Friday, 22nd November 2024

Eid Milad Celebration: ಮೆರವಣಿಗೆ ಮೂಲಕ ಸಾಗಿ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪಾರ್ಥನೆ ಸಲ್ಲಿಕೆ

ಜಿಲ್ಲೆಯಲ್ಲಿ ಶಾಂತಿಯಿಂದ ಸಂಭ್ರಮದಿಂದ ನಡೆದ ಈದ್ ಮಿಲಾದ್ ಆಚರಣೆ

ಚಿಕ್ಕಬಳ್ಳಾಪುರ: ಜಿಲ್ಲೆಯಾದ್ಯಂತ ಇಸ್ಲಾಂ ಧರ್ಮ ಸಂಸ್ಥಾಪಕ ಪ್ರವಾದಿ ಮಹಮದ್ ಪೈಗಂಬರ್ ಅವರ ಜನ್ಮ ದಿನದ ಸಂಕೇತವಾಗಿರುವ ಈದ್‌ಮಿಲಾದ್ ಹಬ್ಬವನ್ನು ಮುಸ್ಲಿಂ ಬಾಂಧವರು ಸಡಗರ ಸಂಭ್ರಮದಿಂದ ಆಚರಿಸಿ ದರು. ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆಯಲ್ಲಿ ಸಕಲರೂ ಭಾಗಿಯಾಗಿ ದೈವಕೃಪೆಗೆ ಪಾತ್ರವಾದರು.

ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮುಸ್ಲಿಂ ಸಮಾಜ ಬಾಂಧವರ ಪವಿತ್ರ ಯಾತ್ರ ಸ್ಥಳವಾಗಿರುವ ಮೆಕ್ಕಾ-ಮದೀನಾ ಕ್ಕೆ ಹೋಲುವ ರೀತಿಯ ಸ್ತಬ್ಧ ಚಿತ್ರಗಳನ್ನು ರಚಿಸಿ,ಕಣ್ಣು ತುಂಬಿಕೊಂಡರು. ಅಲ್ಲದೆ, ಹಬ್ಬದ ಪ್ರಯುಕ್ತ ಹೊಸ ಬಟ್ಟೆ ತೊಟ್ಟು, ಪರಸ್ಪರ ಈದ್‌ಮಿಲಾದ್ ಶುಭಾಶಯವನ್ನು ವಿನಿಮಯ ಮಾಡಿಕೊಳ್ಳುತ್ತಿದ್ದ ದೃಶ್ಯ ಅಲ್ಲಲ್ಲಿ ಸಾಮಾನ್ಯವಾಗಿತ್ತು.

ಹಬ್ಬದ ಹಿನ್ನೆಲೆಯಲ್ಲಿ ಗೌರಿಬಿದನೂರು, ಬಾಗೇಪಲ್ಲಿ, ಗುಡಿಬಂಡೆ ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ ನಗರ ಗಳಲ್ಲಿ ಮುಸ್ಲಿಂ ಸಮುದಾಯ ತಮ್ಮ ಮನೆಗಳಲ್ಲಿ ಬಗೆ ಬಗೆಯ ಭಕ್ಷ್ಯ ಭೋಜ್ಯಗಳನ್ನು ತಯಾರಿಸಿ ಬಂಧು ಬಾಂಧವ ರನ್ನು ಕರೆಸಿ ಉಣಬಡಿಸಿದರಲ್ಲದೆ ತಾವು ಸವಿದು ಸಂಭ್ರಮಿಸಿದರು.

ಚಿಂತಾಮಣಿಯ ದೊಡ್ಡಪೇಟೆಯ ಜಾಮಿಯಾ ಮಸೀದಿ ಸಮೀಪದಿಂದ ಫಾತೇಹಖಾನಿ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಯುವಕರು ಬಿಳಿ ಬಣ್ಣದ ಕುರ್ತಾ ಧರಿಸಿ, ಕೈಯಲ್ಲಿ ಹಸಿರು ಝಂಡಾ ಹಿಡಿದು, ಬೀಸುತ್ತಾ, ಮುಸ್ಲಿಂ ಧರ್ಮದ ಭಕ್ತಿ ಗೀತೆಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಮೆರವಣಿಗೆಯಲ್ಲಿ ಭಾಗವಹಿ ಸಿದ್ದ ಚಿಣ್ಣರು ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅವರ ವೇಷ ಧರಿಸಿ ಗಮನ ಸೆಳೆದರೆ, ಮೆಕ್ಕಾ ಮತ್ತು ಮದಿನಾದ ಸ್ತಬ್ಧ ಚಿತ್ರ ನೋಡುಗರ ಕಣ್ಮನ ಸೆಳೆಯುತ್ತಿತ್ತು.

ಕಣ್ಣು ಹರಿದಷ್ಟು ದೂರ ಕಾಣುತ್ತಿದ್ದ ಬೃಹತ್ ಮೆರವಣಿಗೆಯಲ್ಲಿ ಹಿರಿಯರು, ಕಿರಿಯರು ಎನ್ನದೆ ಸಂಭ್ರಮ, ಸಡಗರ ಗಳಿಂದ ಭಾಗವಹಿಸಿದ್ದರು. ಹೆಣ್ಣುಮಕ್ಕಳು ರಸ್ತೆಯ ಎರಡೂ ಕಡೆ ನಿಂತು ಮೆರವಣಿಗೆಯ ಉತ್ಸಾಹವನ್ನು ಕಣ್ತುಂಬಿಸಿ ಕೊಂಡರು.

ಮೆರವಣಿಗೆ ನಗರದ ಬಾಗೇಪಲ್ಲಿ ಈದ್ಗಾ ಮೈದಾನಕ್ಕೆ ತೆರಳಿ  ಮುಕ್ತಾಯವಾಯಿತು. ಬಳಿಕ ಇಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಇಸ್ಲಾಂ ಧರ್ಮಗುರುಗಳು ಭಾಷಣ ಮಾಡಿದರು. ಈ ವರ್ಷ ಬರಗಾಲದ ಹಿನ್ನೆಲೆಯಲ್ಲಿ ಮಳೆ, ಬೆಳೆ ಆಗಿ ಹಸಿರೀಕರಣ ಆಗಲಿ.ಸುಖ,ಶಾಂತಿ ನೆಲೆಸಲಿ ಎಂದು ಪ್ರಾರ್ಥನೆ ಸಲ್ಲಿಸಲಾಯಿತು.

ಯಾವುದೇ ಡಿ.ಜೆ.ಅಬ್ಬರವಿಲ್ಲದೇ ಸರ್ವಶಕ್ತನಾದ ಅಲ್ಲಾಹುವಿನ ನಾಮಸ್ಮರಣೆ ಮಾಡುತ್ತಾ ಶಾಂತಿಯುತವಾಗಿ ಮೆರವಣಿಗೆಯಲ್ಲಿ ಸಾಗುವ ಮೂಲಕ ನೆಲದ ಕಾನೂನುಗಳಿಗೆ ಗೌರವ ತಲೆ ಬಾಗಿದರು.

ಜಿಲ್ಲೆಯಲ್ಲಿ ನಡೆದ ಮೆರಣಿಗೆಯ ವೇಳೆ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಎಸ್‌ಪಿ ಕುಶಾಲ್ ಚೌಕ್ಸೆ,ಎಎಸ್ಪಿ ಖಾಸಿಂ, ಡಿವೈಎಸ್ಪಿ ಶಿವಕುಮಾರ್, ಮುರಳಿಧರ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಮೆರವಣಿಗೆಯಲ್ಲಿ ಜಾಮಿಯಾ ಮಸೀದಿ ಅಧ್ಯಕ್ಷರಾದ ಮೂನ್ ಸ್ಟಾರ್ ಗೌಸ್ ಪಾಷಾ, ಉಪಾಧ್ಯಕ್ಷರಾದ ಸಮೀವು ಲ್ಲಾ, ಕಾರ್ಯದರ್ಶಿ ಇನಾಯತ್ ಉಲ್ಲಾ ಶರೀಫ್, ಖಜಾಂಚಿ ಮುಜೀರ್ ಅಹಮದ್, ಶೇಕ್ ಸಾಧಿಕ್ ರಾಜ್ವಿ ,ಅಕ್ಮಲ್ ಖಾನ್, ಟಿಪ್ಪು, ಸಿಕಂದರ್ ಬಾಬು, ಜಮೀರ್, ಪರ್ವೀಜ್, ಡಾ.ಅಲ್ತಾಫ್ ಪಾಷಾ, ಮೌಲಾ, ಸೇರಿದಂತೆ ಎಲ್ಲಾ ಮಸೀದಿಗಳ ಅಧ್ಯಕ್ಷರುಗಳು ಮುಖ್ಯಸ್ಥರು ಭಾಗವಹಿಸಿದ್ದರು.

ಇದನ್ನೂ ಓದಿ: Eid Milad: ಇಂದು ಈದ್‌ ಮಿಲಾದ್‌ ಮೆರವಣಿಗೆ, ಮೈಸೂರು ರೋಡ್‌ ಬಂದ್‌