ಅಕ್ಟೋಬರ್ 4 ರಿಂದ ಐನಾಕ್ಸ್ ಹಾಗೂ ಡಿಆರ್ ಸಿ ಚಿತ್ರ ಮಂದಿರದಲ್ಲಿ ಸಿನಿಮಾ ಪ್ರದರ್ಶನ
ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಚಲನತ್ರ ಉಪಸಮಿತಿ ವತಿಯಿಂದ ದಸರಾ ಚಲನ ಚಿತ್ರೋತ್ಸವವನ್ನು ಆಯೋಜನೆ ಮಾಡಲಾಗಿತ್ತಿದ್ದು, ಅಕ್ಟೋಬರ್ ರಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾ ನಿಲಯದ (KSOU) ಘಟಿಕೋತ್ಸವ ಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಘನ ಉಪಸ್ಥಿತಿಯಲ್ಲಿ ಉದ್ಘಾಟನೆ ನೆರವೇರಲಿದೆ.
ಉದ್ಘಾಟನೆ ಕಾರ್ಯಕ್ರಮದಲ್ಲಿ ಕನ್ನಡ ಚಲನಚಿತ್ರದ ನಾಯಕ ನಟರಾದ ರಮೇಶ್ ಅರವಿಂದ್, ಡಾಲಿ ಧನಂಜಯ, ‘ಕಾಂತಾರ’ ಖ್ಯಾತಿಯ ಸಪ್ತಮಿ ಗೌಡ, ಶರಣ್ಯ ಶೆಟ್ಟಿ, ಅಕ್ಷಿತ ಬೋಪಯ್ಯ ಭಾಗವಹಿಸಿ ಕಾರ್ಯಕ್ರಮದ ಮೆರಗು ಹೆಚ್ಚಿಸಲಿದ್ದಾರೆ.
ಬೆಳಿಗ್ಗೆ 11.00 ಗಂಟೆಯಿಂದ ಸಾಧುಕೋಕಿಲಾ ಹಾಗೂ ತಂಡದವರಿಂದ ಸಂಗೀತ ಮತ್ತು ಮನರಂಜನೆ ಕಾರ್ಯಕ್ರಮ ನಡೆಯಲಿದೆ. ಕನ್ನಡದ ಪ್ರಖ್ಯಾತ ನಟ, ನಿರ್ದೇಶಕ, ಹಾಗೂ ನಿರ್ಮಾಪಕ, ಕನ್ನಡದ ಮುತ್ತು – ಕರ್ನಾಟಕ ಕುಳ್ಳ ದಿವಂಗತ ದ್ವಾರಕೀಶ್ ರವರ ಸವಿನೆನಪಿನಲ್ಲಿ ಈ ಬಾರಿಯ ಚಲನಚಿತ್ರೋತ್ಸವ ಹಮ್ಮಿಕೊಳ್ಳಲಾಗಿದ್ದು, ಅವರ ಪುತ್ರ ಶ್ರೀ ಯೋಗಿಶ್ ರವರಿಗೆ ಗೌರವ ಸಮರ್ಪಣೆ ಹಾಗೂ ದ್ವಾರಕೀಶ್ ಅಭಿನಯದ ಚಲನಚಿತ್ರಗಳನ್ನು ಪ್ರದರ್ಶಿಸಲಾಗು ತ್ತಿದೆ.
ಸದಭಿರುಚಿಯ ಸಾಮಾಜಿಕ ಸಂದೇಶ ನೀಡುವ ಹಾಗೂ ರಾಷ್ಟ್ರ – ಅಂತರಾಷ್ಟ್ರ ಮಟ್ಟದ ಪ್ರಶಸ್ತಿ ಪುರಸ್ಕೃತ ಚಲನಚಿತ್ರಗಳನ್ನು ಅಕ್ಟೋಬರ್-4 ರಿಂದ 10 ರವರೆಗೆ ಬಿ.ಎಂ ಹ್ಯೆಬಿಟೆಡ್ ಮಾಲ್‌ನ DRC ಸಿನಿಮಾಸ್‌ನಲ್ಲಿ ಒಂದು ಪರದೆ ಹಾಗೂ ಮಾಲ್ ಆಫ್ ಮೈಸೂರಿನ ಐನಾಕ್ಸ್ ಸಿನಿಮಾಸ್‌ನಲ್ಲಿ 03 ಪರದೆಗಳಲ್ಲಿ ಪ್ರದರ್ಶಿಸಲಾಗುವುದು. ಮಕ್ಕಳ ಚಿತ್ರಗಳು ಹಾಗೂ ಮಹಿಳಾ ನಿರ್ದೇಶನದ ಚಿತ್ರಗಳಿಗೆ ಪ್ರಾಧಾನ್ಯತೆ ನೀಡಲಾಗಿದೆ.
