Sunday, 24th November 2024

ಚಿಕ್ಕಬಳ್ಳಾಪುರ ಡಿಗ್ರಿ ಕಾಲೇಜಿನಲ್ಲಿ ವಿದ್ಯಾರ್ಥಿ ಗುಂಪುಗಳ ಗಲಾಟೆ, ಪೊಲೀಸರ ಆಗಮನ

ಪ್ರಾಂಶುಪಾಲರ ಕಚೇರಿಯಲ್ಲಿ ಸಂಧಾನ,ಪ್ರಾಂಶುಪಾಲರಿಂದ ಅಪಮಾನ ವಿದ್ಯಾರ್ಥಿಗಳ ಅಳಲು

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ನಗರದ ಎಂ.ಜಿ.ರಸ್ತೆಯಲ್ಲಿರುವ ಸರಕಾರಿ ಡಿಗ್ರಿ ಕಾಲೇಜಿನಲ್ಲಿ ಎರಡು ವಿದ್ಯಾರ್ಥಿ ಗುಂಪು ಗಳ ನಡುವೆ ನಡೆದ ಮಾರಾಮಾರಿಯಿಂದಾಗಿ ವಿದ್ಯಾರ್ಥಿಗಳಲ್ಲಿ ಭೀತಿಯ ವಾತಾವರಣ ಸೃಷ್ಟಿಯಾದ ಹಿನ್ನೆಲೆಯಲ್ಲಿ ಪೊಲೀಸರು ಆಗಮಿಸಿ ಗುಂಪುಗಳನ್ನು ಚದುರಿಸಿ ಬುದ್ದಿಹೇಳಿದ ಘಟನೆ ಜರುಗಿದೆ.

ಹುಡುಗಿ ಪ್ರಕರಣ
ಎರಡನೇ ಸೆಮಿಸ್ಟರ್ ವಿದ್ಯಾರ್ಥಿಗಳು, ಅಂತಿಮ ಬಿಕಾಂ ವಿದ್ಯಾರ್ಥಿಗಳ ನಡುವೆ ಹುಡುಗಿಯ ವಿಚಾರಕ್ಕೆ ಈ ಜಗಳ ನಡೆದಿದೆ.ಈ ಬಗ್ಗೆ ಒಂದು ವಾರಕ್ಕೂ ಮೊದಲೇ ಪ್ರಾಂಶುಪಾಲರಿಗೆ, ಹಿರಿಯ ಪ್ರಾಧ್ಯಾಪಕರ ಗಮನಕ್ಕೆ ಜಗಳವಾಗುವ ಹುಡುಗಿಯನ್ನು ರೇಗಿಸುತ್ತಿರುವ ವಿಚಾರ ತಂದಿದ್ದರೂ ಅವರು ಸಮಸ್ಯೆ ನಿವಾರಣೆಗೆ ಮುಂದಾಗದ ಕಾರಣ ನಾವು ಗಲಾಟೆಯ ಹಾದಿ ಹಿಡಿಯಬೇಕಾಯಿತು ಎಂದು ವಿದ್ಯಾರ್ಥಿಗಳು ನೇರವಾಗಿ ಆರೋಪಿಸುತ್ತಾರೆ.

ಮುಂದುವರೆದು ನಾವು ಕುಡಿದು ಬಂದಿದ್ದೇ ಇವರಿಗೆ ದೊಡ್ಡದಾಗಿ ಕಾಣುತ್ತಿದೆ.ಇದಕ್ಕಾಗಿ ಪೊಲೀಸರನ್ನು ಕರೆಸಿಕೊಂಡು ನಮ್ಮನ್ನು ಹೊಡೆಸಲಾಗಿದೆ. ಪ್ರಾಂಶುಪಾಲರು ಕಾಲಿನಿಂದ ಒದ್ದಿದ್ದಾರೆ.ನಾವು ಮೊದಲೇ ಈ ಬಗ್ಗೆ ಇವರ ಗಮನಕ್ಕೆ ತಂದಿದ್ದರೂ ಕೂಡ ಯಾಕೆ ಪರಿಹಾರ ತೋರಿಸಲಿಲ್ಲ.ನಾವು ಪಾಠ ಪ್ರವಚನ ಸರಿಯಾಗಿಲ್ಲ,ಸಮಯಕ್ಕೆ ಸರಿಯಾಗಿ ಉಪನ್ಯಾಸಕರು ಬರುವುದಿಲ್ಲ, ಶೌಚಾಲಯ ಸ್ವಚ್ಚತೆ ಸರಿಯಿಲ್ಲ ಎಂದು ಹೇಳಿದರೆ ಆಂತರಿಕ ಅಂಕಗಳ ಕಡಿತ ಮಾಡುವ ಬೆದರಿಕೆ ಹಾಕುತ್ತಾರೆ.ಯಾರು ದೂರು ಹೇಳುತ್ತಾರೋ ಅವರನ್ನು ಟಾರ್ಗೆಟ್ ಮಾಡುತ್ತಾರೆ. ಹೀಗಾಗಿ ನಾವು ವಿದ್ಯಾರ್ಥಿಗಳೇ ಸಮಸ್ಯೆ ಪರಿಹಾರಕ್ಕೆ ಮುಂದಾದ ಕಾರಣ ಗಲಾಟೆ ಆಗಿದೆ ಎನ್ನುವುದು ಅಂತಿಮ ಬಿಕಾಂ ವಿದ್ಯಾರ್ಥಿಗಳ ಅಳಲು.

