Thursday, 12th December 2024

ದಲಿತ ಕುಟುಂಬಕ್ಕೆ ದೇವಸ್ಥಾನದ ಪ್ರವೇಶ ನಿರ್ಬಂಧ: ವಿಡಿಯೋ ವೈರಲ್‌

ಗುಬ್ಬಿ: ದೇವಸ್ಥಾನದ ಪ್ರವೇಶ ನಿರ್ಬಂಧಿಸಿದ ಅರ್ಚಕ ತಾಲೂಕಿನ ನಿಟ್ಟೂರು ಗ್ರಾಮದ ಶ್ರೀ ಮುಳಕಟ್ಟಮ್ಮ ದೇವಾಲಯದಲ್ಲಿ ಈ ಘಟನೆ ನಡೆದಿದ್ದು ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಸಂದರ್ಭದಲ್ಲಿ ದಲಿತ ಕುಟುಂಬಕ್ಕೆ ದೇವಾಲಯ ದ ಅರ್ಚಕ ಪ್ರವೇಶ ನಿರಾಕರಿಸಿದ್ದಾನೆ. ನಂತರ ಇಬ್ಬರ  ಪರಸ್ಪರ ವಾದ ವಿವಾದ ನಡೆದಿದ್ದು ಅರ್ಚಕರು ಪೂಜೆ ಮಾಡದೆ  ಪೂಜೆ ಸಾಮಾನು ವಾಪಸ್ಸು ಕೊಟ್ಟಿರುವ ಘಟನೆ ನಡೆದಿದೆ ಎನ್ನಲಾಗಿದೆ.

ಈ ಘಟನೆಯಿಂದ ನೊಂದ ಅಮಾಯಕ ದಲಿತ ಕುಟುಂಬವು ಡಿಎಸ್ಎಸ್ ಸಂಘಟನೆಯ ಪದಾಧಿಕಾರಿಗಳ ಜೊತೆಯಲ್ಲಿ ಗುಬ್ಬಿ ವೃತ್ತ ನಿರೀಕ್ಷಕ ಆರಕ್ಷಕರ ಕಚೇರಿಗೆ ದೂರು ಸಲ್ಲಿಸಲು ಬಂದಾಗ ವೃತ ಆರಕ್ಷಕರಾದ ನದಾಫ್ ಅವರ ಸಮ್ಮುಖದಲ್ಲಿ ದೇವಸ್ಥಾನದ ಟ್ರಸ್ಟ್ ಪದಾಧಿ ಕಾರಿಗಳನ್ನು ಕಚೇರಿಗೆ ಕರೆಸಿ  ಸಂಧಾನ ಮಾಡಿದ್ದಾರೆ ಎನ್ನಲಾಗಿದೆ.
*
ನಮ್ಮ ಕಚೇರಿಗೆ ಎರಡು ಕಡೆಯವರನ್ನು ಕರೆಸಿ, ಈ ರೀತಿ ಘಟನೆಗಳು ಮತ್ತೆ ಮರುಕಳಿಸ ದಂತೆ ಎಚ್ಚರಿಕೆ ನೀಡಿದ್ದು , ದೇವಸ್ಥಾನದ ಟ್ರಸ್ಟ್ ನ ಪದಾಧಿಕಾರಿಗಳ ಕಡೆಯಿಂದ ಹೇಳಿಕೆ ಯನ್ನು ಬರೆಸಿಕೊಳ್ಳಲಾಗಿದೆ.
ನದಾಫ್ ಸರ್ಕಲ್ ಇನ್ಸ್ ಪೆಕ್ಟರ್ ಗುಬ್ಬಿ

ಈ ಘಟನೆಯ ಬಗ್ಗೆ ನಮಗೆ ಮಾಹಿತಿ ತಿಳಿದಿರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಈ ಘಟನೆಯ ವಿಡಿಯೋ ಹರಿದಾಡಿದ್ದರಿಂದ ಮಾಹಿತಿ ತಿಳಿದು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇನೆ.
ರಾಮಣ್ಣ. ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಗುಬ್ಬಿ

ಈ ಘಟನೆಯ ಬಗ್ಗೆ ನಮ್ಮ ಗಮನಕ್ಕೆ ಬಂದಿದ್ದು, ಸ್ಥಳಕ್ಕೆ ನಮ್ಮ ಇಲಾಖೆಯ ಅಧಿಕಾರಿಗಳನ್ನು ಕಳುಹಿಸಲಾಗಿದೆ. ನಂತರ ವರದಿ ಪಡೆಯುತ್ತೇನೆ ಹಾಗೂ ಈಗಾಗಲೇ ವೃತ ಆರಕ್ಷಕರ ಕಚೇರಿಯಲ್ಲಿ ರಾಜೀ ಮಾಡಲಾಗಿದ್ದು ಘಟನೆ ನಡೆದ ದೇವಾಲಯದಲ್ಲಿ ಎಲ್ಲಾ ಸಾರ್ವಜನಿಕರಿಗೂ ಪ್ರವೇಶವಿದೆ ಎಂಬ ನಾಮಪಲಕವನ್ನು ಹಾಕಿಸಲಾಗುತ್ತದೆ.
– ಆರತಿ. ಬಿ ತಹಶೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿಗಳು