ಚಿಕ್ಕನಾಯಕನಹಳ್ಳಿ: ಚುನಾವಣೆ ವೇಳೆ ತಾವು ನೀಡಿದ ಭರವಸೆಯಂತೆ ಸಿದ್ದ ಉಡುಪು ಉದ್ಯಮ ಸ್ಥಾಪನೆಗೆ ಮುಂದಡಿ ಇಟ್ಟಿದ್ದು, ಇದರಿಂದ ತಾಲ್ಲೂಕಿನ ಸುಮಾರು 12 ಸಾವಿರ ಜನರಿಗೆ ಉದ್ಯೋಗ ಸಿಗಲಿದೆ ಎಂದು ಶಾಸಕ ಸಿ.ಬಿ. ಸುರೇಶ್ ಬಾಬು ಹೇಳಿದರು.
ತಾಲ್ಲೂಕಿನಲ್ಲಿ ನೂತನವಾಗಿ ಆಯ್ಕೆಯಾಗಿರುವ ೧೮ ಗ್ರಾಪಂಗಳ ಜೆಡಿಎಸ್ ಬೆಂಬಲಿತ ಅಧ್ಯಕ್ಷ, ಉಪಾಧ್ಯಕ್ಷರಿಗೆ ಶ್ಯಾವಿಗೆಹಳ್ಳಿಯ ಜಿಎಂಆರ್ ಕಲ್ಯಾಣ ಮಂಟಪದಲ್ಲಿ ಬುಧ ವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಸಿದ್ಧ ಉಡುಪು ಉದ್ಯಮ ಸ್ಥಾಪನೆಗೆ ಚಿಕ್ಕನಾಯಕನಹಳ್ಳಿ- ಹುಳಿಯಾರು ಮಧ್ಯೆ ಜಮೀನು ಗುರುತಿಸಲಾಗಿದೆ. ಈ ಕುರಿತು ಸದ್ಯದಲ್ಲೇ ಉದ್ಯಮಿಯ ಜತೆ ಮಾತುಕತೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕ್ಷೇತ್ರದ ಪ್ರತಿ ಹೋಬಳಿಗಳಲ್ಲಿ ಸಭೆ ನಡೆಸಿ ಪಕ್ಷ ಸಂಘಟನೆಗೆ ಶ್ರಮಿಸಲಾಗುವುದು. ಜನರ ಸಮಸ್ಯೆಗಳನ್ನು ಸ್ಥಳೀಯ ಮಟ್ಟದಲ್ಲಿ ಪರಿಹರಿಸಲು ಹೋಬಳಿ ಮಟ್ಟದಲ್ಲಿ ಕಚೇರಿ ಗಳನ್ನು ತೆರೆಯಲಾಗಿದೆ. ಪ್ರತಿ ಸೋಮವಾರ ಅಧಿಕಾರಿಗಳ ಸಮಕ್ಷಮದಲ್ಲಿ ಜನರ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ನಡೆದಿದೆ ಎಂದರು.
ತಾಲ್ಲೂಕಿನಲ್ಲಿ ನಡೆದಿರುವ ಭದ್ರಾ ಮೇಲ್ದಂಡೆ, ಹೇಮಾವತಿ, ಎತ್ತಿನಹೊಳೆ ಯೋಜನೆಗಳ ಕಾಮಗಾರಿ ಚುರುಕುಗೊಳಿಸಲು ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಹುಳಿಯಾರು, ಕಂದಿಕೆರೆ ಹೋಬಳಿಗಳ ಮೂಲಕ ಬೋರನಕಣಿವೆಗೆ ನೀರು ಹರಿಯಲಿದೆ ಎಂದರು.