ಇನ್ನು ಮಾಧ್ಯಮದವರ ಮುಂದೆಯೇ ಪೊಲೀಸರು ವಿದ್ಯಾರ್ಥಿಗಳನ್ನು ಚದುರಿಸಿ ಎಚ್ಚರಿಕೆ ನೀಡುತ್ತಿದ್ದ ದೃಶ್ಯಗಳು ಕಂಡು ಬಂದಿದ್ದರೂ ನಮ್ಮ ಕಾಲೇಜಿನಲ್ಲಿ ಏನೂ ಆಗಿಯೇ ಇಲ್ಲ,ಪೋಟೋ ಏಕೆ ತೆಗೆಯುತ್ತೀರಿ ಎಂದು ಪ್ರಾಂಶುಪಾಲರು ಹಾರಿಕೆಯ ಉತ್ತರ ನೀಡುತ್ತಾರೆ. ಇದನ್ನೆಲ್ಲಾ ಗಮನಿಸಿದರೆ ಕಾಲೇಜಿನಲ್ಲಿ ಏನೇನೂ ಸರಿಯಿಲ್ಲ ಎಂಬುದು ಕಣ್ಣಿಗೆ ಕಾಣುವ ಸತ್ಯವಾಗಿದೆ.

ಇದು ಸತ್ಯ..
ಗೌರಿಬಿದನೂರು ರಸ್ತೆಯಲ್ಲಿರುವ ಸರಕಾರಿ ಡಿಗ್ರಿ ಕಾಲೇಜಿನಲ್ಲಿ ಸಾವಿರಾರು ವಿದ್ಯಾರ್ಥಿಗಳು ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ದೂರದ ಹಳ್ಳಿಪಟ್ಟಣಗಳಿಂದ ಆಗಮಿಸುತ್ತಾರೆ.

ಇಲ್ಲಿ ಪದವಿಯ ಎಲ್ಲಾ ವಿಭಾಗಗಳು, ಸ್ನಾತಕೋತ್ತರ ಕೇಂದ್ರ,ನೂರಾರು ಬೋಧಕ ವರ್ಗ ಎನ್‌ಎಸ್‌ಎಸ್, ಎನ್‌ಸಿಸಿ,ಭಾರತ ಸೇವಾದಳ ಸೇರಿದಂತೆ ಸಂಶೋಧನಾ ಕೇಂದ್ರವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.ಜಿಲ್ಲೆಗೆ ಭೂಷಣವಾಗಿರುವ ಇಲ್ಲಿ ಬೋಧಕವರ್ಗದ ನಡುವೆ ನಡೆಯುವ ಶೀಥಲ ಸಮರ, ಸ್ವಹಿತಾಸಕ್ತಿಗಳ ಕಾರಣ ವಿದ್ಯಾರ್ಥಿಗಳ ಮೇಲೆ ಹಿಡಿತ ಇಲ್ಲವಾಗಿದೆ ಎನ್ನುವ ಆರೋಪವಿದೆ.

ಇದೇ ಕಾರಣವಾಗಿ ಈ ಹಿಂದೆ ಪ್ರಾಂಶುಪಾಲರಾಗಿದ್ದ ನಾರಾಯಣಸ್ವಾಮಿ ಅವರ ಮೇಲೆ ಯೂನಿಫಾರಂ ವಿತರಣೆ ಹಣ ದುರುಪಯೋಗದಂತಹ ಗಂಭೀರ ಆರೋಪ ಬಂದು ಸ್ವತಃ ಲೋಕಾಯುಕ್ತರೇ ಭೇಟಿ ನೀಡಿ ದೂರು ದಾಖಲಿಸುವಂತೆ ಆಗಿತ್ತು.
ಹಾಲಿ ಪ್ರಾಂಶುಪಾಲರು ಅಕಾರ ಸ್ವೀಕರಿಸುವ ಸಂದರ್ಭದಲ್ಲಿ ಅವರ ಕುರ್ಚಿಗೆ ಮಾಟ ಮಂತ್ರದ ಗೊಂಬೆ ಬಿಗಿದಿದ್ದ ಪ್ರಕರಣ ಭಾರೀ ವೈರಲ್ ಆಗಿತ್ತು.ಕಳೆದ ಎರಡು ದಿನದ ಹಿಂದೆ ಕಾಲೇಜು ಶಿಕ್ಷಣ ಇಲಾಖೆ ಇಲ್ಲಿಗೆ ಭೇಟಿ ನೀಡಿ ಮಹಿಳಾ ಕಾಲೇಜು ಇದೇ ಕಾಲೇಜಿನ ಆವರಣದಲ್ಲಿ ಪಾಳಿಯ ಪ್ರಕಾರ ನಡೆಸಲು ಅದೇಶ ನೀಡಿದ್ದಾರೆ.

ಅಂದರೆ ಇಷ್ಟೆಲ್ಲಾ ಉಪದ್ವಾಪಗಳ ನಡುವೆ ಗಂಭೀರ ಅಧ್ಯಾಪಕರು, ವಿದ್ಯಾರ್ಥಿಗಳ ಸಾಧನೆ ಕಾಲೇಜಿನ ಕೀರ್ತಿಯನ್ನು ಅಷ್ಟೋ ಇಷ್ಟೋ ಉಳಿಸುವಂತೆ ಮಾಡುತ್ತಿರುವುದು ಸಮಾಧಾನದ ಸಂಗತಿ.