Sunday, 15th December 2024

Ettinahole_celebration: ಎತ್ತಿನಹೊಳೆ ಲೋಕಾರ್ಪಣೆ: ಜಿಲ್ಲೆಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಕಾಂಗ್ರೆಸ್

ಚಿಕ್ಕಬಳ್ಳಾಪುರ : ಮುಖ್ಯಮಂತ್ರಿ ಸಿದ್ಧರಾಮಯ್ಯ ಸಕಲೇಶಪುರ ತಾಲೂಕು ಹೆಬ್ಬನಹಳ್ಳಿ ವಿತರಣಾ ಟ್ಯಾಂಕ್ ಬಳಿ ಶುಕ್ರವಾರ ಎತ್ತಿನಹೊಳೆ ಯೋಜನೆ ಲೋಕಾರ್ಪಣೆ ಮಾಡಿದ್ದರಿಂದ ಸಂತೋಷಗೊಂಡ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಸಿಹಿಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ನಗರದ ಬಿಬಿರಸ್ತೆಯಲ್ಲಿರುವ ಕಾಂಗ್ರೆಸ್ ಕಛೇರಿ ಎದುರು ಶುಕ್ರವಾರ ಜಮಾವಣೆಗೊಂಡ ಬ್ಲಾಕ್ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಎತಿನಹೊಳೆ ಯೋಜನೆ ಕಾಂಗ್ರೆಸ್ ಪಕ್ಷದ ಯೋಜನೆ ಭೂಮಿಪೂಜೆಯೂ ನಮ್ಮದೇ, ಲೋಕಾರ್ಪಣೆಯೂ ನಮ್ಮದೇ ಎಂದು ಘೋಷಣೆ ಕೂಗುತ್ತಾ ಜಯಕಾರ ಹಾಕಿ ಜಿಲ್ಲೆಗೆ ಹಿಡಿದಿದ್ದ ಶುದ್ದ ನೀರಿನ ಗ್ರಹಣ ಬಿಟ್ಟಿದೆ ಎಂದು ಸಂಭ್ರಮಿಸಿದರು.

ಈ ವೇಳೆ ಮಾತನಾಡಿದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಎಂ.ಮುನೇಗೌಡ ಜಿಲ್ಲೆಗೆ ಶಾಶ್ವತ ನೀರಾವಸರಿ ಯೋಜನೆ ಬೇಕೆಂದು ನಡೆದ ದಶಕಗಳ ಹೋರಾಟದಲ್ಲಿ ನಾನೂ ಕೂಡ ಭಾಗಿಯಾಗಿದ್ದೆ. ಇದಕ್ಕಾಗಿ ನೀರಾವರಿ ಹೋರಾಟಗಾರರು, ಜನಪ್ರತಿನಿಧಿಗಳು,ರೈತರು ಶ್ರಮಿಸಿದ್ದಾರೆ.ಎಲ್ಲದರ ಫಲವಾಗಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾಗ ೨೦೧೨ರಲ್ಲಿ ಈ ಯೋಜನೆಯ ನೀಲಿನಕ್ಷೆ ಸಿದ್ಧಗೊಂಡು ಭೂಮಿಪೂಜೆಯೊಂದಿಗೆ ಕಾರ್ಯಾರಂಭವಾಯಿತು.

ಅಲ್ಲಿಂದ ಈವರೆಗೆ ಹಲವು ವಿಘ್ನಗಳನ್ನು ದಾಟಿಕೊಂಡು ಬದಲಾದ ರಾಜಕೀಯದಲ್ಲಿ ಯೋಜನಾ ಗಾತ್ರವನ್ನೂ ವಿಸ್ತರಿಸಿಕೊಂಡು ಅಂತಿಮ ವಾಗಿ ಇಂದು ಲೋಕಾರ್ಪಣೆ ಭಾಗ್ಯ ಕಂಡಿದೆ. ಖಂಡಿತವಾಗಿ ಇದೊಂದು ಉತ್ತಮ ಹಾಗೂ ಸಾರ್ಥಕ ಯೋಜನೆ ಯಾಗಿದ್ದು ಬಯಲು ಸೀಮೆ ಜಿಲ್ಲೆಗಳಿಗೆ ಶುದ್ಧನೀರು ಒದಗಿಸುವ ಜೀವಸೆಲೆಯಾಗಿದೆ. ಇದನ್ನು ಆಗುಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿ ಯರ‍್ಯಾರು ಇದರಲ್ಲಿ ಭಾಗಿ ಯಾಗಿದ್ದಾರೋ ಅವರೆಲ್ಲರಿಗೂ ಜಿಲ್ಲೆಯ ಜನರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

