Sunday, 27th October 2024

Deepavali 2024: ಹಬ್ಬದ ದಿನಗಳಲ್ಲಿ ಶುಗರ್ ಲೆವೆಲ್ ಹೆಚ್ಚದಂತೆ ಹೀಗೆ ಮಾಡಿ!

Deepavali 2024

ಬೆಳಕಿನ ಹಬ್ಬ (Deepavali 2024) ಇನ್ನೇನು ಬಂತು. ಹಬ್ಬ ಎನ್ನುತ್ತಿದ್ದಂತೆ ಮೊದಲು ನೆನಪಾಗುವುದು ಪೂಜೆ. ಜತೆಗೆ ಭರ್ಜರಿ ಊಟ ಕೂಡ! ಸುಮ್ಮನೆ ಏನೋ ಒಂದಿಷ್ಟು ತಿನಿಸುಗಳಲ್ಲ, ತರಹೇವಾರಿ ಕಡುಬು- ಕಜ್ಜಾಯಗಳು, ಹೋಳಿಗೆ-ಚಿರೋಟಿಗಳು, ಚಕ್ಕುಲಿ-ಉಂಡೆಗಳು, ಖೀರು-ಪಾಯಸಗಳು… ಪಟ್ಟಿ ಮುಗಿಯುವುದೇ ಇಲ್ಲ.

ಹೌದು, ಹಬ್ಬಗಳೆಂದರೆ ಸಂಭ್ರಮವನ್ನು ಆಚರಿಸುವ ಕಾಲ. ಬಂಧು-ಮಿತ್ರರನ್ನು ಕಂಡು, ಕಲೆಯುವ ಕಾಲ. ಇಂಥ ಸಮಯದಲ್ಲಿ ಬಾಯಿಗೊಂದಿಷ್ಟು ಸಿಹಿ ಬೇಡವೇ? ಉಳಿದವರ ಪಾಲಿಗೆ ಇವೆಲ್ಲ ಹೌದಾಗಿದ್ದರೂ ಮಧುಮೇಹಿಗಳ ಪಾಲಿಗೆ ಇವೆಲ್ಲ ಬಿಸಿತುಪ್ಪ. ಉಗುಳುವಂತಿಲ್ಲ, ನುಂಗುವುದು ಸಲ್ಲ. ಹಬ್ಬದ ದಿನಗಳಲ್ಲಿ ರಕ್ತದಲ್ಲಿ ಸಕ್ಕರೆಯಂಶ ಏರದಂತೆ ಕಾಪಾಡಿಕೊಳ್ಳುವುದು ಹೇಗೆ?

ಹಬ್ಬದ ದಿನಗಳಲ್ಲಿ ಊಟ, ತಿಂಡಿಯ ಹೊತ್ತಿನಲ್ಲಿ ಮಾತ್ರವೇ ನಾವು ಸಿಹಿ ತಿನ್ನುತ್ತೇವೆ ಎನ್ನುವಂತಿಲ್ಲ. ಮನೆಯಲ್ಲಿ ತರಹೇವಾರಿ ತಿನಿಸುಗಳು ಲಭ್ಯವಿರುವ ಕಾರಣ, ಯಾವಾಗೆಂದರೆ ಆವಾಗ ಏನಾದರೂ ಬಾಯಾಡುವ ಮನಸ್ಸಾಗಬಹುದು. ಹಸಿವು ಇದೆಯೊ ಇಲ್ಲವೊ ಇತ್ಯಾದಿಗಳು ಒಂದಕ್ಕೊಂದು ಸಂಬಂಧವೇ ಇರುವುದಿಲ್ಲ. ಈ ತಿನಿಸುಗಳು ಒಂದೋ ಕರಿದಿದ್ದು ಅಥವಾ ಸಕ್ಕರೆ-ತುಪ್ಪ ಸೇರಿದ್ದೋ ಆಗಿರುತ್ತವೆ. ಹಾಗಾಗಿ ಕ್ಯಾಲರಿಗಳು ಲೆಕ್ಕ ತಪ್ಪಿ ಏರುತ್ತವೆ. ಹೀಗೆ ಸಕ್ಕರೆ ಮತ್ತು ಪಿಷ್ಟಗಳು ಹೆಚ್ಚಿರುವ ತಿನಿಸುಗಳು ಯಾರಿಗೂ ಕ್ಷೇಮವಲ್ಲ, ಅದರಲ್ಲೂ ಮಧುಮೇಹಿಗಳಿಗೆ ಸಮಸ್ಯೆಯನ್ನೇ ತರಬಹುದು. ಇದಕ್ಕಾಗಿ ಏನು ಮಾಡಬೇಕು?

