Saturday, 26th October 2024

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಮುದಾಯ ಆರೋಗ್ಯ ಅಧಿಕಾರಿಗಳ ಪ್ರತಿಭಟನೆ

ಚಿಕ್ಕಬಳ್ಳಾಪುರ: ಸೇವೆ ಖಾಯಂ ಮಾಡಬೇಕು.ಪ್ರೋತ್ಸಾಹ ಧನೆ ಹೆಚ್ಚಳ ಮಾಡಬೇಕು, ಆರೋಗ್ಯ ಕ್ಷೇಮ ಕೇಂದ್ರಗಳ ಸಶಕ್ತೀಕರಣದ ಜತೆಗೆ ಕಿರುಕುಳ ಮುಕ್ತ ಕೆಲಸಕ್ಕೆ ಆಗ್ರಹಿಸಿ ಜಿಲ್ಲಾ ಸಮುದಾಯ ಆರೋಗ್ಯ ಆರೋಗ್ಯ ಅಧಿಕಾರಿಗಳು ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಧಿಕಾರಿಗಳ ಕಛೇರಿ ಎದುರು ಶುಕ್ರವಾರ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ನೌಕರರ ಸಂಘ ಕರೆ ನೀಡಿರುವ ಒಂದು ದಿನದ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡಿರುವ ಜಿಲ್ಲಾ ಘಟಕದ ನೌಕರರು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ಹೊರ ಹಾಕಿದರು.

ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಬಿ.ಎಸ್. ಶರಣಪ್ಪ ರಾಷ್ಟ್ರೀಯ ಆರೋಗ್ಯ ಅಭಿಯಾ ನದ ಅಡಿಯಲ್ಲಿ ನೇಮಕವಾಗಿರುವ ನಮಗೆ ಕೇಂದ್ರ ಸರಕಾರದ ಸುತ್ತೋಲೆಯಂತೆ ಇಲಾಖೆ ನಡೆಸಿಕೊಳ್ಳುತ್ತಿಲ್ಲ. ಅದರಂತೆ ವೇತನವನ್ನೂ ಪಾವತಿಸುತ್ತಿಲ್ಲ. ನಮ್ಮ ರಾಜ್ಯದಲ್ಲಿ ಸಮುದಾಯ ಆರೋಗ್ಯ ಅಧಿಕಾರಿಗೆ ೮ ಸಾವಿರ ವೇತನ ನೀಡುತ್ತಿದ್ದಾರೆ. ಇತರೆ ರಾಜ್ಯಗಳಲ್ಲಿ ೧೫ ಸಾವಿರ ನೀಡುತ್ತಿದ್ದಾರೆ.

ಕೇಂದ್ರ ಸರಕಾರದ ಸುತ್ತೋಲೆಯಂತೆ ೬ ವರ್ಷ ಸೇವೆ ಪೂರ್ಣಗೊಂಡಿರುವ ಸಮುದಾಯ ಆರೋಗ್ಯ ಅಧಿಕಾರಿಗಳನ್ನು ಖಾಯಂ ಮಾಡಬೇಕು ಎನ್ನುತ್ತದೆ. ಆದರೆ ರಾಜ್ಯ ಸರಕಾರ ಈವರೆಗೆ ಈ ಬಗ್ಗೆ ಯಾವ ಕ್ರಮವನ್ನೂ ಕೈಗೊಂಡಿಲ್ಲ.ತಾಲೂಕು ಕೇಂದ್ರದಿ೦ದ ೧೦ ಕಿಲೋಮೀಟರ್ ವ್ಯಾಪ್ತಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿಯೇ ವಾಸ್ತವ್ಯವಿರ ಬೇಕು ಎನ್ನುವ ಸರಕಾರ ಅಲ್ಲಿ ಬೇಕಾದ ಮೂಲಭೂತ ಸೌಲಭ್ಯ ಒದಗಿಸಿಲ್ಲ.

ಮಹಿಳಾ ಅಧಿಕಾರಿಗಳಿಗೆ ಭದ್ರತೆಯಿಲ್ಲ.ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಸಬಲೀ ಕರಣಕ್ಕೆ ಪ್ರೋತ್ಸಾಹ ನೀಡಿದರೆ ಕರ್ತವ್ಯ ನಿರ್ವಹಿಸಲು ಸುಗಮವಾಗಲಿದೆ. ಬಹಳ ಮುಖ್ಯವಾಗಿ ಆರೋಗ್ಯ ಅಭಿಯಾನ ಸೂತ್ರಗಳನ್ವಯ ನಮ್ಮನ್ನು ಕರ್ತವ್ಯ ನಿರ್ವಹಿಸಲು ಬಿಡಬೇಕು.ಅನಗತ್ಯ ಒತ್ತಡ, ಅನ್ಯಕಾರ್ಯ ನಿರ್ವಹಣೆಗೆ ಒತ್ತಡ ಹಾಕಿ ಜವಾಬ್ದಾರಿ ಹೊರಿಸುವುದರಿಂದ ನಮ್ಮನ್ನು ಮುಕ್ತಗೊಳಿಸಬೇಕು ಎಂದು ಆಗಹಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾರಾಯಣಸ್ವಾಮಿ ಮಾತನಾಡಿ ಸಮುದಾಯ ಆರೋಗ್ಯ ಅಧಿಕಾರಿಗಳು ಪ್ರಾಮಾಣಿಕವಾಗಿ ತಮ್ಮ ಕೆಲಸ ಮತ್ತು ಸೇವೆಯನ್ನು ಸಮುದಾಯಕ್ಕೆ ನೀಡಬೇಕಾದರೆ ಮೊದಲು ನಮಗೆ ಒತ್ತಡ ರಹಿತ ಕಾರ್ಯನಿರ್ವಹಣೆಗೆ ಜಿಲ್ಲಾ ಆರೋಗ್ಯ ಇಲಾಖೆ ಆಡಳಿತ ಅವಕಾಶ ಕಲ್ಪಿಸಬೇಕು.ಕೇಂದ್ರ ಸರಕಾರದ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಮನಸೋ ಇಚ್ಚೆ ತಮಗೆ ಬೇಕಾದ ಹಾಗೆ ನಮ್ಮನ್ನು ನಡೆಸಿಕೊಳ್ಳುವ ಚಾಳಿಯನ್ನು ಹಿರಿಯ ಅಧಿಕಾರಿಗಳು ಬಿಡಬೇಕು.ನಮ್ಮ ಗೌರವಧನ ೮ರಿಂದ ೧೫ ಸಾವಿರ ನೀಡಬೇಕು ಎಂದು ಆಗ್ರಹಿಸಿದರು

ಈವೇಳೆ ಸಮುದಾಯ ಆರೋಗ್ಯ ನೌಕರ ಜಿಲ್ಲಾ ಘಟಕದ ಉಪಾಧ್ಯಕ್ಷ ಶ್ರೀನಿವಾಸ ನಾಯಕ, ಸಂಘಟನಾ ಕಾರ್ಯದರ್ಶಿ ಲೋಹಿತಾಶ್ವ, ಪದಾಧಿಕಾರಿಗಳಾದ ಸಿಂಧು,ಶ್ರಾವಣಿ ಮತ್ತಿತರರಿದ್ದರು.