೨೪ ಸಾವಿರ ಕೋಟಿ ಬೃಹತ್ ಗಾತ್ರದ ಎತ್ತಿನಹೊಳೆ ಯೋಜನೆಯಿಂದ ಬಯಲು ಸೀಮೆ ಜಿಲ್ಲೆಗಳಿಗೆ ನೀರೇ ಬರಲ್ಲ ಎಂದು ವಾದಿಸುವವರ ನಡುವೆ ನೀರನ್ನು ಹರಿಸುವ ಕೆಲಸವನ್ನು ನಮ್ಮ ಕಾಂಗ್ರೆಸ್ ಸರಕಾರ ಮಾಡಿರುವುದು ಸಂತೋಷ ತಂದಿದೆ. ಇದರ ಉಪಯೋಗ ಜಿಲ್ಲೆಯ ಜನತೆಗೆ ಆಗಲಿ ಎನ್ನುವುದು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯ ದರ್ಶಿ ಪ್ರೆಸ್ ಸೂರಿ ಅವರ ಮಾತು.

ಕಾಂಗ್ರೆಸ್ ಮುಖಂಡ ಡ್ಯಾನ್ಸ್ ಶ್ರೀನಿವಾಸ್ ಮಾತನಾಡಿ ೧೦ ವರ್ಷಗಳ ಸುಧೀರ್ಘ ಕಾಲದ ನಂತರ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯ ಜನತೆಗೆ ಶುದ್ಧನೀರು ಹರಿಸುವ ಯೋಜನೆಗೆ ಜನಪ್ರಿಯ ಮುಖ್ಯಮಂತ್ರಿಗಳು ಇಂದು ಚಾಲನೆ ನೀಡಿದ್ದಾರೆ. ಇದು ನಮ್ಮ ಜಿಲ್ಲೆಯ ಸೌಭಾಗ್ಯವಾಗಿದೆ.ಮುಂದಿನ ವರ್ಷದ ಒಳಗೆ ಖಂಡಿತವಾಗಿ ನಮ್ಮ ಸರಕಾರ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಜಿಲ್ಲೆಯ ಕೆರೆಗಳಿಗೆ ನೀರು ಹರಿಸಿಯೇ ತೀರುತ್ತಾರೆ ಎನ್ನುವ ವಿಶ್ವಾಸವಿದೆ. ಇದು ಆದಷ್ಟು ಬೇಗ ಆಗಲಿ ಎಂದು ಗೌರಿ ಗಣಪತಿಯಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಸಿ.ರಾಜಾಕಾಂತ್ ಮಾತನಾಡಿ, ಬಯಲು ಸೀಮೆ ಜಿಲ್ಲೆಗಳಿಗೆ ಶುದ್ಧಕುಡಿಯುವ ನೀರನ್ನು ಒದಗಿಸುವ ಯೋಜನೆಯಾಗಿರುವ ಎತ್ತಿನ ಹೊಳೆ ಸಕಲೇಶಪುರದಲ್ಲಿ ಲೋಕಾರ್ಪಣೆ ಆಗಿರುವುದು ಸಂತೋಷ ತಂದಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ೨೦೧೨ರಲ್ಲಿ ಚಿಕ್ಕಬಳ್ಳಾಪುರದಲ್ಲಿಯೇ ಈ ಯೋಜನೆಗೆ ಭೂಮಿಪೂಜೆ ನೆರವೇರಿಸಿದ್ದರು. ನುಡಿದಂತೆ ನಡೆಯುವ ಸಿದ್ಧರಾಮಯ್ಯ ಅವರು ಲೋಕಾರ್ಪಣೆ ಮಾಡಿರುವುದು ಹರ್ಷತಂದಿದೆ. ಮುಂದಿನ ದಿನಗಳಲ್ಲಿ ಕೋಲಾರ ಚಿಕ್ಕಬಳ್ಳಾಪುರ ಭಾಗದ ಕೆರೆಗಳು ತುಂಬಿ ಹರಿದಾಗ ಅಂತರ್ಜಲ ಹೆಚ್ಚಳವಾಗಿ ರೈತರ ಬಾಳು ಬಂಗಾರವಾಗಲಿದೆ. ಅಂತಹ ಸುದಿನಗಳು ಬರುವ ಕಾಲ ಸಮೀಪವಾಗಿರುವುದಕ್ಕೆ ಕಾಂಗ್ರೆಸ್ ಸರಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

ಈ ವೇಳೆ ಮುಖಂಡರಾದ ಕೆ.ಎಲ್.ಶ್ರೀನಿವಾಸ್, ರಘು, ಬಾಬಾಜಾನ್, ಯುವ ಕಾಂಗ್ರೆಸ್ ಮುಖಂಡರಾದ ಅಲ್ಲು ಅನಿಲ್, ಶಂಕರ್ ಇತರರು ಇದ್ದರು.