ಸಮಯ ಪಾಲನೆ

ನಿತ್ಯವೂ ಯಾವೆಲ್ಲ ಸಮಯದಲ್ಲಿ ಊಟ-ತಿಂಡಿಯೆಂದು ನಿರ್ಧರಿಸಿಕೊಂಡಿದ್ದೀರೊ, ಹಬ್ಬದ ದಿನಗಳಲ್ಲೂ ಅದನ್ನು ಮುಂದುವರಿಸಿ. ಸಮಯವನ್ನು ಆಚೀಚೆ ಮಾಡುವುದು ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಅಡುಗೆ ಮಾಡುವುದು, ಬಂದ ಅತಿಥಿಗಳನ್ನು ಸುಧಾರಿಸುವುದು, ಅಲಂಕರಣ, ಪೂಜಾ ವಿಧಿಗಳು- ಹೀಗೆ ಕಾರಣ ಯಾವುದೇ ಇದ್ದರೂ ಆಹಾರದ ಸಮಯವನ್ನು ಮೀರುವಂತಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ. ಒಂದೊಮ್ಮೆ ಮನೆಗೆ ಬಂದ ಅತಿಥಿಗಳನ್ನು ಬಿಟ್ಟು ಊಟ ಮಾಡಲಾಗದು ಎಂದಿದ್ದರೆ, ಆ ಹೊತ್ತಿಗೆ ನಿಮ್ಮ ಆರೋಗ್ಯಕ್ಕೆ ಸರಿಹೊಂದುವಂಥ ಏನನ್ನಾದರೂ ತಿನ್ನುವುದು ಅಗತ್ಯ.

ಪ್ರಮಾಣವೆಷ್ಟು?

ಹಬ್ಬದಲ್ಲಿ ಕ್ಯಾಲರಿ ಲೆಕ್ಕ ಹಾಕುವುದೇ ತಪ್ಪಾದೀತು. ಹಾಗೆಂದು ಪ್ರಮಾಣವನ್ನೂ ಮೀರಿಬಿಟ್ಟರೆ ಮಧುಮೇಹಿಗಳಿಗೆ ತೊಂದರೆ ತಪ್ಪಿದ್ದಲ್ಲ. ಬೆಳಗಿನ ತಿಂಡಿ ತಿನ್ನದೆಯೇ, ಪೂಜೆಯೆಲ್ಲ ಮುಗಿಸಿ ಮಧ್ಯಾಹ್ನ ಗಡದ್ದಾಗಿ ಊಟ ಮಾಡಿದರಾಯಿತು ಎಂದುಕೊಂಡರೆ, ಇದಕ್ಕಿಂತ ದೊಡ್ಡ ತಪ್ಪು ಮಧುಮೇಹಿಗಳ ಪಾಲಿಗೆ ಇನ್ನೊಂದು ಇರಲಾರದು. ಹಾಗಾಗಿ ಬೆಳಗಿನ ತಿಂಡಿ ಪ್ರಮಾಣವೆಷ್ಟು ಮತ್ತು ಮಧ್ಯಾಹ್ನದ ಊಟ ಪ್ರಮಾಣವೆಷ್ಟು ಎಂಬುದನ್ನು ತೀರಾ ವ್ಯತ್ಯಾಸ ಮಾಡಲು ಹೋಗಬೇಡಿ. ಬದಲಿಗೆ, ಆಹಾರದಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಿ.

