ಕೇಂದ್ರದ ಬಿಜೆಪಿ ಸರ್ಕಾರ ತೆರಿಗೆ ಪಾಲು ನೀಡದೇ ಕನ್ನಡಿಗರಿಗೆ ದ್ರೋಹವೆಸಗಿದೆ
ಮೈಸೂರು, ಏಪ್ರಿಲ್ 2 : ರಾಜ್ಯದ ಜನರಿಗೆ ಬರಸಂಕಷ್ಟದಲ್ಲಿ ಸಹಾಯಕ್ಕೆ ಬರದ ಕೇಂದ್ರ ಸಚಿವ ಅಮಿತ್ ಶಾ ಅವರು, ರಾಜ್ಯದ ಜನರ ಬಳಿ ಮತ ಕೇಳಲು ಯಾವ ನೈತಿಕ ಹಕ್ಕಿದೆ. ಇಂತಹ ಬಿಜೆಪಿಯವರಿಗೆ ಜನರು ಮತ ನೀಡಬೇಕೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಅವರು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಬಿಜೆಪಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ರಾಜ್ಯದ ತೆರಿಗೆ ಹಣದಲ್ಲಿ ರಾಜ್ಯಕ್ಕೆ ಪಾಲು ನೀಡುತ್ತಿಲ್ಲ. ಆದರೆ ಮಾಜಿಮುಖ್ಯಮಂತ್ರಿ ಈ ಬಗ್ಗೆ ಚಕಾರವೆತ್ತದೇ, ಬಿಜೆಪಿಯ ವಕ್ತಾರರಾಗಿಬಿಟ್ಟಿದ್ದಾರೆ. ಕೇಂದ್ರದ ಈ ಧೋರಣೆ ಕನ್ನಡಿಗರಿಗೆ ಮಾಡುತ್ತಿರುವ ದ್ರೋಹ. ಬಿಜೆಪಿಯವರ ಈ ಧೋರಣೆಗೆ ರಾಜ್ಯದ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯದಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಹೈಲೆಪಲ್ ಕಮಿಟಿ ಅಧ್ಯಕ್ಷರಾಗಿರುವ ಅಮಿತ್ ಶಾ ಅವರು ಬರಪರಿಹಾರಕ್ಕೆ ಸಮ್ಮತಿ ಸೂಚಿಸಿಲ್ಲ. ಮೇಕೆದಾಟು ಯೋಜನೆ, ಮಹದಾಯಿ ಯೋಜನೆಗೂ ಇದುವರೆಗೆ ಅನುಮತಿ ನೀಡಿದ್ದಾರೆಯೇ ಎಂದು ಪ್ರಶ್ನಿಸಿದರು.
ಅಮಿತ್ ಶಾ ವಿರುದ್ಧ ನೀಡಿದ ಹೇಳಿಕೆಗಾಗಿ ಚುನಾವಣಾ ಆಯೋಗದಿಂದ ನೋಟೀಸ್ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಚುನಾ ವಣಾ ಆಯೋಗ ನೀಡಿರುವ ನೋಟೀಸ್ ಗೆ ಉತ್ತರ ನೀಡಲಾಗಿದೆ. ಸಿಬಿಐ ನವರು ನೀಡಿರುವ ವರದಿಯ ಮೇಲೆ ಹೇಳಿಕೆ ನೀಡಿದ್ದು, ಈ ಬಗ್ಗೆ ಸ್ಪಷ್ಟೀಕರಣವನ್ನು ಈಗಾಗಲೇ ನೀಡಿದ್ದೇನೆ ಎಂದರು.
ಕಾಂಗ್ರೆಸ್ ಸರ್ಕಾರದ ಸಾಧನೆಗಳ ಮೇಲೆ ಚುನಾವಣೆ
ವರುಣಾ ಕ್ಷೇತ್ರದ ಮುಖ್ಯಮಂತ್ರಿಗಳ ನಿನ್ನೆಯ ಪ್ರಚಾರ ಭಾಷಣದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿ, ರಾಜ್ಯದಲ್ಲಿ ಜನಪರ ಯೋಜನೆಗಳು ,ಅಭಿವೃದ್ಧಿ ಕಾರ್ಯಗಳು ಮುಂದುವರೆಯಬೇಕಾದರೆ ನಮ್ಮ ಸರ್ಕಾರವೇ ಅಸ್ತಿತ್ವದಲ್ಲಿರಬೇಕು. ಬಿಜೆಪಿಯವರು ಅಧಿಕಾರಕ್ಕೆ ಬಂದಲ್ಲಿ, ಜನಪರ ಯೋಜನೆಗಳನ್ನು ನಿಲ್ಲಿಸುತ್ತಾರೆ ಎಂದು ಜನರಿಗೆ ಮನವರಿಕೆ ಮಾಡಿಸಿದ್ದೇನೆ. ಬಿಜೆಪಿಯವರು ಕೇವಲ ಸುಳ್ಳು ಹೇಳುತ್ತಿದ್ದಾರೆ.ಕಾಂಗ್ರೆಸ್ ಸರ್ಕಾರ ಮಾಡಿರುವ ಸಾಧನೆಗಳ ಆಧಾರದ ಮೇಲೆ ಮತ ಕೇಳುತ್ತಿದ್ದು, ಜನ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲಿದ್ದಾರೆ ಎಂಬ ಭರವಸೆಯಿದೆ ಎಂದರು.
ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮ
ರಾಜ್ಯದಲ್ಲಿ ಬರದಿಂದ ನೀರಿನ ಸಮಸ್ಯೆ ಹೆಚ್ಚಾಗಿದೆ ಎಂಬುದಕ್ಕೆ ಪ್ರತಿಕ್ರಿಯೆ ನೀಡಿ, ಮಾಧ್ಯಮಗಳು ಊಹಾಪೋಹಗಳ ಮೇಲೆ ವರದಿ ಮಾಡಬಾರದು. ರಾಜ್ಯದ ಯಾವುದೇ ಭಾಗದಲ್ಲಿಯೂ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಲಾಗಿದೆ ಎಂದರು.
ಅಕ್ರಮ ಗಣಿಗಾರಿಕೆ: ಸಚಿವರ ವಿರುದ್ಧ ವರದಿ ಬಂದಿಲ್ಲ
ಶಾಸಕ ಜನಾರ್ಧನ ರೆಡ್ಡಿಯವರು ಸಚಿವರಾದ ಸಂತೋಷ್ ಲಾಡ್ ಹಾಗೂ ನಾಗೇಂದ್ರ ಅವರ ಮೇಲೆ ಅಕ್ರಮ ಗಣಿಗಾರಿಕೆ ಆರೋಪದ ಕುರಿತು ಟೀಕಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ,ಅಕ್ರಮ ಗಣಿಗಾರಿಕೆ ನಡೆಸಿರುವ ಬಗ್ಗೆ ಸಾಕ್ಷ್ಯಧಾರಗಳಿದ್ದರೆ ನ್ಯಾಯಾ ಯಲದ ಮೊರೆ ಹೋಗಬೇಕು. ಜನಾರ್ಧನ ರೆಡ್ಡಿಯವರು ಅಕ್ರಮಗಣಿಗಾರಿಕೆಯಲ್ಲಿ ತೊಡಗಿದ್ದರು ಎಂದು ವರದಿಯಲ್ಲಿ ಬಂದ ಕಾರಣದಿಂದಾಗಿ, ನಾನು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಹೋರಾಟ ಮಾಡಿ, ಪಾದಯಾತ್ರೆ ಕೈಗೊಂಡಿದ್ದೆ. ಈ ರೀತಿಯ ಯಾವ ವರದಿಗಳು ಈ ಸಚಿವರ ಮೇಲೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಹಾಸನದಲ್ಲಿ ಕಾಂಗ್ರೆಸ್ ಪರ ಜನರ ಒಲವು
ಮಂಡ್ಯದಲ್ಲಿ ಕುಮಾರಸ್ವಾಮಿಯವರು ಚುನಾವಣೆ ಎದುರಿಸುತ್ತಿರುವುದು ದೈವೇಚ್ಛೆ ಎಂದ ಬಗ್ಗೆ ಪ್ರತಿಕ್ರಿಯೆ ನೀಡಿ, ಹಿಂದೆ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಅವರ ಮಗನನ್ನು ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಿಲ್ಲಿಸಿ ಸೋಲನ್ನು ಅನುಭವಿಸಿದರು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಾನು ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಪರ ಪ್ರಚಾರ ಮಾಡಿದ್ದರಿಂದ ಅವರು ಹಾಸನದಲ್ಲಿ ಗೆಲುವನ್ನು ಸಾಧಿಸಿದರು. ಈ ಬಾರಿ ಹಾಸನದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲೇ ಬೇಕೆಂದು ಕಾರ್ಯಪ್ರವೃತ್ತರಾಗಿದ್ದು, ಹಾಸನದ ಜನತೆ ಕಾಂಗ್ರೆಸ್ ಪಕ್ಷದತ್ತ ಒಲವು ತೋರಿದ್ದಾರೆ ಎಂದರು.
ಯಾವುದೇ ಆತಂಕ ಇಲ್ಲ
ವರುಣಾ ಜನರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸಬೇಕೆಂದು ಬಯಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಬಾರಿಯ ನನ್ನ ಸರ್ಕಾರದ ಅವಧಿಯೇ ನಾಲ್ಕು ವರ್ಷವಿದೆ. ನನ್ನ 82 ನೇಯ ವಯಸ್ಸಿಗೆ ನನ್ನ ರಾಜಕೀಯ ಜೀವನಕ್ಕೆ 50 ವರ್ಷವಾಗುತ್ತದೆ. ಚುನಾವಣೆಯ ಬಗ್ಗೆ ಯಾವುದೇ ರೀತಿಯ ಆತಂಕವಿಲ್ಲ ಎಂದರು.