Old is gold ಶೀರ್ಷಿಕೆ ಯಲ್ಲಿ ಡಾ| ರಾಜ್ ಕುಮಾರ್. ಡಾ ವಿಷ್ಣುವರ್ಧನ್, ಡಾ. ಅಂಬರೀಷ್, ಶಂಕರ್‌ನಾಗ್ ಹಾಗೂ ಪುನೀತ್ ರಾಜಕು ಮಾರ್, ರಮೇಶ್ ಅರವಿಂದ, ಶ್ರೀನಾಥ್, ಶಿವವರಾಜ್ ಕುಮಾರ್, ರವಿಚಂದ್ರನ್ ಹಾಗೂ ದಿ|| ಅಪರ್ಣ ಸಿನಿಮಾ ಗಳನ್ನು ವೀಕ್ಷಿಸಬಹುದು.
ಈ ಬಾರಿ ವಿಶೇಷವಾಗಿ ಭಾರತದ ಅಧಿಕೃತ ಭಾಷೆಗಳ ಜೊತೆಗೆ ಬುಡಕಟ್ಟು ಭಾಷೆಗಳಾದ ಬೊಡೊ, ಜನ್ಸಿಯ ಹಾಗೂ ಕರ್ನಾಟಕ ಕೊಡವ ಮತ್ತು ಅರೆಭಾಷೆಯ ಚಲನಚಿತ್ರಗಳು ಪ್ರದರ್ಶನವಾಗುತ್ತಿವೆ. ಒಟ್ಟಾರೆ ಈ ಬಾರಿ 112 ಚಲನ ಚಿತ್ರಗಳನ್ನು ವೀಕ್ಷಿಸುವ ಅವಕಾಶ ಚಿತ್ರ ರಸಿಕರಿಗೆ ದೊರೆಯಲಿದೆ.
ಮಾಲ್ ಆಫ್ ಮೈಸೂರಿನಲ್ಲಿ ಸಿನಿ-ಫೋಟೋ ಪ್ರದರ್ಶನ
ಈ ಬಾರಿ ವಿಶೇಷವಾಗಿ ಸಿನಿ ಪೋಟೋ ಪ್ರದರ್ಶನವನ್ನು ಐನಾಕ್ಸ್ ಸಿನಿಮಾಸ್ ಹೊರ ಆವರಣದಲ್ಲಿ ಅಕ್ಟೋಬರ್ 4 ರಿಂದ ಅಕ್ಟೋಬರ್ 10 ರವರೆಗೆ ಆಯೋಜನೆ ಮಾಡಲಾಗಿದ್ದು, ಈ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ‘ಕಿರುಗೂರಿನ ಗಯ್ಯಾಳಿಗಳು’ ಖ್ಯಾತಿಯ ನಿರ್ದೇಶಕಿ ಸುಮನಾ ಕಿತ್ತೂರು ರವರು ಭಾಗವಹಿಸಲಿದ್ದಾರೆ.
ಅತ್ಯುತ್ತಮ ಕಿರುಚಿತ್ರಗಳ ಪ್ರದರ್ಶನ
ಯುವಜನಾಂಗಕ್ಕೆ ಪ್ರೋತ್ಸಾಹ ನೀಡಲು ಕಿರುಚಿತ್ರ ಸ್ಪರ್ಧೆ ಏರ್ಪಡಿಸಲಾಗಿದ್ದು, ಆಯ್ಕೆಗೊಂಡ ಅತ್ಯುತ್ತಮ 10 ಕಿರು ಚಿತ್ರಗಳನ್ನು ಸಹ ದೊಡ್ಡ ಪರದೆಯಲ್ಲಿ ಪ್ರದರ್ಶಿಸಲಾಗುವುದು. ಅಕ್ಟೋಬರ್ 8 ರಂದು ಕಿರುಚಿತ್ರಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ಹಾಗೂ ಅತ್ಯುತ್ತಮ ಸಂಕಲನಗಾರ ಹಾಗೂ ಅತ್ಯುತ್ತಮ ಛಾಯಾಗ್ರಾಹಕ ರಿಗೂ ಬಹುಮಾನ ವಿತರಣೆ ಮಾಡಲಿದ್ದು, ಈ ಕಾರ್ಯಕ್ರಮದಲ್ಲಿ ಖ್ಯಾತ ನಟರಾದ ಶ್ರೀ ಮಂಡ್ಯ ರಮೇಶ್ ರವರು ಭಾಗವಹಿಸಲಿದ್ದಾರೆ.
ಇದನ್ನೂ ಓದಿ: Mysuru Dasara 2024: ಮೈಸೂರು ದಸರಾ ನೋಡಲು ಹೋದಾಗ ಈ ಸ್ಥಳಗಳಿಗೆ ತಪ್ಪದೇ ಭೇಟಿ ನೀಡಿ!