ಪ್ರತಿ ಮೂರು ತಿಂಗಳಿಗೊಮ್ಮೆ ಸಭೆಗಳನ್ನು ನಡೆಸಿ ಪಕ್ಷ ಸಂಘಟನೆಯಲ್ಲಿನ ಲೋಪದೋಷಗಳನ್ನು ತಿದ್ದಿಕೊಳ್ಳಲು ಪ್ರಯತ್ನಿ ಸೋಣ. ಪಕ್ಷ ಸದೃಢವಾಗಿದ್ದರೆ ಮುಂಬರುವ ಎಪಿಎಂಸಿ, ಜಿಲ್ಲಾ, ತಾಲ್ಲೂಕು ಪಂಚಾಯಿತಿ ಹಾಗೂ ಸಂಸತ್ ಚುನಾವಣೆ ಎದುರಿಸಲು ಸುಲಭವಾಗುತ್ತದೆ. ಸ್ಥಳೀಯ ಸಂಸ್ಥೆಗಳಲ್ಲಿ ಪಕ್ಷದ ಕಾರ್ಯಕರ್ತರು ಆಯ್ಕೆಯಾದರೆ ಸಾರ್ವಜನಿಕರ ಕೆಲಸಗಳನ್ನು ಮಾಡಲು ಸಹಕಾರಿಯಾಗುತ್ತದೆ ಎಂದರು.
ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರದಿಂದ ಅನುದಾನಗಳನ್ನು ತರಲು ಹಿಂಜರಿಯುವುದಿಲ್ಲ. ತಮ್ಮ ಹಿಂದಿನ ಅವಧಿ ಯಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ತರಲಾಗಿತ್ತು. ಪ್ರತಿ ಹೋಬಳಿ ಮಟ್ಟದಲ್ಲಿ ಆಂಗ್ಲ ಮಾಧ್ಯಮ ಶಾಲೆ ತೆರೆಯಲು ಒತ್ತಾಯ ಮಾಡಿದ್ದೇನೆ. ಯಳನಾಡು, ದಸೂಡಿ ಭಾಗದಲ್ಲಿ ವಸತಿ ಶಾಲೆ ತೆರೆಯಲು ಪ್ರಸ್ತಾವನೆ ಸಲ್ಲಿಸಿದ್ದೇನೆ ಎಂದರು.
ತಾಲ್ಲೂಕಿಗೆ ಒಂದು ಸಾವಿರ ಮನೆಗಳನ್ನು ಕೊಡಲು ಸಚಿವರಿಂದ ಒಪ್ಪಿಗೆ ಸಿಕ್ಕಿದೆ. ಇನ್ನೂ ಹೆಚ್ಚಿನ ಮನೆಗಳನ್ನು ತರಲು ಪ್ರಯತ್ನಿ ಸುತ್ತೇನೆ. ಹಿಂದೆ ಜನತಾದಳದಲ್ಲಿದ್ದ ಅನೇಕರು ಮಂತ್ರಿಗಳಿದ್ದಾರೆ. ಅನುದಾನಕ್ಕಾಗಿ ಅವರ ಬಳಿಗೆ ಹೋಗಲು ಯಾವುದೇ ಅಂಜಿಕೆಯಿಲ್ಲ ಎಂದರು.
*
ಜೆಡಿಎಸ್ ಮುಖಂಡ ಶ್ರೀ ಹರ್ಷ ಮಾತನಾಡಿ, ಕ್ಷೇತ್ರದ ೧೮ ಗ್ರಾಪಂಗಳಲ್ಲಿ ಜೆಡಿಎಸ್ ಅಧಿಕಾರ ಹಿಡಿದಿದೆ. ಅಧ್ಯಕ್ಷ, ಉಪಾಧ್ಯಕ್ಷರು ಗ್ರಾಮಗಳ ಪ್ರಗತಿಗೆ ಶ್ರಮಿಸಬೇಕು. ಮುಂಬರುವ ಚುನಾವಣೆಗಳಿಗೆ ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಿದರು.
ಸಮಾರಂಭದಲ್ಲಿ ಗ್ರಾಪಂ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು. ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜಕುಮಾರ್, ಜಿಪಂ ಮಾಜಿ ಸದಸ್ಯರಾದ ಕಲ್ಲೇಶ್, ರಾಮಚಂದ್ರಯ್ಯ, ಲೋಹಿತಾಬಾಯಿ, ಮಂಜುಳಾ ಗವಿರಂಗಯ್ಯ ಹೇಮಾವತಿ ಇತರರಿದ್ದರು.