Sunday, 8th September 2024

ಅನ್ನದಾತ ರೈತ ಉದ್ಯಮಿ, ವ್ಯಾಪಾರಿಯಾಗಬೇಕು: ಬಿ.ಸಿ.ಪಾಟೀಲ

ಕೃಷಿ ಸಚಿವರಿಂದ ಕೋಲ್ಡ್ ಸ್ಟೋರೇಜ್ ಘಟಕಕ್ಕೆ ಶಂಕುಸ್ಥಾಪನೆ

ಕಲಬುರಗಿ: ಕೃಷಿ ಉತ್ಪನ್ನ ಬೆಳೆಯಕಷ್ಟೆ ಸೀಮಿತವಾಗದೇ ರೈತ ಕೃಷಿಯಲ್ಲಿ ಪ್ರಗತಿ ಸಾಧಿಸಬೇಕು. ಯಂತ್ರೋಪಕರಣಗಳ ಸಹಾಯದ ಜೊತೆಗೆ ಅಧುನಿಕ ತಂತ್ರಜ್ಞಾನ ಬಳಸಿಕೊಂಡು ಕೃಷಿ ಸಂಸ್ಕರಣ ಘಟಕ ಸ್ಥಾಪಿಸುವ ಮೂಲಕ ಅನ್ನದಾತ ಉದ್ಯಮಿ, ವ್ಯಾಪಾರಿಯಾಗಬೇಕು ಎಂದು ಕೃಷಿ ಸಚಿವ ಬಿ.ಸಿ‌.ಪಾಟೀಲ ಹೇಳಿದರು.

ಕಲಬುರಗಿ ಹೊರವಲಯದ ಕೋಟನೂರ(ಡಿ) ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಆವರಣದಲ್ಲಿ ಶುಕ್ರವಾರ ಹೊಸದಾಗಿ ತೆರೆಯಲಾದ ಕಲಬುರಗಿ ವಿಭಾಗದ ಜಂಟಿ ಕೃಷಿ ನಿರ್ದೇಶಕರು (ಜಾಗೃತ ಕೋಶ) ಕಚೇರಿ ಉದ್ಘಾಟಿಸಿ ಮತ್ತು 9.15 ಕೋಟಿ ರೂ. ವೆಚ್ಚದ ಕೋಲ್ಡ್ ಸ್ಟೋರೇಜ್ ಘಟಕಕ್ಕೆ ಶಂಕುಸ್ಥಾನೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯದ 11 ಕಡೆ‌ ಈ ರೀತಿಯ ಕೋಲ್ಡ್ ಸ್ಟೋರೇಜ್ ಸ್ಥಾಪಿಸಲಾಗುತ್ತಿದೆ ಎಂದರು.

ರೈತ ಬೆಳೆದ ಬೆಳೆ, ತರಕಾರಿ, ಹಣ್ಣುಗಳನ್ನು ಸಂಸ್ಕರಣೆ‌ ಮಾಡಿ ನೇರವಾಗಿ ಗ್ರಾಹಕರಿಗೆ ತಲುಪುವಂತಾಗಬೇಕು. ಈ ಹಿನ್ನೆಲೆಯಲ್ಲಿ ಅಹಾರ ಸಂಸ್ಕರಣ ಘಟಕ ಸ್ಥಾಪನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆತ್ಮ ನಿರ್ಭರನಡಿ 10 ಸಾವಿರ ಕೋಟಿ ರೂ. ಮೀಸಲಿಟ್ಟಿದಲ್ಲದೆ ಕೃಷಿ ವಲಯಕ್ಕೆ 1 ಲಕ್ಷ ಕೋಟಿ ರೂ. ಒದಗಿಸಿದ್ದಾರೆ ಎಂದರು.

ಇತ್ತೀಚಿನ ಅತಿವೃಷ್ಟಿಯಿಂದ ಕಲಬುರಗಿ ಜಿಲ್ಲೆಯಲ್ಲಿ ರಾಜ್ಯದಲ್ಲಿ ಅತೀ ಹೆಚ್ಚು ದಾಖಲೆ ಪ್ರಮಾಣದಲ್ಲಿ 1.11 ಲಕ್ಷ ಹೆಕ್ಟೇರ್ ಪ್ರದೇಶ ಬೆಳೆ ಹಾನಿಯಾಗಿದೆ. ಉಳಿದಂತೆ ಗದಗ ಜಿಲ್ಲೆಯಲ್ಲಿ 93 ಸಾವಿರ ಹೆಕ್ಟೇರ್, 83 ಸಾವಿರ ಹೆಕ್ಟೇರ್ ಧಾರವಾಡದಲ್ಲಿ ಹಾನಿಯಾಗಿದೆ.

ಒಣ ಬೇಸಾಯದ ಪ್ರತಿ ಹೆಕ್ಟೇರ್ ಗೆ 6,800 ರೂ. ಗಳಿಂದ 13,600 ರೂ.ಗಳಿಗೆ, ನೀರಾವರಿ ಪ್ರದೇಶದ ಪ್ರತಿ ಹೆಕ್ಟೇರ್ ಗೆ 13,000 ರೂ. ಗಳಿಂದ 25,000 ರೂ. ಗಳಿಗೆ ಹಾಗೂ ತೋಟಗಾರಿಕೆ ಪ್ರದೇಶದ ಪ್ರತಿ ಹೆಕ್ಟೇರ್ ಗೆ 18,000 ರೂ. ಗಳಿಂದ 28,000 ರೂ. ಗಳಿಗೆ ಹೆಚ್ಚಿಸಿದೆ. ಎನ್.ಡಿ‌.ಆರ್.ಎಫ್. ಮಾರ್ಗಸೂಚಿ ಮೀರಿ ರಾಜ್ಯ ಸರ್ಕಾರ ಹೆಚ್ಚಿನ ಪರಿಹಾರ ಅನ್ನದಾತನಿಗೆ ನಮ್ಮ ಸರ್ಕಾರ ನೀಡುತ್ತಿದೆ ಎಂದರು.

ಪಿ.ಎಂ.ಕಿಸಾನ್ ಯೋಜನೆಯಡಿ ಕೇಂದ್ರದ 6 ಸಾವಿರ ರೂ. ಜೊತೆ ರಾಜ್ಯದಿಂದ‌ 4 ಸಾವಿರ ರೂ. ಸೇರಿಸಿ ವಾರ್ಷಿಕ 10 ಸಾವಿರ ರೂ. ನೀಡಲಾಗುತ್ತಿದೆ. ಕೃಷಿ ಪದವಿ ಕಾಲೇಜಿನಲ್ಲಿ ರೈತರ ಮಕ್ಕಳ ಮೀಸಲಾತಿ ಶೇ. 40 ರಿಂದ ಶೇ.50ಕ್ಕೆ ಹೆಚ್ಚಿಸಿದ ಪರಿಣಾಮ ಕಳೆದ ವರ್ಷ 184 ಮಕ್ಕಳು ಹೆಚ್ಚುವರಿಯಾಗಿ ಪ್ರವೇಶಾತಿ ಪಡೆದಿದ್ದಾರೆ ಎಂದು ಸಚಿವ ಬಿ.ಸಿ.ಪಾಟೀಲ ತಿಳಿಸಿದರು.

ಕೃಷಿ ಪರಿಕರಗಳ ಗುಣಮಟ್ಟ ಖಾತ್ರಿಪಡಿಸಿಕೊಂಡು ಬೀಜ ಅಧಿನಿಯಮ, ರಸಗೊಬ್ಬರ ನಿಯಂತ್ರಣ, ಕೀಟನಾಶಕ ಕಾಯ್ದೆಗಳ ಸಮರ್ಪಕ ಅನುಷ್ಠಾನಕ್ಕಾಗಿ ರಾಜ್ಯದಲ್ಲಿ ಕೃಷಿ ಇಲಾಖೆ ಅಧೀನದಡಿ 2014ರಲ್ಲಿ ಜಾಗೃತ ಕೋಶ ಸ್ಥಾಪಿಸಲಾಗಿದೆ. ಈ ಕೋಶವು ಬೆಂಗಳೂರು, ಬೆಳಗಾವಿ ವಲಯದಲ್ಲಿ ಮಾತ್ರ ಇತ್ತು. ನಾನು ಅಧಿಕಾರ ವಹಿಸಿದ ಮೇಲೆ ಇತ್ತೀಚೆಗೆ ಮೈಸೂರಿನಲ್ಲಿ ಇಂದು ಕಲಬುರಗಿಯಲ್ಲಿ ಕಚೇರಿ ತೆರೆಯಲಾಗಿದೆ. ಇದರಿಂದ ರಾಜ್ಯದ ಪ್ರತಿ ಕಂದಾಯ ವಿಭಾಗಕ್ಕೆ ಜಾಗೃತ ಕಚೇರಿ ತೆರೆದಂತಾಗಿದೆ ಎಂದ ಕೃಷಿ‌ ಸಚಿವರು, ಕಳೆದ‌ 3 ವರ್ಷದಲ್ಲಿ 28.35 ಕೋಟಿ ರೂ. ಮೌಲ್ಯದ ಕೃಷಿ ಪರಿಕರಗಳು ಜಪ್ತಿ ಮಾಡಿ 304 ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಮೊಕದಮ್ಮೆ ಹೂಡಿದೆ. ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಪೀಡೆನಾಶಕ ಕಾಯ್ದೆ ಉಲ್ಲಂಘನೆ ಮಾಡಿದ 232 ಕೃಷಿ ಮಾರಾಟಗಾರರ ಪರವಾನಿಗೆ ಅಮಾನತ್ತು ಮಾಡಿ, 25 ಪರವಾನಿಗೆ ರದ್ದುಪಡಿಸಿದೆ ಎಂದು ಸಚಿವರು ವಿವರಿಸಿದರು.

10 ಲಕ್ಷ ಮಕ್ಕಳಿಗೆ 569 ಕೋಟಿ ರು.: ರೈತರ ಬಗ್ಗೆ ಕಾಳಜಿ ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಏಕ ಸಚಿವ ಸಂಪುಟದಲ್ಲಿ ಅನ್ನದಾತನ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲು ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ ಜಾರಿ ಗೊಳಿಸಿದ್ದು, ಕಳೆದ ವರ್ಷ 10 ಲಕ್ಷ‌ ಮಕ್ಕಳಿಗೆ 569 ಕೋಟಿ ರೂ. ಬ್ಯಾಂಕ್ ಖಾತೆಗೆ ಪಾವತಿಸಿದೆ. ಇತ್ತೀಚೆಗೆ ಈ ಯೋಜನೆ ಕೃಷಿ ಕೂಲಿ ಕಾರ್ಮಿಕರ ಮಕ್ಕಳಿಗೂ ವಿಸ್ತರಿಸಿದ್ದು, ರಾಜ್ಯದ 6 ಲಕ್ಷ‌ ಮಕ್ಕಳು ಇದರ ಪ್ರಯೋಜನೆ ಪಡೆಯಲಿದ್ದಾರೆ ಎಂದರು.

