Sunday, 15th December 2024

ದತ್ತ ಜಯಂತಿ 2023ಕ್ಕೆ ಇಂದು ಚಾಲನೆ

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ದತ್ತ ಜಯಂತಿ 2023ಕ್ಕೆ ಭಾನುವಾರ ಚಾಲನೆ ಸಿಗಲಿದೆ. ಮಾಜಿ ಶಾಸಕ ಸಿ. ಟಿ. ರವಿ‌ ಸೇರಿದಂತೆ ಸಾವಿರಾರು ಕಾರ್ಯಕರ್ತರು ಮಾಲೆ ಧರಿಸಲಿದ್ದಾರೆ.

ಡಿ.17ರ ಭಾನುವಾರದಿಂದ 10 ದಿನಗಳ ಕಾಲ ದತ್ತಜಯಂತಿ ಸಂಭ್ರಮ ನಡೆಯಲಿದೆ. ವಿಎಚ್‌ಪಿ, ಬಜರಂಗದಳ ನೇತೃತ್ವದಲ್ಲಿ ನಡೆಯಲಿರುವ ದತ್ತಜಯಂತಿಗೆ ದತ್ತಮಾಲಾಧಾರಣೆ ಮೂಲಕ ಭಾನುವಾರ ಚಾಲನೆ ದೊರೆಯಲಿದೆ.

ಹಿಂದೂ, ಬಿಜೆಪಿ ಕಾರ್ಯಕರ್ತರು ಸೇರಿ ಚಿಕ್ಕಮಗಳೂರು ಜಿಲ್ಲೆಯಾದ್ಯಂತ 4 ಸಾವಿರಕ್ಕೂ ಅಧಿಕ ಕಾರ್ಯಕರ್ತರು ದತ್ತಲಾಲೆ ಧಾರಣೆ ಮಾಡಲಿದ್ದಾರೆ. ದತ್ತಜಯಂತಿ ಅಂಗವಾಗಿ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ, ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ಪೊಲೀಸ್‌ ಭದ್ರತೆ ಹೆಚ್ಚಿಸಲಾಗಿದೆ.

ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ನಡೆಯಲಿರುವ ದತ್ತಜಯಂತಿ ಕಾರ್ಯಕ್ರಮಕ್ಕೆ ಚಿಕ್ಕಮಗಳೂರು ಜಿಲ್ಲಾಡಳಿತ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.

ದತ್ತಜಯಂತಿ ಹಿನ್ನಲೆಯಲ್ಲಿ ಜಿಲ್ಲಾಡಳಿತದ ವಿರುದ್ಧ ಕಾಂಗ್ರೆಸ್ ಮುಖಂಡರು ಕಿಡಿಕಾರಿದ್ದಾರೆ. ಇದು ರಾಜಕೀಯ ಪ್ರೇರಿತ ಉತ್ಸವ. ದತ್ತಜಯಂತಿ ಉತ್ಸವದಲ್ಲಿ ಡಿಸಿ, ಎಸ್ಪಿ ಮತೀಯ ಸಂಘಟನೆಗಳ ಜೊತೆ ಕೈಜೋಡಿಸಿದರೆ ಮುಖ್ಯಮಂತ್ರಿಗಳಿಗೆ ದೂರು ನೀಡುತ್ತೇವೆ ಎಂದು ಕಾಂಗ್ರೆಸ್ ವಕ್ತಾರ ದೇವ ರಾಜ್ ಹೇಳಿದ್ದಾರೆ.

ಚಿಕ್ಕಮಗಳೂರು ಶಾಸಕ ಹೆಚ್. ಡಿ. ತಮ್ಮಯ್ಯ ಮಾತನಾಡಿ, “ದತ್ತಜಯಂತಿ ಆಚರಣೆ ಕುರಿತು ಜಿಲ್ಲಾಡಳಿತದೊಂದಿಗೆ ಚರ್ಚಿಸುತ್ತೇನೆ. ಸರ್ಕಾರ, ಕೋರ್ಟ್ ಆದೇಶದಂತೆ ದತ್ತಜಯಂತಿ ನಡೆಯುತ್ತದೆ” ಎಂದರು.

“ನಾನು ಈ ಬಾರಿ ದತ್ತಮಾಲೆ ಹಾಕುವ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ದೇವರು ಯಾವ ರೀತಿ ಮನಸ್ಸು ಕೊಡುತ್ತಾನೋ ನೋಡೋಣ” ಎಂದು ಶಾಸಕ ಹೆಚ್. ಡಿ. ತಮ್ಮಯ್ಯ ಹೇಳಿದರು.