ತುಮಕೂರು: ಬಡವರಿಗಾಗಿ ಕೇಂದ್ರ ಸರಕಾರ ಅಕ್ಕಿ ಕೊಡುತ್ತಿಲ್ಲ. ದೇಶದ ಗೋದಾಮಿ ನಲ್ಲಿ ಅಕ್ಕಿ ಕೊಳೆಯುತ್ತಿದ್ದರೂ ರಾಜಕೀಯ ಮಾಡುತ್ತಿದ್ದಾರೆ ಎಂದು ಗೃಹಸಚಿವ ಪರಮೇಶ್ವರ್ ಕಿಡಿಕಾರಿದರು.
ಬಕ್ರೀದ್ ಹಬ್ಬದ ಪ್ರಯುಕ್ತ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಮುಸ್ಲಿಂ ಬಾಂಧವರಿಗೆ ಹಬ್ಬದ ಶುಭಾಶಯ ಕೋರಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಎಫ್‌ಸಿಐನಲ್ಲಿ 7 ಲಕ್ಷ ಟನ್ ಅಕ್ಕಿ ದಾಸ್ತಾನಿದೆ. ಖಾಸಗಿಯವರಿಗೆ ಮಾರುತ್ತಿದ್ದಾರೆ. ನಮಗೆ ರಾಜಕೀಯ ಕಾರಣಕ್ಕೋಸ್ಕರ ಅಕ್ಕಿ ಕೊಡುತ್ತಿಲ್ಲ ಎಂದು ದೂರಿದರು.
ಬಡವರ ಹಸಿವಿನ ವಿಚಾರದಲ್ಲಿ ರಾಜಕೀಯ ಮಾಡಬಾರದು. ನಾವು ಅಕ್ಕಿ ಕೊಡಲೇ ಬೇಕು ಎಂದು ತೀರ್ಮಾನ ಮಾಡಿದ್ದೇವೆ. ಅಕ್ಕಿ ಕೊಟ್ಟೇ ಕೊಡುತ್ತೇವೆ. ಸದ್ಯಕ್ಕೆ ತಾತ್ಕಾಲಿಕ ವಾಗಿ ಅಕ್ಕಿ ಬದಲಿಗೆ ದುಡ್ಡು ಕೊಡುತ್ತಿದ್ದೇವೆ. ಅಕ್ಕಿ ಕೊಡುವ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು.
5 ಕೆ.ಜಿ. ಅಕ್ಕಿ ಬದಲಿಗೆ ದುಡ್ಡು ಕೊಡುತ್ತಿದ್ದೇವೆ. ಕೇವಲ ಮೂರು ತಿಂಗಳ ಕಾಲ ಮಾತ್ರ ದುಡ್ಡು ಕೊಡುತ್ತೇವೆ. ಅಷ್ಟರಲ್ಲಿ ಅಕ್ಕಿ ಹೊಂದಿಸುತ್ತೇವೆ. 10 ಕೆ.ಜಿ. ಅಕ್ಕಿಗೆ ದುಡ್ಡು ಹಾಕಬೇಕು ಎಂಬ ಬಿಜೆಪಿಯವರ ವಾದ ಸರಿಯಿಲ್ಲ. ಬಿಜೆಪಿಯವರಿಗೆ ಇದರ ಕುರಿತು ಮಾತನಾಡುವ ನೈತಿಕತೆ ಇಲ್ಲ. ನಾವು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದೇವೆ ಎಂದರು.
ಅಕ್ಕಿ ಬದಲು ದುಡ್ಡು ಕೊಡಿ ಎಂದು ಬಿಜೆಪಿಯವರು ಸಲಹೆ ನೀಡಿದಕ್ಕೆ ದುಡ್ಡು ತಿನ್ನೋಕಾಗುತ್ತಾ ಎಂದ ಸಿದ್ದರಾಮಯ್ಯ ಅವರು ಹೇಳಿದ್ದ ವಿಚಾರವನ್ನು ಪತ್ರಕರ್ತರು ಪ್ರಸ್ತಾಪಿಸಿದಾಗ, ಇದು ಪ್ರೆಸ್ಟೀಜ್ ವಿಚಾರ ಆಗಬಾರದು. ಬಡವರ ಹಸಿವಿನ ಪ್ರಶ್ನೆಯಾಗ ಬೇಕು. ಪ್ರೆಸ್ಟಿಜ್‌ನಿಂದ ಹೊಟ್ಟೆ ತುಂಬಲ್ಲ. ಬಿಜೆಪಿಯವರೇ ಹಣ ಕೊಡಿ ಹಣ ಕೊಡಿ ಎಂದು ಬೊಬ್ಬೆಯೊಡೆದರು. ಈಗ ಏಕಾಏಕಿ ಟೀಕೆ ಮಾಡುತ್ತಿದ್ದಾರೆ. ಬಡವರ ಹಸಿವಿನ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು ಬಿಜೆಪಿ ಸ್ನೇಹಿತರಲ್ಲಿ ಮನವಿ ಮಾಡುತ್ತೇವೆ ಎಂದು ಹೇಳಿದರು.
ಬಕ್ರೀದ್ ಹಬ್ಬ ತ್ಯಾಗ ಬಲಿದಾನದ ಸಂಕೇತ. ಮಹಮ್ಮದ್ ಇಬ್ರಾಹಿಂ ತನ್ನ ಮಗನನ್ನೇ ಅಲ್ಲಾನಿಗೆ ಬಲಿ ಕೊಟ್ಟಿದ್ದರು. ಅಂತಹ ಮಹಾನ್ ಬಲಿದಾನದ ಸಂಕೇತ. ಎಲ್ಲರಿಗೂ ಶುಭಕಾಮನೆ ಹೇಳಿದ್ದೇನೆ. ಭಾರತ ಶಾಂತಿ ನಂಬಿದ ದೇಶ, ಸಂವಿಧಾನದಲ್ಲೇ ಅದನ್ನು ಅಳವಡಿಸಿಕೊಂಡಿದ್ದೇವೆ ಎಂದರು.
ಎಲ್ಲೋ ಒಂದು ಕಡೆ ಮುಸ್ಲಿಂರಿಗೆ ಹಿಂದಿನ ಸರ್ಕಾರದಿಂದ ಆತಂಕ ಇತ್ತು, ಭಯದ ವಾತಾವರಣ ಇತ್ತು. ಅದೆಲ್ಲವನ್ನೂ ಬಿಟ್ಟು ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ಕಾಂಗ್ರೆಸ್ ಜಾತ್ಯಾತೀತವಾದ ಪಕ್ಷ. ಹಾಗಾಗಿ ಅವರು ನಮ್ಮ ಜತೆ ನಿಂತಿದ್ದಾರೆ, ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.
*
ನಮ್ಮ ಮೇಲೆ ದೊಡ್ಡ ಜವಾಬ್ದಾರಿ ಇದೆ. ಅಭಿವೃದ್ಧಿ ಜತೆಗೆ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಡಬೇಕಿದೆ. ಗೃಹ ಸಚಿವನಾಗಿ ಶಾಂತಿ ಕಾಪಾಡುವ ಕೆಲಸ ಮಾಡುತ್ತೇನೆ. ಯಾರ ಮೇಲೂ ದ್ವೇಷ ಸಾಧಿಸಲು ಹೋಗುವುದಿಲ್ಲ. ಶಾಂತಿ ಕಾಪಾಡುವುದು ನಮ್ಮ ಆದ್ಯತೆ.
ಡಾ.ಪರಮೇಶ್ವರ್, ಗೃಹಸಚಿವ.