Wednesday, 11th December 2024

ಒಳಮೀಸಲಾತಿಗೆ ಆಗ್ರಹಿಸಿ ದಸಂಸ ಪ್ರತಿಭಟನೆ ಸೆ.9ಕ್ಕೆ

ತುಮಕೂರು: ಸುಪ್ರೀಂ ಕೋರ್ಟ್ ಏಳು ನ್ಯಾಯಾಧೀಶರ ತೀರ್ಪಿನಂತೆ ರಾಜ್ಯ ಸರಕಾರ ಪರಿಶಿಷ್ಟರ ಒಳಮೀಸಲಾತಿ ಅನುಷ್ಠಾನಗೊಳಿಸಲು ಆಗ್ರಹಿಸಿ ಸೆಪ್ಟಂಬರ್ ೦೯ರಂದು ದಸಂಸ ವತಿಯಿಂದ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಎನ್.ಮೂರ್ತಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಪರಿಶಿಷ್ಟರ ಮೀಸಲಾತಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ೧೦೧ ಜಾತಿಗಳಲ್ಲಿ ಮೀಸಲಾತಿ ಸಮನಾಗಿ ಹಂಚಿಕೆಯಾಗಿಲ್ಲ ಎಂಬ ಆತಂಕ ಹಾಗೂ ಅಸಹನೆಯಿಂದ ೩ ದಶಕ ಗಳಿಂದ ರಾಜ್ಯಾದ್ಯಾಂತ ನಿರಂತರ ಹೋರಾಟಗಳ ಫಲವಾಗಿ ಹಾಗೂ ಹಲವಾರು ಹೈಕೋರ್ಟು ಮತ್ತು ಸುಪ್ರಿಂಕೋರ್ಟಿನ ಐದು ಜನ ನ್ಯಾಯಾಧೀಶರ ಎರಡು ತೀರ್ಪುಗಳನ್ನು ಆಧರಿಸಿ ನಡೆದ ೭ ನ್ಯಾಯಾಧೀಶರ ಸಂವಿಧಾನ ಪೀಠ ಒಳಮೀಸಲಾತಿ ಜಾರಿಗೊಳಿಸುವ ಸಂಪೂರ್ಣ ಅಧಿಕಾರವನ್ನು ರಾಜ್ಯ ಸರಕಾರಗಳಿಗೆ ನೀಡಿ ತಿಂಗಳು ಕಳೆಯುತ್ತಾ ಬಂದಿದ್ದರೂ ಇದುವರೆಗೂ ರಾಜ್ಯ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಸರಕಾರ ಕೂಡಲೇ ಯಾವುದೇ ಸಬೂಬು ಹೇಳದೆ ಒಳಮೀಸಲಾತಿ ಜಾರಿಗೊಳಿಸಬೇಕೆಂಬುದು ದಸಂಸದ ಆಗ್ರಹವಾಗಿದೆ ಎಂದರು.
ಚುನಾವಣಾ ಪ್ರಾಣಾಳಿಕೆಯಲ್ಲಿ ಒಳಮೀಸಲಾತಿ ಜಾರಿ ಮಾಡುವ ಭರವಸೆ ನೀಡಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆಗಲಿ,ಸಮಾಜ ಕಲ್ಯಾಣ ಸಚಿವ ಡಾ.ಮಹದೇವಪ್ಪ, ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ ಖರ್ಗೆ ಸೇರಿದಂತೆ ಯಾವೊಬ್ಬ ದಲಿತ ಶಾಸಕರು ಒಳಮೀಸಲಾತಿ ವಿಚಾರದಲ್ಲಿ ತುಟಿ ಬಿಚ್ಚಿಲ್ಲ.ಇದು ಇವರ ಸೋಗಲಾಡಿತನಕ್ಕೆ ಸಾಕ್ಷಿಯಾಗಿದೆ.ಕೂಡಲೇ ಮೀಸಲಾತಿಯಿಂದ ಆಯ್ಕೆಯಾಗಿರುವ ಎಲ್ಲಾ ಶಾಸಕರು ಶಾಸಕರಾಗಿ ಮುಂದುವರೆಯುವ ನೈತಿಕತೆ ಹೊಂದಿಲ್ಲ.ಹಾಗಾಗಿ  ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ದಸಂಸ ಒತ್ತಾಯಿಸುತ್ತಿದೆ.ಅಂಬೇಡ್ಕರ್ ಹೇಳಿದಂತೆ ಇವರು ಬಾಯಿಕಟ್ಟಿದ, ಬೆಲ್ಟ್ ಹಾಕಿದ ನಾಯಿ ಗಳಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೂಲ ಸಂವಿಧಾನದ ಅನುಚ್ಛೇದ ೧೫(೪) ಮತ್ತು ೧೬(೪) ರಂತೆ ಅನುಸೂಚಿತ ಜಾತಿ ಅನುಸೂಚಿತ ಪಂಗಡಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಕೊಡಮಾಡಿದ ಮೀಸಲಾತಿಯು ಮೂಲಭೂತ ಹಕ್ಕಾಗಿದ್ದು,ಕೆನೆ ಪದರಕ್ಕೆ ಅವಕಾಶವೇ ಇಲ್ಲ. ಸಂವಿಧಾನದ ವಿಧಿ ೧೫(೪) ಮತ್ತು ೧೬ (೪) ಸಮಕಾಲೀಕ ಪಟ್ಟಿ ಅಡಿಯಲ್ಲಿ ಬರುತ್ತದೆ. ಹಾಗಾಗಿ ಕೇಂದ್ರ ಅಳವಡಿಸಿಕೊಂಡ ನೀತಿಗಳನ್ನೇ ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅನ್ವಯಿಸುತ್ತದೆ. ಹೀಗಾಗಿ ಈಗಾಗಲೇ ಸುಪ್ರೀಂಕೋರ್ಟಿನ ಆದೇಶವನ್ನು ಸ್ವಾಗತಿಸಿದ ಕೇಂದ್ರ ಸರಕಾರ ಪರಿಶಿಷ್ಟ ಜಾತಿ,ಪರಿಶಿಷ್ಟ ವರ್ಗಗಳಿಗೆ ಕೆನೆ ಪದರ ಮೀಸಲಾತಿ ಅಳವಡಿಸು ವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಕರ್ನಾಟಕ ರಾಜ್ಯ ಸರಕಾರ ಯಾವುದೇ ಮೀನಾಮೇಷ ಎಣ ಸದೆ ಯಾವುದೇ ವಿಳಂಬ ನೀತಿ ಅನುಸರಿಸದೇ ಈ ಕೂಡಲೇ ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಅನುಷ್ಠಾನ ಗೊಳಿಸಲು ದ.ಸಂ.ಸ. ಆಗ್ರಹಿಸುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ದಸಂಸ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ,  ಎ.ರಂಜನ್, ಹಟ್ಟಪ್ಪ, ಪರಮೇಶ್, ಚಿ.ರಾಜು ಮತ್ತಿತರರು ಉಪಸ್ಥಿತರಿದ್ದರು.