Thursday, 12th December 2024

ಪಿಂಚಣಿದಾರರಿಂದ ಡಿಜಿಟಲ್‌ ಮೂಲಕ ಜೀವನ ಪ್ರಮಾಣ ಪತ್ರ ಸಲ್ಲಿಕೆ

ರಾಷ್ಟ್ರೀಯ ಜಾಗೃತ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಡಿಜಿಟಲ್ ಮೂಲಕ ಕೇಂದ್ರ ಸರ್ಕಾರದ ಪಿಂಚಣಿದಾರರು ಜೀವನ ಪ್ರಮಾಣ ಪತ್ರ ಸಲ್ಲಿಸುವ‌ ಕುರಿತು ಕಲಬುರಗಿ ನಗರದ ಸೂಪರ್ ಮಾರ್ಕೆಟ್ ಪ್ರದೇಶದ ಬಿ.ಎಸ್.ಎನ್.ಎಲ್. ಕಚೇರಿ ಬಳಿ ಇರುವ ಎಸ್.ಬಿ.ಐ ಬ್ಯಾಂಕ್ ಶಾಖೆಯಲ್ಲಿ ಆಯೋ ಜಿಸಿದ ರಾಷ್ಟ್ರೀಯ ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಭಾರತ ಸರಕಾರದ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ ಹಾಗೂ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಸಚಿವಾಲಯದಿಂದ ಆಯೋಜಿ ಸಿದ್ದ ಕಾರ್ಯಕ್ರಮಕ್ಕೆ ನೂರಾರು ಸಂಖ್ಯೆಯಲ್ಲಿ ಪಿಂಚಣಿದಾರರು ಉತ್ಸಾಹ ದಿಂದ ಭಾಗವಹಿಸಿದರು.

ರಾಷ್ಟ್ರ ದಾದ್ಯಂತ ಇಂದು ಕೇಂದ್ರದ ವಿವಿಧ ಸಚಿವಾಲಯಗಳು, ನೋಂದಾಯಿತ ಪಿಂಚಣಿದಾರರ ಸಂಘ, ಪಿಂಚಣಿ ವಿತರಿಸುವ ಬ್ಯಾಂಕ್ ಗಳ ಸಹಯೋಗದೊಂದಿಗೆ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯು ಈ ಅಭಿಯಾನ ಹಮ್ಮಿಕೊಳ್ಳ ಲಾಗಿತ್ತು.

ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮುಖ ದೃಢೀಕರಣ ತಂತ್ರಜ್ಞಾನದ ಆಧಾರದ ಮೇರೆಗೆ ಮೊಬೈಲ್ ಮೂಲಕ ಸಲ್ಲಿಸಲಾಗುವ ಜೀವನ ಪ್ರಮಾಣ ಪತ್ರದ ಕುರಿತು ಪಿಂಚಣಿದಾರರಿಗೆ ಮಾಹಿತಿ ನೀಡಿದರು.

ಮೊಬೈಲ್ ನಲ್ಲಿ jeevanpraman ತಂತ್ರಾಂಶ ಡೌನ್‌ಲೋಡ್ ಮಾಡಿಕೊಂಡು ಅದರಲ್ಲಿ ಮುಖ ದೃಢೀಕರಣದ ಜೊತೆಗೆ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ, ಪಿ.ಪಿ.ಓ. ಸಂಖ್ಯೆ ಮಾಹಿತಿ ನೀಡಿದಲ್ಲಿ ಒಂದೇ ನಿಮಿಷದಲ್ಲಿ ಜೀವನ ಪ್ರಮಾಣ ಪತ್ರ ಜನರೇಟ್ ಆಗಲಿದ್ದು, ಇದನ್ನು ಆನ್ ಲೈನ್ ನಲ್ಲಿಯೇ ಸಲ್ಲಿಸಿದರೆ ಸಾಕು. ಇದರಿಂದ ಭೌತಿಕವಾಗಿ ಬ್ಯಾಂಕಿಗೆ ಬಂದು ಪ್ರಮಾಣ ಪತ್ರ ಸಲ್ಲಿಸುವ, ಗಂಟೆಗಟ್ಟಲೆ ಪಾಳಿಯಲ್ಲಿ ನಿಲ್ಲುವ ಪರಿಸ್ಥಿತಿ ಇನ್ನು ಮುಂದೆ ಬೇಕಿಲ್ಲ ಎಂದು ಪಿಂಚಣಿದಾರರಿಗೆ ಮನವರಿಕೆ ಮಾಡಿಕೊಟ್ಟ ಅಧಿಕಾರಿಗಳು, ಈ ಕುರಿತು DOPPW_INDIA OFFICIAL ಯೂಟ್ಯೂಬ್ ನಲ್ಲಿ ಇದರ ಕಾರ್ಯವಿಧಾನ ವೀಕ್ಷಿಸ ಬಹುದಾಗಿದೆ‌ ಎಂದು ವಿವರಿಸಿದರು.

ಅಭಿಯಾನದಲ್ಲಿ ಭಾಗವಹಿಸಿದ ಪಿಂಚಣಿದಾರರು ಇಲಾಖೆಯ ಈ ಕ್ರಾಂತಿಕಾರಿ ಹೆಜ್ಜೆಗೆ ಸಂತಸ ವ್ಯಕ್ತಪಡಿಸಿದರು.

ಪಿಂಚಣಿದಾರನ ಮನೆಗೆ ತೆರಳಿ ಡಿಜಿಟಲ್ ಸೇವೆ: ಅಭಿಯಾನದ ಅಂಗವಾಗಿ ಕಲಬುರಗಿ ನಗರದ ಜಗತ್ ಪ್ರದೇಶದ 75 ವರ್ಷದ ಪಿಂಚಣಿದಾರ ನಾರಾಯಣರಾವ್ ಅವರ ಮನೆಗೆ ತೆರಳಿದ ಎಸ್.ಬಿ.ಐ. ಬ್ಯಾಂಕಿನ ಎ.ಜಿ.ಎಮ್ ವಿಕ್ರಮ ಪಿ., ಪಿಂಚಣಿ ಇಲಾಖೆಯ ದೀಪಕ್ ಪುಂಡಿರ್, ರಾಜೇಶ್ವರ ಶರ್ಮಾ ಅವರು ಮೊಬೈಲ್ ಮೂಲಕ ಸ್ಥಳದಲ್ಲಿಯೇ ಪಿಂಚಣಿದಾರನ ಜೀವನ ಪ್ರಮಾಣ ಪತ್ರ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಎಸ್.ಬಿ.ಐ. ಬ್ಯಾಂಕಿನ ಡಿ.ಜಿ.ಎಮ್. ಪಿ.ಎಲ್. ಶ್ರೀನಿವಾಸ ರಾವ್, ಎ.ಜಿ.ಎಮ್ ವಿಕ್ರಮ ಪಿ., ಪಿಂಚಣಿ ಇಲಾಖೆಯ ದೀಪಕ್ ಪುಂಡಿರ್, ರಾಜೇಶ್ವರ ಶರ್ಮಾ ಸೇರಿದಂತೆ ಬ್ಯಾಂಕಿನ ಇನ್ನಿತರ ಅಧಿಕಾರಿಗಳು ಇದ್ದರು.