Friday, 25th October 2024

kalaburagi News: ತಾಲೂಕಿನ ವಿವಿಧ ಬೇಡಿಕೆಗಳು ಈಡೇರಿಕೆಗಾಗಿ ಅ.25 ರಂದು ಪ್ರತಿಭಟನೆ

ಬಿಜೆಪಿ ಶಾಸಕರ ಮನವಿಗಳಿಗೆ ಅಧಿಕಾರಿಗಳ ಸ್ಪಂದನೆ ಇಲ್ಲ

ಚಿಂಚೋಳಿ: ಪುರಸಭೆ ಒಳಗೊಂಡಂತೆ ತಾಲೂಕಿನ ಗ್ರಾಮೀಣ ಭಾಗದ ಜನರ ವಿವಿಧ ಜ್ವಲಂತ ಸಮಸ್ಯೆಗಳಿಗೆ ಸರಕಾರ ಮತ್ತು ಅಧಿಕಾರಿಗಳು ಸ್ಪಂದಿಸದೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂದು ಕಲ್ಯಾಣ ಕರ್ನಾಟ ಜಾಗ್ರಣ ಮಂಚ್ ಚಿಂಚೋಳಿ ಘಟಕ ಆರೋಪಿಸಿದೆ.

ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್ ರ ಮತಕ್ಷೇತ್ರಕ್ಕೆ ಚಿಂಚೋಳಿ ತಾಲೂಕಿನ 30 ಗ್ರಾಮಗಳು ಸೇರಿರುವುದರಿಂದ ಆ ಗ್ರಾಮಗಳ ಅಭಿವೃದ್ಧಿ ಸಚಿವರ ಹೋಣೆಯಾಗಿದೆ. ಇನ್ನೂ ಮಿಕ್ಕುಳಿದ ಗ್ರಾಮಗಳು ಮತ್ತು ಚಿಂಚೋಳಿ ಪುರಸಭೆ ಸೇರಿ ಚಿಂಚೋಳಿ ಮೀಸಲು ಮತ ಕ್ಷೇತ್ರದ ಬಿಜೆಪಿ ಶಾಸಕ ಡಾ.ಅವಿನಾಶ ಜಾಧವ ಅವರ ಅಧೀನಕ್ಕೆ ಸೇರುತ್ತವೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಆಡಳಿತವಿದ್ದು, ಚಿಂಚೋಳಿ ಶಾಸಕರು ಬಿಜೆಪಿ ಪಕ್ಷದವರಾಗಿದ್ದ ಕಾರಣ ಕ್ಷೇತ್ರದ ಜನರ ಸಮಸ್ಯೆಗಳ ಬಗ್ಗೆ ಶಾಸಕರು ಸರಕಾರ ಮತ್ತು ಅಧಿಕಾರಿಗಳ ಗಮನಕ್ಕೆ ತಂದರು. ಸಮಸ್ಯೆಗಳ ನಿರ್ವಾಣೆಗೆ ಸರಕಾರ ಸಕರಾತ್ಮಕ ಸ್ಪಂದನೆ ದೊರಕುತ್ತಿಲ್ಲ.

ಹೀಗಾದರೆ ತಾಲೂಕಿನ ಜನರ ಸಮಸ್ಯೆಗಳಿಗೆ ಸ್ಪಂದಿಸುವವರು ಯಾರು? ಈ ಪ್ರಶ್ನೆಗೆ ಕ್ಷೇತ್ರದ ಜನತೆಗೆ ಉತ್ತರ ದೊರಕದಂತಾಗಿದೆ. ಈ ಹಿನ್ನಲೆಯಲ್ಲಿ ಕಲ್ಯಾಣ ಕರ್ನಾಟಕ ಸಮಾಜ ಜಾಗ್ರಣ ಮಂಚ್ ಚಿಂಚೋಳಿ ಘಟಕ ವತಿಯಿಂದ ಇದೇ ಅ.25 ರಂದು ಪ್ರತಿಭಟನೆ ಕೈಗೊಂಡು ಸರಕಾರಕ್ಕೆ ಮನವಿ ಸಲ್ಲಿಸಲು ಮುಖಂಡರು ಪೂರ್ವ ಭಾವಿ ಸಭೆ ಕೈಗೊಂಡು ತಿರ್ಮಾನಿಸಲಾಯಿತು.

ತಾಲೂಕಿನ ಸರ್ಕಾರಿ ಜಮೀನುಗಳಲ್ಲಿ ಅಕ್ರಮವಾಗಿ ಸಾಗುವಳಿ ಮಾಡಿದ ಭೂ ರಹಿತ ಸಾಗುವಳಿದಾರರಿಗೆ ಸರಕಾರ ಅಕ್ರಮ-ಸಕ್ರಮ ಯೋಜನೆಯಲ್ಲಿ ಭೂಮಿ ಮಂಜೂರಿಸಿ ಸಾಗುವಳಿ ಚೀಟಿ ನೀಡಲು ಶಾಸಕರ ನೇತೃತ್ವದಲ್ಲಿ ಸಮಿತಿ ರಚಿಸಬೇಕು. ಅಕ್ರಮವಾಗಿ ವಾಸದ ಮನೆಗಳು ನಿರ್ಮಿಸಿಕೊಂಡು ವಾಸವಾಗಿರುವ ನಿವಾಸಿಗಳಿಗೆ ಹಕ್ಕು ಪತ್ರ ನೀಡುವುದು ಮತ್ತು ಐನಾಪೂರ ಏತ ನಿರಾವರಿ ಯೋಜನೆಗೆ ಸರಕಾರ ಆದಷ್ಟು ಬೇಗ ಕಾರ್ಯ ರೂಪಕ್ಕೆ ತಂದು ಆ ಭಾಗದ ರೈತರಿಗೆ ಅನುಕೂಲ ಮಾಡಿಕೊಡುವುದು, ಚಿಂಚೋಳಿ ಪುರಸಭೆ ವ್ಯಾಪ್ತಿಯ ಸರ್ವೆ ನಂ – 47 ರಲ್ಲಿ ಕೃಷಿ ಚಟುವಟಿಕೆಗಾಗಿ ಸರಕಾರ ಮಂಜೂರಿ ನೀಡಿದ ಜಮೀನುಗಳಲ್ಲಿ ಪುರಸಭೆ ವತಿಯಿಂದ ಮತ್ತು ಕೊಳಚೆ ನಿರ್ಮೂ ಲನ ಬೋರ್ಡ ವತಿಯಿಂದ ನಿರ್ಮಿಸಿದ ಮನೆಗಳಿಗೆ ಹಕ್ಕು ಪತ್ರದೊಂದಿಗೆ ಫಾರಂ ನಂ 3 ಕೊಡುವುದು ಸೇರಿ ಹನ್ನೊಂದು ಅಂಶಗಳ ಬೇಡಿಕೆಗಳು ಇಟ್ಟುಕೊಂಡು ಪ್ರತಿಭಟನೆ ನಡೆಸುವ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸುವ ನಿರ್ಧಾರ ಕೈಗೊಳ್ಳಲಾಯಿತು.

ಈ ಸಭೆಯಲ್ಲಿ ಹಿರಿಯ ಸಮಾಜ ಸೇವಕ ರಮೇಶ ಯಾಕಾಪೂರ, ವಕೀಲರ ಸಂಘದ ಅಧ್ಯಕ್ಷ ಶ್ರೀಮಂತ ಕಟ್ಟಿಮನಿ, ಹೋರಾಟಗಾರ ಮಾರುತಿ ಗಂಜಗಿರಿ, ಚಂದ್ರಕಾಂತ , ಬಸವರಾಜ ಸಿರಸಿ, ನಾಗೇಂದ್ರಪ್ಪ ಗುರಂಪಳ್ಳಿ, ವಿಜಯ ಕುಮಾರ ಶಾಬಾದಿ ಸೇರಿ ಅನೇಕರು ಉಪಸ್ಥಿತರಿದ್ದರು.