Thursday, 19th September 2024

ಸರಕಾರ ಜನಗಣತಿಯಲ್ಲಿ ಮಾದಿಗ ಎಂದು ನಮೂದಿಸಲು ಕ್ರಮ ವಹಿಸಲಿ ದಂಡೋರ ಆಗ್ರಹ

ಚಿಕ್ಕಬಳ್ಳಾಪುರ: ರಾಜ್ಯದ ಪರಿಶಿಷ್ಟಜಾತಿ ಪಟ್ಟಿಯಲ್ಲಿ ಬರುವ 101 ಜಾತಿಗಳ ಪೈಕಿ ಮಾದಿಗ ಸಮುದಾಯವು ಅತ್ಯಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ  ಅಸ್ಪೃಷ್ಯ  ಸಮುದಾಯವಾಗಿದೆ. ಇದನ್ನು ಅನೇಕ ಕಡೆ ಅನೇಕ ರೀತಿಯಲ್ಲಿ ಕರೆಯುವ ಪರಿಪಾಟ ಇರುವುದರಿಂದ ನಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮುಂದೆ ನಡೆಯುವ ಜನಗಣತಿಯಲ್ಲಿ ಸರಕಾರ ನಮ್ಮ ಸಮುದಾಯವನ್ನು ಮಾದಿಗ ಎಂದು ನಮೂದಿಸಲು ಅವಕಾಶ ಮಾಡಿಕೊಡಬೇಕು ಎಂದು ದಸಂಸ ರಾಜ್ಯ ಸಂಚಾಲಕ ಬಾಲ ಕುಂಟಹಳ್ಳಿ ಗಂಗಾಧರ್ ಒತ್ತಾಯಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸುವ ಸಂದರ್ಭದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದರು.

ಹಾವನೂರು ಆಯೋಗದ ವರದಿಯಂತೆ ಮಾದಿಗ ಸಮುದಾಯವು ರಾಜ್ಯದಲ್ಲಿ ೫೭.೨ರ ಷ್ಟಿದೆ. ಕರ್ನಾಟಕದ ಹಳೇ ಮೈಸೂರು ಪ್ರಾಂತ್ಯ,ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಸೇರಿ ೧೬ ಜಿಲ್ಲೆಗಳಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಮಾದಿಗ ಸಮುದಾಯದ ಜನರಿದ್ದಾರೆ.

ರಾಜ್ಯ ಸರಕಾರ ಒಳಮೀಸಲು ಜಾರಿಗೆ ಸಂಪುಟದ ಉಪಸಮಿತಿ ರಚನೆ ಮಾಡಿರುವುದನ್ನು  ಮಾದಿಗ ಮೀಸಲಾತಿ ಹೋರಾಟ ಸಮಿತಿ ಸ್ವಾಗತಿಸು ತ್ತದೆ.ಇದಕ್ಕೆ ಪೂರಕವಾಗಿ ಜನಗಣತಿ ಯಲ್ಲಿ ಮಾದಿಗ ಎಂದು ನಮೂದಿಸಲು ಅವಕಾಶ ಮಾಡಿಕೊಟ್ಟರೆ ನಮ್ಮ ಸಮುದಾಯದ ಹಿತದೃಷ್ಟಿಯಿಂದ ಒಳಿತಾಗಲಿದೆ ಎಂದು ತಿಳಿಸಿದರು.

ಮಾದಿಗ ಮೀಸಲಾತಿ ಹೋರಾಟ ಸಮಿತಿ ಗೌರವಾಧ್ಯಕ್ಷ ಎಂ.ಮುನಿಕೃಷ್ಣಯ್ಯ ಮಾತನಾಡಿ ಕರ್ನಾಟಕ ಸರಕಾರವು ಪರಿಶಿಷ್ಟ ಜಾತಿಗಳ ಅಭಿವೃದ್ಧಿಗೆ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಪ್ರಮುಖವಾಗಿ ಜಾತಿಗಳ ಹೆಸರಿನಲ್ಲಿ ಅಭಿವೃದ್ಧಿ ನಿಗಮ ಸ್ಥಾಪಿಸಿ ನಿರ್ಧಿಷ್ಟ ಜಾತಿ ಅಥವಾ ಗುಂಪಿಗೆ ಅನುದಾನ ಮಿಸಲುಗೊಳಿಸಿರುವುದು ಒಳ್ಳೆಯದಾಗಿದೆ. ಈ ಸೌಲಭ್ಯಗಳನ್ನು ಪಡೆಯಲು, ನಮ್ಮ ಜನಸಂಖ್ಯೆಯನ್ನು ನಿರ್ಧಿಷ್ಟವಾಗಿ ತಿಳಿಯಲು ಅನುಕೂಲವಾಗುವಂತೆ ಪರಿಶಿಷ್ಟ ಜಾತಿಗಳ ಉಪ ಕಾಲಂನಲ್ಲಿ ಆದಿ ಕರ್ನಾಟಕ, ಆದಿ ಆಂದ್ರ, ಆದಿ ದ್ರಾವಿಡ ಬದಲಿಗೆ ಮಾದಿಗ ಎಂದು ಜಾತಿ ಪ್ರಮಾಣ ಪತ್ರ ನೀಡುವ ಮೂಲಕ ಎಲ್ಲಾ ಗೊಂದಲಗಳಿಗೆ ಪರಿಹಾರ ಒದಗಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ಎಂಆರ್‌ಹೆಚ್‌ಎಸ್ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ಮಾತಂಗ ಫೌಂಡೇಷನ್ ಜಿಲ್ಲಾಧ್ಯಕ್ಷ ವೆಂಕಟೇಶ್, ಪರಸದಿನ್ನೆ ಮೂರ್ತಿ, ನಾಯನಹಳ್ಳಿ ನರಸಿಂಹಪ್ಪ, ಕದಿರಪ್ಪ, ಗಂಗಾಧರ್ ಬಿಎಂ,ಗ0ಗಾಧರ್ ಬಿ. ರಮಣ್ ಅಕೇಶ್,ಜಿಲ್ಲಾ ಸಮಿತಿಯ ವೇಣು, ಕೃಷ್ಣಪ್ಪ,ಶೆಟ್ಟಿಗೆರೆ ಮುನಿಸ್ವಾಮಿ, ಬೀಚಗಾನಹಳ್ಳಿ ನಾರಾಯಣಸ್ವಾಮಿ, ಚೆನ್ನರಾಯಪ್ಪ,ಚೌಡಯ್ಯ,ಆಂಜಿನಪ್ಪ,ರಾಜೇ0ದ್ರ ಪ್ರಸಾದ್, ಪಿಳ್ಳಆಂಜಿನಪ್ಪ ಮತ್ತಿತರರು ಇದ್ದರು.

 

Read E-Paper click here