ಮಂಗಳೂರು: ಕರಾವಳಿಯಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ಶ್ರೀಮತಿ ಶೆಟ್ಟಿ ಕೊಲೆ (Srimathi Shetty Murder case) ಪ್ರಕರಣದ ಪ್ರಮುಖ ಆರೋಪಿಗಳಿಗೆ ಮಂಗಳೂರಿನ (Mangalore news) 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ (Life sentence) ನೀಡಿದೆ.
ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಜೋನಸ್ ಸ್ಯಾಮ್ಸನ್ ಮತ್ತು ಪತ್ನಿ ವಿಕ್ಟೋರಿಯಾ ಅವರ ಆರೋಪ ಸಾಬೀತಾಗಿತ್ತು. ಇದೀಗ ಆರೋಪಿ ದಂಪತಿಗೆ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಜೀವಾವಧಿ ಶಿಕ್ಷೆ ಮತ್ತು 25 ಸಾವಿರ ರು. ದಂಡ ವಿಧಿಸಿದ್ದಾರೆ. ಕೊಲೆಗೆ ಸಹಕರಿಸಿದ್ದ ಮೂರನೇ ಆರೋಪಿ ರಾಜುಗೆ ಆರುವರೆ ತಿಂಗಳು ಸಾದಾ ಸಜೆ ಮತ್ತು 5000 ರು. ದಂಡ ವಿಧಿಸಲಾಗಿದೆ. ರಾಜು ಈಗಾಗಲೇ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಿದ್ದಾನೆ.
ಶ್ರೀಮತಿ ಶೆಟ್ಟಿ ಅತ್ತಾವರ ಸಮೀಪ ಎಲೆಕ್ಟ್ರಾನಿಕ್ಸ್ ಅಂಗಡಿ ಇಟ್ಟುಕೊಂಡಿದ್ದರು. ಅಲ್ಲದೆ ಚಿಟ್ ಫಂಡ್ ವ್ಯವಹಾರ ನಡೆಸುತ್ತಿದ್ದು, ಕೊಲೆ ಆರೋಪಿಗಳಲ್ಲಿ ಜೋನಸ್ ಸ್ಯಾಮ್ಸನ್ ಕುರಿಚಿಟ್ ಫಂಡ್‌ನಲ್ಲಿ ಎರಡು ಸದಸ್ಯತ್ವ ಹೊಂದಿದ್ದ. ಅವಧಿಗೆ ಮೊದಲೇ ಎರಡೂ ಸದಸ್ಯತ್ವದ ಹಣವನ್ನು ಪಡೆದುಕೊಂಡಿದ್ದ. ಮಾಸಿಕ ಕಂತು ಪಾವತಿಸಲು ವಿಫಲನಾಗಿದ್ದ. ಕಂತು ಪಾವತಿಸುವಂತೆ ಶ್ರೀಮತಿ ಶೆಟ್ಟಿ ಒತ್ತಾಯಿಸಿದ್ದರು.
2019 ಮೇ 11 ರಂದು ಶ್ರೀಮತಿ ಶೆಟ್ಟಿ ಹಣ ಕೇಳಲು ಸ್ಯಾಮ್ಸನ್ ಮನೆಗೆ ತೆರಳಿದ್ದರು. ಈ ವೇಳೆ ನಡೆದ ಗಲಾಟೆಯಲ್ಲಿ ಸ್ಯಾಮ್ಸನ್, ಶ್ರೀಮತಿ ಶೆಟ್ಟಿ ಅವರ ಮೇಲೆ ಮರದ ತುಂಡಿನಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ನೆಲಕ್ಕೆ ಬಿದ್ದ ಶ್ರೀಮತಿ ಶೆಟ್ಟಿ ಅವರನ್ನು ಕೊಲೆ ಮಾಡಿ ಅವರ ಮೈಮೇಲಿದ್ದ ಚಿನ್ನಾಭರಣ ದೋಚಿ ಶವವನ್ನು ಮನೆಯಲ್ಲೇ ತುಂಡು ತಂಡು ಮಾಡಿ ನಗರದ ವಿವಿಧೆಡೆ ಎಸೆದಿದ್ದ. ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಮಹೇಶ್ ಎಂ. ಅವರು ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವೆನ್ಲಾಕ್ ಆಸ್ಪತ್ರೆಯ ಫೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿ ಡಾ. ಜಗದೀಶ್ ರಾವ್ ಶವಪರೀಕ್ಷೆ ನಡೆಸಿ ವರದಿ ನೀಡಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಇಲ್ಲಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್.ಎಸ್. ಅವರು, ಈ ಮೂವರು ದೋಷಿತರಿಗೆ ಶಿಕ್ಷೆ ಘೋಷಿಸಿದ್ದಾರೆ. ಸರ್ಕಾರದ ಪರವಾಗಿ ಜುಡಿತ್ ಓಲ್ಗಾ ಮಾರ್ಗರೇಟ್ ಕ್ರಾಸ್ತಾ ಅವರು ವಾದ ಮಂಡಿಸಿದ್ದರು.
ಇದನ್ನೂ ಓದಿ: Gujarat Horror: 6 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ, ಬಳಿಕ ಉಸಿರುಗಟ್ಟಿಸಿ ಕೊಲೆಗೈದ ಪಾಪಿ ಪ್ರಿನ್ಸಿಪಾಲ್