ನೀವೇ ಅತಿಥಿಯಾದರೆ

ನಿಮ್ಮಲ್ಲಿಗೆ ಅತಿಥಿಗಳು ಬಂದರೆ ಆಹಾರದ ಆಯ್ಕೆ ನಿಮ್ಮ ಕೈಯಲ್ಲೇ ಇರುತ್ತದೆ. ಹಾಗಲ್ಲದೆ, ನೀವೇ ಅತಿಥಿಯಾಗಿ ಹೋದಾಗ ಅವರು ಉಣಬಡಿಸಿದ್ದು ನಿಮ್ಮ ಪಾಲಿಗೆ ಬರುತ್ತದೆ. ಇಂಥ ಸಂದರ್ಭದಲ್ಲಿ ಆದಷ್ಟು ಪಕೋಡ, ಸಮೋಸ, ಚಿಪ್ಸ್‌, ನೂಡಲ್ಸ್‌, ಫ್ರೈಡ್‌ರೈಸ್‌, ಸ್ಯಾಂಡ್‌ವಿಚ್‌, ಪಿಜ್ಜಾ, ಜಿಲೇಬಿ, ರಸಗುಲ್ಲ, ಗುಲಾಬ್‌ ಜಾಮೂನ್‌ ಮುಂತಾದ ಕರಿದ, ಮೈದಾಭರಿತ ಮತ್ತು ಸಕ್ಕರೆ ತುಂಬಿದ ತಿನಿಸುಗಳತ್ತ ಕೈಚಾಚಬೇಡಿ. ಇವುಗಳೆಲ್ಲ ಪಿಷ್ಟ, ಸಕ್ಕರೆ, ಸೋಡಿಯಂಗಳ ಗುಢಾಣಗಳಂತಿರುತ್ತವೆ.

ಈ ಸುದ್ದಿಯನ್ನೂ ಓದಿ | Reliance Jio: ದೀಪಾವಳಿ ಆಫರ್‌, ಭಾರಿ ಡಿಸ್ಕೌಂಟ್; ಕೇವಲ 699 ರೂ.ಗೆ ಸಿಗಲಿದೆ ಜಿಯೋ ಭಾರತ್‌ 4 ಜಿ ಫೋನ್!

ಇವುಗಳನ್ನು ಮರೆಯಬೇಡಿ

ದಿನದ ನೀರಿನ ಪ್ರಮಾಣವನ್ನು ಮರೆಯುವಂತಿಲ್ಲ. ಇದರಿಂದ ಹೆಚ್ಚುವರಿ ತೊಂದರೆಗಳು ಬರುವುದನ್ನು ತಪ್ಪಿಸಬಹುದು. ಊಟದ ಪ್ರಾರಂಭಕ್ಕೆ ಸಲಾಡ್., ಕೋಸಂಬರಿಯಂಥ ನಾರಿನ ಆಹಾರಗಳು ಹೊಟ್ಟೆ ಸೇರಲಿ. ನಂತರ ಪಿಷ್ಟಕ್ಕಿಂತ ಪ್ರೊಟೀನ್‌ ಇರುವ ತಿನಿಸುಗಳನ್ನು ತಿನ್ನುವತ್ತ ಮನಸ್ಸು ಮಾಡಿ. ಕರಿದ ತಿಂಡಿಗಳ ಬದಲಿಗೆ ಕೊಂಚ ತುಪ್ಪ ಸೇರಿದ ತಿನಿಸಾದರೂ ಅಡ್ಡಿಯಿಲ್ಲ ಎಂಬುದು ತಿಳಿದಿರಲಿ. ಸಿಹಿ ತಿನ್ನುವ ವಿಭಾಗಕ್ಕೆ ಬಂದರೆ ಸಂಸ್ಕರಿತ ಸಕ್ಕರೆಯ ಬದಲಿಗೆ ನೈಸರ್ಗಿಕ ಹಣ್ಣುಗಳಿಂದ ಮಾಡಿದ್ದು, ಒಣದ್ರಾಕ್ಷಿ, ಅಂಜೂರ, ಖರ್ಜೂರಗಳಂಥ ವಸ್ತುಗಳಿಂದ ತಯಾರಿಸಿದ ಸಿಹಿಗೆ ಆದ್ಯತೆ ನೀಡಿ. ಸಕ್ಕರೆಗಿಂತ ಬೆಲ್ಲ ಒಳ್ಳೆಯದು ಎಂಬುದು ಉಳಿದವರಿಗೆ ಹೌದಾದರೂ ಮಧುಮೇಹಿಗಳಿಗೆ ಅದರಲ್ಲಿ ಸಿಕ್ಕಾಪಟ್ಟೆ ವ್ಯತ್ಯಾಸ ಆಗುವುದಿಲ್ಲ.