ದಾವಣಗೆರೆ: ಭದ್ರಾ ನೀರು ಹರಿಸುವಂತೆ ಭಾರತೀಯ ರೈತ ಒಕ್ಕೂಟದಿಂದ ರೈತರು ಇಂದು ದಾವಣಗೆರೆ ಬಂದ್ ನಡೆಸುತ್ತಿದ್ದಾರೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಬಂದ್ ಜಾರಿಯಲ್ಲಿದ್ದು, ರೈತರು ಬೀದಿಗಿಳಿದು ಸರ್ಕಾರದ ವಿರುದ್ಧ ಘೋಷಣೆ ಹಾಕಿದರು.
100 ದಿನಗಳ ಕಾಲ ನಿರಂತರವಾಗಿ ಭದ್ರಾ ನೀರು ಬಿಡುವಂತೆ ಒತ್ತಾಯಿಸಿ ಹೋರಾಟ ನಡೆಸುತ್ತಿದ್ದ ರೈತರಿಗೆ ಬಿಜೆಪಿ ಜಿಲ್ಲಾ ಘಟಕ ಬೆಂಬಲ ನೀಡಿದೆ.
ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ತಕ್ಷಣವೇ ನೀರು ಹರಿಸುವಂತೆ ರೈತರು ಮನವಿ ಮಾಡಿದ್ದಾರೆ. ನಗರದ ಜಯದೇವ ವೃತ್ತದಲ್ಲಿ ರೈತ ಮುಖಂಡ ನಾಗೇಶ್ವರ್ ರಾವ್ ಹಾಗು ಬಸವರಾಜಪ್ಪ ನವರ ನೇತೃತ್ವದಲ್ಲಿ ಜಮಾಯಿಸಿದ ರೈತರು, ನೀರು ಹರಿಸುವಂತೆ ಸರ್ಕಾರ ವನ್ನು ಆಗ್ರಹಿಸಿ, ಧಿಕ್ಕಾರ ಕೂಗಿದರು.
ಯುವ ರೈತ ಮುಖಂಡೆ ರಾಜೇಶ್ವರಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಎಎಪಿ, ಆಟೋ-ಬಸ್ ಮಾಲೀಕರ ಸಂಘ, ರಸಗೊಬ್ಬರ ಅಂಗಡಿ ಮಾಲೀಕರ ಸಂಘ, ರೈಸ್ ಮಿಲ್ ಮಾಲೀಕರ ಸಂಘ ಸೇರಿದಂತೆ ಹಲವರು ಬಂದ್ ಬೆಂಬಲಿಸಿದ್ದಾರೆ.
ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನಗರಾದ್ಯಂತ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಎಸ್ಪಿ ಉಮಾ ಪ್ರಶಾಂತ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.
ರೈತ ಮುಖಂಡ ನಾಗೇಶ್ವರ್ ಪ್ರತಿಕ್ರಿಯಿಸಿ, “ನೀರಿಗಾಗಿ ಬಂದ್ ಮಾಡಿದ್ದಕ್ಕೆ ಎರಡು ಸಾವಿರ ಕೋಟಿ ರೂ ಬಂಡವಾಳ ನಷ್ಟ ಆಗುತ್ತೆ. ಈ ಬಂದ್ಗೆ ಎಲ್ರೂ ಕೈ ಜೋಡಿಸಿದ್ದಾರೆ. ನೀರು ಬಿಡುವ ತನಕ ನಾವು ಜಗ್ಗಲ್ಲ. ಚಳುವಳಿ ನಿಲ್ಲಿಸುವ ಮಾತೇ ಇಲ್ಲ” ಎಂದು ಪಟ್ಟು ಹಿಡಿದರು.