾಂಬೆ ವಿಚಾರದಲ್ಲಿ ನನ್ನ ಕುಟುಂಬದ ವಿರುದ್ಧ ಹೇಳಿಕೆ ನೀಡಲಾಗುತ್ತಿದೆ ಎಂದು ಥೋರಟ್ ಪತ್ರದಲ್ಲಿ ಬೇಸರ ವ್ಯಕ್ತಪಡಿಸಿದ್ದರು.