Tuesday, 10th December 2024

Drama: ಇಂದು ಪೂರ್ಣಚಂದ್ರ ತೇಜಸ್ವಿ ಅವರ ಅಣ್ಣನ ನೆನಪು ನಾಟಕ ಪ್ರದರ್ಶನ

ಗೌರಿಬಿದನೂರು : ನಗರದ ವಿ. ವಿ. ಪುರಂನ ಡಾ. ಎಚ್. ಎನ್. ಕಲಾಭವನದಲ್ಲಿ ಬೆಂಗಳೂರಿನ ಪ್ರವರ ಥಿಯೇಟರ್  ಪ್ರಸ್ತುತಪಡಿಸಿದ  ಅಣ್ಣನ ನೆನಪು ನಾಟಕ ಅ.20ರಂದು ಸಂಜೆ ೬:೩೦ಕ್ಕೆ ಕೆ.ಎಚ್.ಪುಟ್ಟಸ್ವಾಮಿಗೌಡ ಪ್ರತಿಷ್ಠಾನದ ಸಹಯೋಗದಲ್ಲಿ ನಡೆಯಲಿದೆ ಎಂದು ಎಚ್.ಎನ್.ಕಲಾಭವನದ ಸಾಂಸ್ಕೃತಿಕ ಸಂಯೋಜಕ ಡಾ.ಕೆ.ವಿ.ಪ್ರಕಾಶ್ ತಿಳಿಸಿದರು.

ನಗರದಲ್ಲಿ ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಆತ್ಮಕಥೆ ಆಧಾರಿತ ಅಣ್ಣನ ನೆನಪು ನಾಟಕ ಪ್ರದರ್ಶನ ಸಂಬ0ಧ ನಡೆಸಿದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.

ಸಾಹಿತಿ,ಪರಿಸರ ಪ್ರೇಮಿ, ಅತ್ಯುತ್ತಮ ಛಾಯಾಗ್ರಾಹಕ ಪಂಪ ಪ್ರಶಸ್ತಿ ಪುರಸ್ಕೃತರಾದ  ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಅಣ್ಣನ ನೆನಪು ಅವರ ಆತ್ಮಕಥೆಯಾಗಿದ್ದು ಇದರಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ  ಮಹಾಕವಿ ಕುವೆಂಪು ಅವರ ಜೀವನದ ಮಹತ್ವದ ಸಂಗತಿಗಳನ್ನು ಸಹಜವಾಗಿ ಕಟ್ಟಿಕೊಟ್ಟಿದ್ದಾರೆ.ಎಲ್ಲೂ ಕೂಡ ತಂದೆಯ ಗುಣಗಾನ ಮಾಡದೆ ಅವರ ನೈಜ ವ್ಯಕ್ತಿತ್ವವನ್ನು ಒಬ್ಬ ಸಾಮಾನ್ಯ ಮಗನಂತೆ ತೇಜಸ್ವಿ ಕಟ್ಟಿಕೊಡುತ್ತಾರೆ.ಕುವೆಂಪು ಅವರ ವ್ಯಕ್ತಿತ್ವದಲ್ಲಿದ್ದ ಮಾನವೀಯತೆ, ಮುಗ್ಧತೆ, ವೈಜ್ಞಾನಿಕ ಮನೋಭಾವ, ನಿಷ್ಟುರತೆಗಳನ್ನು ಅವರು ಅನೇಕ ಪ್ರಸಂಗಗಳ ಮುಖಾಂತರವೇ ತಿಳಿಸುತ್ತಾರೆ ಎಂದರು.

ಈ ಕೃತಿ ರಂಗರೂಪತಾಳಿ ವೀಕ್ಷಕರ ಮುಂದೆ ಬರಲಿದೆ. ಈ ನಾಟಕವನ್ನು ಹನು ರಾಮಸಂಜೀವ ವಿನ್ಯಾಸ ಮತ್ತು ನಿರ್ದೇಶನ ಮಾಡಿದ್ದಾರೆ. ಕರ್ಣಂ ಪವನ್ ಪ್ರಸಾದ್ ರಂಗರೂಪ ನೀಡಿದ್ದಾರೆ. ಸಂಗೀತ  ಅಕ್ಷಯ್ ಬೋಂಸ್ಲೇ, ಪ್ರಸಾದನ ಮಾಲತೇಶ್ ಬಡಿಗೇರ್, ರೇಖಾಚಿತ್ರ ಹರ್ಷ ಕಾವೇರಿಪುರ, ಬೆಳಕು ಮತ್ತುವಿನ್ಯಾಸ ಮಂಜು ನಾರಾಯಣ್ ಮತ್ತು ಅಜಯ್ ಕುಮಾರ್ ನಿರ್ವಹಣೆ ಮಾಡಲಿದ್ದಾರೆ.

ಕೆ. ಎಚ್. ಪಿ ಪ್ರತಿಷ್ಠಾನದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀನಿವಾಸ ಗೌಡ, ಬೆಂಗಳೂರು ವಿಶ್ವಮಾನವ ವೇದಿಕೆ ಅಧ್ಯಕ್ಷ ಜಿ. ಟಿ. ನರೇಂದ್ರ ಕುಮಾರ್ ಮತ್ತು ಡಾ.ಎಚ್.ಎನ್ ಕಲಾಭವನದ ಸಾಂಸ್ಕೃತಿಕ ಸಂಯೋಜಕರಾದ ಡಾ. ಕೆ.ವಿ. ಪ್ರಕಾಶ್ ರವರು ನಾಟಕ ಪ್ರದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರಂಗಾಸಕ್ತರು ಆಗಮಿಸಿ ಪ್ರೋತ್ಸಾಹಿಸಬೇಕೆಂದು ವಿನಂತಿಸಿಕೊ0ಡಿದ್ದಾರೆ.