ರೈತರಿಗೆ ಡೀಸಲ್ ಸಬ್ಸಿಡಿ: ರೈತ ಸಾಲ-ಸೂಲ ಮಾಡಿ ಹಣ ತಂದು ಬೀಜ, ರಸಗೊಬ್ಬರವನ್ನು ಭೂಮಿತಾಯಿಗೆ ಹಾಕಿದರೂ ಕೆಲವೊಮ್ಮೆ ಅತಿವೃಷ್ಟಿ ಅಥವಾ ಮಳೆರಾಯನ ಅವಕೃಪೆಯಿಂದ ಬೆಳೆದ ಬೆಳೆ ಕೈಗೆ ಸಿಗದೆ ಸಂಕಷ್ಟಕ್ಕೆ‌ ಸಿಲುಕಿರುತ್ತಾನೆ. ರೈತರಿಗೆ ಆರ್ಥಿಕವಾಗಿ ಸಹಾಯ ಮಾಡಲು ಕರಾವಳಿಯಲ್ಲಿ ದೋಣಿ ಚಲಾಯಿಸುವ ಮೀನುಗಾರರಿಗೆ ನೀಡುವ ಮಾದರಿಯಲ್ಲಿಯೇ ಟ್ರಾಕ್ಟರ್ ಮೂಲಕ ಉಳುಮೆ ಮಾಡುವ ರೈತರಿಗೆ ಒಂದು ಎಕರೆಗೆ 250 ರೂ. ಗಳಂತೆ ಗರಿಷ್ಠ 5 ಎಕರೆಗೆ 1,250 ರೂ. ಡೀಸೆಲ್ ಸಬ್ಸಿಡಿ ಸೆಪ್ಟೆಂಬರ್ ತಿಂಗಳಿನಿಂದ ನೀಡಲಾಗುತ್ತದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ತಿಳಿಸಿದರು.

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಮುರುಗೇಶ ನಿರಾಣಿ ಅವರು ಮಾತನಾಡಿ, ಕೃಷಿ ಕುಟುಂಬದಿಂದ ಬಂದಿರುವ ಕೃಷಿ ಸಚಿವ‌ ಬಿ.ಸಿ.ಪಾಟೀಲ ಅವರು ಅಧಿಕಾರ ಸ್ವೀಕರಿಸಿದ ನಂತರ ರಾಜ್ಯದಲ್ಲಿ ರಸಗೊಬ್ಬರ, ಬೀಜದ ಕೊರತೆಯಿಲ್ಲ. ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ ರೂವಾರಿ ಇವರಾಗಿದ್ದಾರೆ. ಜಿಲ್ಲೆಯಲ್ಲಿ ದಾಖಲೆ ಪ್ರಮಾಣ ದಲ್ಲಿ ಅತಿವೃಷ್ಟಿಗೆ ಬೆಳೆ ಹಾನಿಯಾಗಿದ್ದು, ಸರ್ವೆ ಕಾರ್ಯ ನಡೆದಿದೆ. ಸರ್ವೆ ಮುಗಿದ ಕೂಡಲೆ ರೈತರಿಗೆ ಬೆಳೆ ಪರಿಹಾರ ನೀಡಲಾಗುವುದು ಎಂದರು.

ಕೆ.ಕೆ.ಆರ್.ಡಿ.ಬಿ ಅಧ್ಯಕ್ಷರು ಹಾಗೂ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಡಾ.ಅವಿನಾಶ ಜಾಧವ, ವಿಧಾನ ಪರಿಷತ್ ಶಾಸಕರಾದ ಶಶೀಲ ಜಿ. ನಮೋಶಿ, ಸುನೀಲ ವಲ್ಯಾಪೂರೆ, ಬಿ.ಜಿ.ಪಾಟೀಲ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಧಂಗಾಪೂರ, ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ವೇತಾ, ಕೃಷಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಶಿವಯೋಗಿ ಕಳಸದ್, ಕೃಷಿ ಆಯುಕ್ತ ಬಿ.ಶರತ್, ಅಪರ ನಿರ್ದೇಶಕ ದಿವಾಕರ್, ಜಾಗೃತ ಕೋಶದ ಅಪರ ನಿರ್ದೇಶಕ ಅನುಪ ಕುಮಾರ, ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್, ಕಲಬುರಗಿ ನೂತನ ಜಾಗೃತ ಕೋಶದ ಜಂಟಿ ನಿರ್ದೇಶಕ ರಾಮಕೃಷ್ಣ ಕೆ. ಸೇರಿದಂತೆ ಮೊದಲಾದ ವರು ಇದ್ದರು. ಪ್ರಭಾರಿ ಜಂಟಿ ಕೃಷಿ ನಿರ್ದೇಶಕ ಸಮದ ಪಟೇಲ್‌ ಸ್ವಾಗತಿಸಿದರು.

error: Content is protected !!