ಗುಬ್ಬಿ: ಎಚ್ಎಎಲ್ ನಲ್ಲಿ ಸ್ಥಳೀಯರಿಗೆ ಹೆಚ್ಚು ಉದ್ಯೋಗದ ಆದ್ಯತೆ ನೀಡಬೇಕೆಂದು ಚರ್ಚಿಸಲಾಗಿದೆ ಎಂದು ಶಾಸಕ ಎಸ್ಆರ್ ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ಎಂಜಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ ಜಿಲ್ಲಾಧಿ ಕಾರಿಗಳ ಕಚೇರಿಯಲ್ಲಿ ಎಚ್ಎಎಲ್ಅಧಿಕಾರಿಗಳಿಗೆ ಸ್ಥಳೀಯ ಯುವಕ ಯುವತಿಯರಿಗೆ ಹೆಚ್ಚು ಉದ್ಯೋಗವಕಾಶ ಕಲ್ಪಿಸಿ ಕೊಡಬೇಕೆಂದು ಒತ್ತಾಯಿಸಲಾಗಿದ್ದು ಕಡೆಗಣಿಸಿದರೆ ಘಟಕದ ಮುಂದೆ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದ ಅವರು ಇಷ್ಟು ವರ್ಷದ ರಾಜಕಾರಣದಲ್ಲಿ ಯಾವುದೇ ವೈಯಕ್ತಿಕ ನಿಂದನೆ ಗಳಿಲ್ಲದೆ ಅವರವರ ಪಕ್ಷದ ತತ್ವ ಸಿದ್ಧಾಂತದಂತೆ ಚುನಾವಣೆ ಎದುರಿಸಿದ್ದೇವೆ ಈ ಬಾರಿ ಎಲ್ಲಿಂದಲೋ ಬಂದಂತಹ ವ್ಯಕ್ತಿಗಳಿಂದ ಗೊಂದಲ ಉಂಟು ಮಾಡಿ ಅಮಾಯಕ ವಿದ್ಯಾರ್ಥಿ ಗಳನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಹೇಳಿಕೆಗಳನ್ನು ಮಾಡಿಸಿ ಕೇಸು ದಾಖಲಾಗುವಂತೆ ಮಾಡಿಸಿದ್ದಾರೆ.
ಪಕ್ಷದ ಪ್ರಣಾಳಿಕೆ ಹಾಗೂ ಸಿದ್ದಾಂತಗಳನ್ನು ಮತದಾರರಿಗೆ ತಿಳಿಸುತ್ತಾ ಚುನಾವಣೆ ನಡೆಸಬೇಕೆ ಹೊರತು ವೈಯಕ್ತಿಕ ನಿಂದನೆ ಮತ್ತು ದ್ವೇಷದ ರಾಜಕಾರಣ ಮಾಡಿದರೆ ಅದಕ್ಕೆ ತಕ್ಕ ಉತ್ತರ ಜನರೇ ಕೊಡುತ್ತಾರೆ ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಿ ಎನ್ ಅಣ್ಣಪ್ಪಸ್ವಾಮಿ ಮಾತನಾಡಿ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣದ ಅಭಿವೃದ್ಧಿ ರಸ್ತೆ ನಿರ್ಮಾಣ, ಸ್ವಚ್ಛತೆ ಹಾಗೂ ಮೂಲಸೌಕರ್ಯಗಳನ್ನು ಕುರಿತಂತೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ ಪಂ ಮುಖ್ಯ ಅಧಿಕಾರಿ ಮಂಜುಳಾದೇವಿ,ಉಪಾಧ್ಯಕ್ಷೆ ಮಹಾಲಕ್ಷ್ಮಿ, ಪ ಪಂ ಸದಸ್ಯರು ಹಾಗೂ ಮುಖಂಡರಾದ ಜಗನ್ನಾಥ್, ಜುಂಜೇಗೌಡ, ಸತೀಶ್, ಮಧು ಇತರರು ಇದ್ದರು.