Thursday, 19th September 2024

Invest Karnataka: ನಿಡೆಕ್ ಕಾರ್ಪೊರೇಷನ್‌ನಿಂದ ಹೆಚ್ಚುವರಿ 150 ಕೋಟಿ ರೂ. ಹೂಡಿಕೆಯ ವಿಸ್ತರಣೆ; ಎಂ.ಬಿ. ಪಾಟೀಲ್‌

Invest Karnataka

ಬೆಂಗಳೂರು: ಜಪಾನಿನ ನಿಡೆಕ್ ಕಾರ್ಪೋರೇಷನ್, ಹುಬ್ಬಳ್ಳಿ-ಧಾರವಾಡ ಕೈಗಾರಿಕಾ ಪ್ರದೇಶದಲ್ಲಿ ಹೆಚ್ಚುವರಿಯಾಗಿ ₹150 ಕೋಟಿ ಹೂಡಿಕೆಯೊಂದಿಗೆ (Invest Karnataka) ತನ್ನ ತಯಾರಿಕಾ ಘಟಕ ವಿಸ್ತರಿಸಲಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ (MB Patil) ತಿಳಿಸಿದ್ದಾರೆ. ನಿಡೆಕ್ ಮೋಷನ್ ಆ್ಯಂಡ್ ಎನರ್ಜಿ ಅಧ್ಯಕ್ಷ ಮೈಕೆಲ್ ಬ್ರಿಗ್ಸ್ ಅವರು ಗುರುವಾರ ಸಚಿವರ ಜತೆಗೆ ನಡೆಸಿದ ಸಭೆಯಲ್ಲಿ ಈ ವಿಸ್ತರಣಾ ಯೋಜನೆ ಪ್ರಕಟಿಸಲಾಗಿದೆ. ನಿಡೆಕ್, ಈ ಹಿಂದೆ ರಾಜ್ಯದಲ್ಲಿ ₹ 450 ಕೋಟಿ ಹೂಡಿಕೆ ಮಾಡಿತ್ತು. ಸಚಿವ ಪಾಟೀಲ ಅವರ ಇತ್ತೀಚಿನ ಜಪಾನ್ (Japan) ಭೇಟಿಯ ನಂತರ, ಕಂಪನಿಯು ಈಗ ಈ ಹೆಚ್ಚುವರಿ ಬಂಡವಾಳ ಹೂಡಿಕೆಗೆ ಮುಂದೆ ಬಂದಿದೆ.

ಈ ಸುದ್ದಿಯನ್ನೂ ಓದಿ | Bangalore Job Fair: ಬೆಂಗಳೂರಿನಲ್ಲಿ ನಾಳೆ ಬೃಹತ್ ಉದ್ಯೋಗ ಮೇಳ

ಈ ಹೊಸ ಹೂಡಿಕೆಯು ಕರ್ನಾಟಕದ ಕೈಗಾರಿಕಾ ಉತ್ತೇಜನಾ ಕ್ರಮಗಳ ಬಗ್ಗೆ ನಿಡೆಕ್ ಹೊಂದಿರುವ ವಿಶ್ವಾಸದ ದ್ಯೋತಕವಾಗಿದೆ. ಈ ಯೋಜನೆಯ ಕಾಮಗಾರಿಯು 2025ರ ಮಾರ್ಚ್ ಒಳಗೆ ಪೂರ್ಣಗೊಳ್ಳಲಿದ್ದು, ಅಕ್ಟೋಬರ್ ವೇಳೆಗೆ ಕಾರ್ಯಾರಂಭ ಮಾಡಲಿದೆ. ಈ ಯೋಜನೆಯ ವಿಸ್ತರಣೆಯಿಂದ 800 ಉದ್ಯೋಗ ಅವಕಾಶಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದು ಸಚಿವರು ಹೇಳಿದ್ದಾರೆ.

ಇಂಧನ ಸಂಗ್ರಹ ಪರಿಣತಿ ಬಳಕೆ

ಇಂಧನ ಸಂಗ್ರಹ ಕ್ಷೇತ್ರದಲ್ಲಿಯೂ ಪರಿಣತಿ ಮತ್ತು ಅಪಾರ ಅನುಭವ ಹೊಂದಿರುವ ನಿಡೆಕ್ ಸಹಯೋಗದಲ್ಲಿ ರಾಜ್ಯದಲ್ಲಿ ಉತ್ಪಾದನೆಯಾಗುವ ಹೆಚ್ಚುವರಿ ವಿದ್ಯುತ್ ಸಂಗ್ರಹದ ತಾಂತ್ರಿಕ ಸಾಧ್ಯತೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ರಾಸಾಯನಿಕಗಳಲ್ಲಿ ವಿದ್ಯುತ್‌ ಶೇಖರಣೆ ಮಾಡುವ ತಂತ್ರಜ್ಞಾನವು ಈಗಾಗಲೇ ಯುರೋಪ್‌ನಲ್ಲಿ ಬಳಕೆಯಲ್ಲಿದೆ. ಅದನ್ನು ರಾಜ್ಯದಲ್ಲಿಯೂ ಕಾರ್ಯಗತಗೊಳಿಸುವ ಸಾಧ್ಯತೆಗಳನ್ನು ಪರಿಶೀಲಿಸಲಾಯಿತು.

ಈ ನಿಟ್ಟಿನಲ್ಲಿ ಇಂಧನ ಇಲಾಖೆಯ ಅಧಿಕಾರಿಗಳ ಜತೆಗೆ ವಿವರವಾಗಿ ಚರ್ಚಿಸಲು ಕಂಪನಿಗೆ ಸೂಚಿಸಲಾಗಿದೆ. ಇಂಧನ ಸಚಿವರ ಜತೆ ಭೇಟಿ ನಿಗದಿಪಡಿಸಲು ಅಧಿಕಾರಿಗಳಿಗೆ ಸಲಹೆ ನೀಡಲಾಗಿದೆ. ವಿದೇಶಗಳಲ್ಲಿ ಬಳಕೆಯಲ್ಲಿ ಇರುವ ಈ ತಂತ್ರಜ್ಞಾನವನ್ನು ರಾಜ್ಯದಲ್ಲಿಯೂ ಕಾರ್ಯಗತಗೊಳಿಸುವ ಸಾಧ್ಯತೆಗಳನ್ನು ಪರಿಶೀಲಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಪಾಟೀಲ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ | Cyber Awareness: ಹ್ಯಾಕರ್‌ಗಳು ಸಂಘಟಿತರಾಗಿದ್ದಾರೆ: ಕೆ. ವೆಂಕಟೇಶ್ ಮೂರ್ತಿ

ಸಭೆಯಲ್ಲಿ ನಿಡೆಕ್‌ ಇಂಡಿಯಾದ ಅಧ್ಯಕ್ಷ ಹಾಗೂ ಕಂಟ್ರಿ ಮ್ಯಾನೇಜರ್‌ ಗಿರೀಶ್ ಕುಲಕರ್ಣಿ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಆಯುಕ್ತೆ ಗುಂಜನ್‌ ಕೃಷ್ಣ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *