ಈ ಕುರಿತು ಬುಧವಾರ ಸ್ಪಷ್ಟನೆ ನೀಡಲಾಗಿದೆ. ಡಿ.ವಿ. ಸದಾನಂದ ಗೌಡರು ಕಾಂಗ್ರೆಸ್ ಸೇರುವುದಿಲ್ಲ ಎಂದು ಎಸ್. ಹರೀಶ್, ಜಿಲ್ಲಾಧ್ಯಕ್ಷರು, ಬೆಂಗಳೂರು ಉತ್ತರ ಪ್ರಕಟಣೆಯೊಂದನ್ನು ನೀಡಿದ್ದಾರೆ.
ಮಾಧ್ಯಮಗಳಲ್ಲಿ ಬರುತ್ತಿರುವಂತೆ ನಮ್ಮ ಸದಾನಂದ ಗೌಡರು ಕಾಂಗ್ರೆಸ್ ಪಕ್ಷವನ್ನು ಸೇರುವುದು ಸತ್ಯಕ್ಕೆ ದೂರವಾದ ಮಾತು. ಸದಾನಂದ ಗೌಡರು ಶಿಸ್ತಿನ ಸಿಪಾಯಿ. ಸಂಘ ಪರಿವಾರದ ಸದಸ್ಯರು. ಅವರು ಕಾಂಗ್ರೆಸ್ ಇಂದ ಆಫರ್ ಬಂದಿದೆ ಎಂದಷ್ಟೇ ಹೇಳಿದ್ದು. ಆದರೆ ಸೇರುತ್ತೇನೆ ಎಂದು ಹೇಳಲೇ ಇಲ್ಲ’ ಎಂದು ಹೇಳಿದ್ದಾರೆ.
ಮೋದಿ ಅಲೆಯನ್ನು ನೋಡಿ ಈಗಲೇ ಸೋಲುವ ಭೀತಿಯಲ್ಲಿರುವ ಕಾಂಗ್ರೆಸ್ ನಾಯಕರು ಜನರ ಹಾದಿ ತಪ್ಪಿಸಲು ಈ ರೀತಿಯ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ’ ಎಂದು ತಿಳಿಸಿದ್ದರು.’ಸದಾನಂದ ಗೌಡರಂತೆ ನಿಷ್ಠಾವಂತ, ಶಿಸ್ತುಬದ್ದ ಕಾರ್ಯಕರ್ತ ಬಿಜೆಪಿಯಲ್ಲಿ ಯಾರು ಇಲ್ಲ. ಇವರೊಬ್ಬ ಸ್ಥಿತಪ್ರಜ್ಞ ರಾಜಕಾರಣಿ ಯಾವುದೇ ಕಾರಣಕ್ಕೂ ಅವರು ಕಾಂಗ್ರೆಸ್ ಸೇರಲಾರರು’ ಎಂದು ಎಸ್. ಹರೀಶ್ ಹೇಳಿದ್ದಾರೆ.
ಮಂಗಳವಾರ ರಾತ್ರಿ ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಕೈತಪ್ಪಿರುವ ಸದಾನಂದ ಗೌಡರಿಗೆ ಹೈಕಮಾಂಡ್ ನಾಯಕರು ಕರೆ ಮಾಡಿದ್ದರು. ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ನೀಡುವ ಕುರಿತು ಭರವಸೆ ನೀಡಿದ್ದಾರೆ ಎಂಬ ಸುದ್ದಿ ಇದೆ.ಇಂದು ಅಥವ ನಾಳೆ ಬಿಡುಗಡೆಯಾಗಲಿರುವ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಸದಾನಂದ ಗೌಡರಿಗೆ ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ನೀಡಲಾಗುತ್ತದೆ. ಈ ಕುರಿತು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.
ವೈ. ವಿಜಯೇಂದ್ರ ಸಹ ಸದಾನಂದ ಗೌಡರ ಜೊತೆ ಮಾತುಕತೆ ನಡೆಸಿದ್ದಾರೆ. ಮಂಗಳವಾರ ಸದಾನಂದ ಗೌಡರು ಕಾಂಗ್ರೆಸ್ ಸೇರಿ ಉಡುಪಿ-ಚಿಕ್ಕಮಗಳೂರು ಅಥವ ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿಗಳು ಹಬ್ಬಿತ್ತು.
ಚಿಕ್ಕಬಳ್ಳಾಪುರದ ಹಾಲಿ ಸಂಸದ ಬಿ. ಎನ್.ಬಚ್ಚೇಗೌಡ. ಆದರೆ ಅವರು ಈ ಬಾರಿಯ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಈಗಾಗಲೇ ಅವರು, “ಬೇರೆ ರಾಜಕೀಯ ಪಕ್ಷ ಸೇರುವುದಿಲ್ಲ. ಚುನಾವಣಾ ರಾಜಕೀಯದಿಂದ ದೂರ ಇರುವೆ. ಆದರೆ ಸಕ್ರಿಯ ರಾಜಕಾರಣದಲ್ಲಿಯೇ ಇರುವೆ” ಎಂದು ಸ್ಪಷ್ಟಪಡಿಸಿ ದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣೆಗೆ ಬಿಜೆಪಿ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಆದರೆ ಚಿಕ್ಕಬಳ್ಳಾಪುರಕ್ಕೆ ಅಭ್ಯರ್ಥಿ ಘೋಷಿಸಿಲ್ಲ. ಮಂಡ್ಯ ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವ ಕಾರಣ ಸುಮಲತಾ ಚಿಕ್ಕಬಳ್ಳಾಪುರದಿಂದ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಇತ್ತು.