ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಚಾಮುಂಡಿಬೆಟ್ಟದ ಸನ್ನಿಧಿಯಲ್ಲಿ ಸಂಗೀತ ನಿರ್ದೇಶಕ, ನಾದಬ್ರಹ್ಮ ಹಂಸಲೇಖ ಭಾನುವಾರ ಚಾಲನೆ ನೀಡಿದ್ದಾರೆ.
ಕರ್ನಾಟಕದ ಏಕೀಕರಣಕ್ಕೆ ಇದೀಗ 50 ವರ್ಷ ತುಂಬಿದೆ. ನನ್ನ ಕಲಾ ಕಾಯಕಕ್ಕೂ 50 ವರ್ಷ ತುಂಬಿದೆ. ಇಂದು ನನಗೆ ಸಿಕ್ಕಿರುವ ಈ ಅವಕಾಶ ಬಹಳ ಬೆಲೆ ಬಾಳುವಂತದ್ದು. ಸಾವಿರ ಮೆಟ್ಟಿಲು ಹತ್ತಿ ಇಲ್ಲಿಯವರೆಗೆ ಬಂದಿದ್ದೇನೆ. ಈ ಬೆಟ್ಟ, ಈ ಹಬ್ಬ, ಈ ದೀಪ ಹಚ್ಚೋದು ಪುಣ್ಯದ ಕೆಲಸ. ಈ ಸಂಭ್ರಮಕ್ಕೆ ನಾನು ಯಾರನ್ನು ನೆನೆಯಲಿ ಎಂದು ತಿಳಿಸಿದರು.
ನಾನು ಹಚ್ಚಿದ್ದು ಕನ್ನಡದ ದೀಪ. ಈ ದೀಪ ಹಚ್ಚಲು ನನಗೆ ಇಡೀ ನಾಡಿನ ಆಶಯ ಇದೆ. ದಸರಾ ಒಂದು ಜೀವಂತ ಮಹಾಕಾವ್ಯ. ವೀರತೆಂಕಣದ ಮಹಾಕಾವ್ಯ ಇದು. ಕನ್ಮಡ ನಮ್ಮ ಶೃತಿ ಆಗಬೇಕು. ಆಳಿದರೆ ಕೃತಿ ಯಂತಿರಬೇಕು. ಕನ್ನಡದ ಭಾಷೆಗೆ ಮಿತಿ ಇದೆ. ಆದರೆ ಅದರ ಭಾವಕ್ಕೆ ಎಲ್ಲಿ ಮಿತಿ ಇದೆ. ದೆಹಲಿ ನಮಗೆ ಬೇಕು. ದೆಹಲಿಗೂ ಕನ್ನಡ ಬೇಕು ಎಂದರು.
ಆದರೆ, ದೆಹಲಿಗೆ ಯಾಕೋ ಕನ್ನಡ ಬೇಡವಾಗಿದೆ. ಕನ್ನಡ ವಿಶ್ವಭಾಷೆ ಆಗಬೇಕು. ಅಭಿವೃದ್ಧಿ ಶಾಂತಿಮಂತ್ರ ಒಂದಂಶದ ಕಾರ್ಯಕ್ರಮ ಆಗಬೇಕು. ಹೊರ ರಾಜ್ಯದ ಕಾರ್ಪೋರೇಟ್ ಕಂಪನಿಯ ನೌಕರರಿಗೆ ಕನ್ನಡ ಕಲಿಸ ಬೇಕು. ಕನ್ನಡ ಕಲಿಸುವ ಪುಸ್ತಕ ಹೊರಬರಬೇಕೆಂದು ತಿಳಿಸಿದರು.
ಮಂಗಳೂರು ಮೈಸೂರು ಜೋಡಿ ಜಿಲ್ಲೆ ಆಗಬೇಕು. ಈ ಎರಡು ಜಿಲ್ಲೆಯಲ್ಲಿ ಅಪಾರ ಸಾಂಸ್ಕೃತಿಕ ಕಣಜವಿದೆ. ವ್ಯಾಪಾರ-ವಿನಿಮಯ ಆಗಬೇಕು. ಎಲ್ಲಾ ಜಿಲ್ಲೆಗಳನ್ನು ಎರಡು ಜಿಲ್ಲೆಯಾಗಿ ಜೋಡಿಸಬೇಕಿದೆ. ಕೃಷಿಕರು-ಕಾರ್ಪೋರೇಟರ್ ಒಂದಾಗಿ ಸಾಗಬೇಕು. ಕನ್ನಡದ ಅಭಿವೃದ್ಧಿಯಲ್ಲಿ ನಾವೆಲ್ಲರೂ ಬದ್ಧ ರಾಗೋಣ. ಮಗುವಿಗೆ ಕನ್ನಡವನ್ನು ತಾಯಿ ಕಲಿಸಬೇಕು. ಮನುಜ ಮತ ವಿಶ್ವ ಪಥ ಎಲ್ಲೆಡೆ ಪರಿಸಬೇಕು. ಶಾಂತಿಮಂತ್ರವನ್ನು ನಾವೆಲ್ಲರೂ ಮಾಡೋಣ ಎಂದರು.