ತುಮಕೂರು: ವಿದ್ಯಾರ್ಥಿಗಳು ಬದಲಾಗುತ್ತಿರುವ ತಂತ್ರಜ್ಞಾನ ಮತ್ತು ಮಾರುಕಟ್ಟೆಯ ಅಗತ್ಯತೆಗೆ ಹೊಂದಿಕೊಳ್ಳುವ ನಿಟ್ಟಿನಲ್ಲಿ ಚಾಣಾಕ್ಷತೆಯನ್ನು ತೋರಬೇಕಿದೆ ಎಂದು ಮಹಿಂದ್ರಾ ಮತ್ತು ಮಹಿಂದ್ರಾ ರೀಸರ್ಚ್ ವ್ಯಾಲಿಯ ಉಪಾಧ್ಯಕ್ಷ ಡಾ.ಶಂಕರ್ ವೇಣು ಗೋಪಾಲ್ ಕರೆನೀಡಿದರು.
ನಗರದ ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ 13ನೇ ವರ್ಷದ ಪದವಿ ಪ್ರಧಾನ ಸಮಾರಂಭ ದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತ ನಾಡಿದ ಅವರು, ಸೃಜನಶೀಲ ಮೆದುಳಿಗೆ ನಿಯಂತ್ರಣವನ್ನು ನೀಡಿ, ಊಹೆಗಳಿಗೆ ಸವಾಲೊಡ್ಡಿ ಎಂದು ಹೇಳಿದರು.
ವಿದ್ಯಾರ್ಥಿಗಳು ವಿಭಿನ್ನ ಆಲೋಚನೆಗಳಿಗೆ ಸಾಕಷ್ಟು ಸಮಯವನ್ನು ನೀಡಿ ಮುನ್ನಡೆಯ ಬೇಕಿದೆ. ಆರಂಭಿಕ ನಿರ್ಬಂಧಗಳನ್ನು ಗುರುತಿಸಿ, ಸರಿಯಾದ ದಿಕ್ಕಿನಲ್ಲಿ ಕಲ್ಪನೆಯನ್ನು ರೂಪಿಸಲು ಪರಿಪಕ್ವ ಜ್ಞಾನವನ್ನು ಬಳಸಿ.ನಾವೀನ್ಯತೆಯೆಂಬುದು ಒಳನೋಟ ವುಳ್ಳ ಮೌಲ್ಯವನ್ನು ಸೃಷ್ಟಿಸುತ್ತದೆ ಮತ್ತು ನಿಮ್ಮ ಆಲೋಚನೆಗಳನ್ನು ಯಶಸ್ವಿಯಾಗಿ ಮಾರುಕಟ್ಟೆಗೆ ತರುತ್ತದೆ ಎಂದು ಇಂಜಿನಿಯರಿಂಗ್ ಪದವೀಧರರಿಗೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಸಿದ್ದಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗಸ್ವಾಮೀಜಿ ಮಾತನಾಡಿ, ಸಿದ್ದಗಂಗಾ ಶಿಕ್ಷಣ ಸಂಸ್ಥೆಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ದೇಶದ ಸರಾಸರಿಗಿಂತಲೂ ಹೆಚ್ಚು ಅಂದರೆ ಶೇ39ರಷ್ಟು ಹೆಣ್ಣು ಮಕ್ಕಳು ಕಲಿಯುವ ಮೂಲಕ 12ನೇ ಶತಮಾನದ ಬಸವಣ್ಣನವರ ಅನುಭವ ಮಂಟಪದ ಮಹಿಳಾ ಸಬಲೀಕರಣದ ಕನಸನ್ನು ನನಸು ಮಾಡಲು ಮಾಡಿದ್ದಾರೆ ಎಂದು ತಿಳಿಸಿದರು.
ಪದವಿ ಎಂಬುದು ಓರ್ವ ವಿದ್ಯಾರ್ಥಿ ಜೀವನದ ಮೈಲಿಗಲ್ಲು,ಆದರೆ ನಿಜವಾದ ಸವಾಲು ಎದುರಾಗುವುದು ನೀವು ಆರಿಸಿಕೊಂಡಿ ರುವ ಕ್ಷೇತ್ರದಲ್ಲಿ ಕೆಲಸ ಮಾಡುವಾಗ.ನಿಮ್ಮ ಹಲವು ದಿನಗಳ ಕನಸು ನನಸಾದ ದಿನ.ಇದಕ್ಕಾಗಿ ನಿಮ್ಮ ತಂದೆ, ತಾಯಿಗಳು ಹಾಗೂ ಸಹಕರಿಸಿದ ಪೋಷಕರನ್ನು ಅಭಿನಂದಿಸುತ್ತೇನೆ.
ಇದುವರೆಗೂ ನಮ್ಮ ಕಾಲೇಜಿನಲ್ಲಿ ಕಲಿತ ಸುಮಾರು 38 ಸಾವಿರ ಜನರು ದೇಶ, ವಿದೇಶಗಳಲ್ಲಿ ಇಂಜನಿಯರ್ಗಳಾಗಿ, ಉದ್ದಿಮೆ ದಾರರಾಗಿ, ಶಿಕ್ಷಣ ತಜ್ಞರಾಗಿ,ಸಂಶೋಧಕರಾಗಿ,ಆಡಳಿತ ಗಾರರಾಗಿ ಹಾಗು ಜನಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸುತ್ತಿದ್ದು, ಹಳೆಯ ವಿದ್ಯಾರ್ಥಿಗಳ ಸಂಘ ಇವರೆಲ್ಲರನ್ನು ಬೆಸೆಯುವ ಪ್ರಯತ್ನ ನಡೆಸಿದೆ. 2022ರ ಅಕ್ಟೋಬರ್ 15 ರಂದು ಯುಎಸ್ಎ-ಕೆನಡಾದಲ್ಲಿರುವ ಎಸ್.ಐ.ಟಿಯಲ್ಲಿ ಓದಿದ ಕೆಲಸಗಾರರು ವಾಷಿಂಗ್ಟನ್ ಡಿ.ಸಿ.ಯಲ್ಲಿ ಆಯೋಜಿಸಿದ್ದ ಗ್ಲೊಬಲ್ಮೀಟ್ ಎಸ್.ಐ.ಟಿ ಕನೆಕ್ಟ್-2022 140ಕ್ಕೂ ಹೆಚ್ಚು ಜನರು ಭಾಗವಹಿಸಿದ್ದು ತುಂಬಾ ಸಂತೋಷ ತಂದಿದೆ ಎಂದು ನುಡಿದರು.
ಉದ್ಯೋಗಾವಕಾಶಗಳಲ್ಲಿಯೂ ಎಸ್.ಐ.ಟಿ ಮುಂದಿದ್ದು,ಕಳೆದ ವರ್ಷ 1400 ವಿದ್ಯಾರ್ಥಿಗಳು ಪ್ಲೆಸ್ಮೆಂಟ್ ಕ್ಯಾಂಪಸ್ ಸೆಲಕ್ಷನ್ ನಲ್ಲಿ ಆಗಿದೆ.ವಾರ್ಷಿಕ 46 ಲಕ್ಷ ರೂಗಳ ವೇತನ ಪಡೆದಿರುವುದು ಹೆಮ್ಮೆಯ ವಿಚಾರ.ಭಾರತ ಯುವಜನತೆಯನ್ನೇ ಹೆಚ್ಚಾಗಿ ಹೊಂದಿರುವ ದೇಶ.ದೇಶದ ಒಟ್ಟಾರೆ ಜನಸಂಖ್ಯೆಯ ಶೇ65ರಷ್ಟು ಜನರು 35 ವರ್ಷದ ಒಳಗಿನ ಯುವಕರಾಗಿದ್ದಾರೆ.
ಪ್ರಧಾನಿ ನರೇಂದ್ರಮೋದಿ ಅವರ ಆಶಯದಂತೆ ಈ ಯುವ ಶಕ್ತಿ ದೇಶ ಕಟ್ಟುವಲ್ಲಿ ಬಳಕೆಯಾಗಬೇಕೆಂಬುದು ನಮ್ಮ ಆಶಯ ವಾಗಿದೆ. ಸಂಶೋಧನೆ ಮತ್ತು ಉದ್ದಿಮೆ ಸ್ಥಾಪನೆ ಭಾರತದ ಅರ್ಥಿಕ ಬೆಳವಣಿಗೆ ಮತ್ತು ದೇಶದ ಸುಸ್ಥಿರ ಅಭಿವೃದ್ದಿಗೆ ಸಹಕಾರಿ ಯಾಗಲಿದೆ.ಸಂಶೋಧನೆ,ಉದ್ದಿಮೆ ಸ್ಥಾಪನೆಗೆ ಪೂರಕವಾಗಿರಬೇಕು ಎಂಬ ಕಾರಣಕ್ಕೆ ಶಿಕ್ಷಣ ಮತ್ತು ಕೈಗಾರಿಕೆಗಳನ್ನು ಒಗ್ಗೂಡಿ ಸುವ ಕೆಲಸ ನಡೆಯುತ್ತಿದೆ ಎಂದು ನುಡಿದರು.
13ನೇ ಪದವಿ ಪ್ರಧಾನ ಸಮಾರಂಭದಲ್ಲಿ 911 ಬಿ.ಇ,337 ಎಂ.ಟೆಕ್ ವಿಧ್ಯಾರ್ಥಿಗಳು ಪದವಿ ಆರ್ಹತಾ ಪತ್ರ ಪಡೆದಿದ್ದು, ಎಸ್.ಐ.ಟಿ ಹಾಗೂ ದಾನಿಗಳು ನೀಡಿರುವ ಸುಮಾರು 60 ಚಿನ್ನದ ಪದಕಗಳನ್ನು 31 ಜನ ವಿದ್ಯಾರ್ಥಿಗಳು ಪಡೆದಿದ್ದು, 12 ಪುರುಷರು ಮತ್ತು 22 ಜನ ಮಹಿಳೆಯರು ಹಂಚಿಕೊಂಡಿದ್ದಾರೆ.
ಬಯೋಟೆಕ್ನಾಲಿಜಿಯ ವಿದ್ಯಾರ್ಥಿನಿ ಅತಿ ಹೆಚ್ಚು ಅಂಕ ಪಡೆದು, ಡಾ.ಶ್ರೀಶಿವಕುಮಾರ ಸ್ವಾಮೀಜಿಗಳ ಚಿನ್ನದ ಪದಕ ಪಡೆದಿದ್ದಾರೆ. ವೇದಿಕೆಯಲ್ಲಿ ಎಸ್.ಐ.ಟಿ. ನಿರ್ದೇಶಕ ಡಾ.ಎಂ.ಎನ್.ಚನ್ನಬಸಪ್ಪ, ಸಿಇಓ ಡಾ.ಶಿವಕುಮಾರಯ್ಯ, ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್.ವಿ.ದಿನೇಶ್ ಹಾಗೂ ಎಸ್.ಐ.ಟಿ ಕಾಲೇಜಿನ ಎಲ್ಲಾ ವಿಷಯಗಳ ಮುಖ್ಯಸ್ಥರು ಉಪಸ್ಥಿತರಿದ್ದರು.