Friday, 22nd November 2024

Film Institute: ತುಮಕೂರು ವಿವಿ ಫಿಲ್ಮ್ ಇನ್ಸಿಟ್ಯೂಟ್‌ಗೆ ಪುನಿತ್ ಹೆಸರಿಡಲು ಮನವಿ

ತುಮಕೂರು: ಬಾಲನಟರಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿ, ಸಿನಿ ರಸಿಕರಿಂದ ಪವರ್ ಸ್ಟಾರ್ ಎಂದು ಬಿರುದು ಪಡೆದ ಪುನಿತ್ ರಾಜಕುಮಾರ್ ಅವರ ಹೆಸರನ್ನು ತುಮಕೂರು ವಿವಿಯ ನೂತನ ಕ್ಯಾಂಪಸ್ ಜ್ಞಾನಸಿರಿಯಲ್ಲಿ ಆರಂಭವಾಗಲಿರುವ ಫಿಲ್ಮ್ ಇನ್ಸಿಟ್ಯೂಟ್‌ಗೆ ಇಡಬೇಕೆಂಬುದು ಕರ್ನಾಟಕದ ಜನತೆಯ ಅಪೇಕ್ಷೆಯಾಗಿದ್ದು,ಈ ನಿಟ್ಟಿನಲ್ಲಿ ಕನ್ನಡ ಪಿಲ್ಮಂ ಚೇಂಬರ್ ಮತ್ತು ರಾಜಕುಮಾರ್ ಕುಟುಂಬದ ಸದಸ್ಯರೊಂದಿಗೆ ತುಮಕೂರು ವಿವಿಯ ಕುಲಪತಿಗಳೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಕೌಶಲ್ಯಾಭಿವೃದ್ದಿ ಮಂಡಳಿಯ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ತಿಳಿಸಿದ್ದಾರೆ.

ನಗರದ ಹೊರವಲಯದ ಗೆದಲಹಳ್ಳಿ ರಿಂಗ್ ರಸ್ತೆಯಲ್ಲಿ ಪುನಿತ್ ಅಭಿಮಾನಿಗಳು ಆಯೋಜಿಸಿದ್ದ ಕರ್ನಾಟಕ ರತ್ನ ಪುನಿತ್ ರಾಜ್‌ಕುಮಾರ್ ಅವರ 3ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಅಪ್ಪುರವರು ನಮ್ಮನ್ನು ಅಗಲಿ 3 ವರ್ಷಗಳು ನಾವು ಕಳೆದಿದ್ದೇವೆ.ನಟನಾಗಿ, ಸಮಾಜಸೇವಕನಾಗಿ ಕನ್ನಡಿಗರ ಜನ ಮಾನಸದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ.ಅತಿ ಚಿಕ್ಕ ವಯಸ್ಸಿನಲ್ಲಿ ಮಾಡಿದ ಸಾಧನೆ,ಗಳಿಸಿದ ಜನಪ್ರಿಯತೆ, ಕೈಗೊಂಡ ಜನಸೇವೆ ಯನ್ನು ವರ್ಣಿಸಲು ಪದಗಳೇ ಸಾಲದು.ಪುನೀತ್‌ರವರ ಹಾಡುಗಳು ,ಸಿನಿಮಾಗಳು,ವಿಧೇಯತೆ, ಸಾಮಾಜಿಕ ಕೆಲಸಗಳ ಮೂಲಕ ಅವರು ಎಂದು ಬಿಟ್ಟು ಹೋಗಿಲ್ಲ ಎಂದು ಹೇಳುತ್ತೇವೆ ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಹಿರೇಮಠದ ಡಾ.ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಪುನೀತ್ ರಾಜಕುಮಾರ್ ಕನ್ನಡಿಗರ ಹೆಮ್ಮೆ.ಈ ಉದ್ದೇಶದಿಂದ ಮುಂದಿನ ತಿಂಗಳು ತುಮಕೂರಿನ ಹಿರೇಮಠದ ತಪೋವನದಲ್ಲಿ ಪುನೀತ್ ಸ್ಮೃತಿ ಎಂಬ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಿದ್ದೇವೆ.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪುನೀತ್‌ ರಾಜಕುಮಾರ್‌ರವರ ಧರ್ಮಪತ್ನಿ ಅಶ್ವಿನಿ ಪುನೀತ್‌ ರಾಜಕುಮಾರ್‌ರವರು ಭಾಗವಹಿಸಲಿದ್ದಾರೆ. ಆ ದಿನವೆಲ್ಲಾ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಹಾಡು, ನೃತ್ಯ, ಸಂಗೀತ, ಹಾಸ್ಯ, ಪ್ರಬಂಧ, ಅಪ್ಪುರವರ ಭಾವಚಿತ್ರ ಬಿಡಿಸುವ ಸ್ಪರ್ಧೆ,ಜಾನಪದ ಗೀತೆ,ಭಾವಗೀತೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಜಿಲ್ಲೆಯ ಸಮಸ್ತ ಜನತೆ ಭಾಗವಹಿಸಿ ಯಶಸ್ವಿಯಾಗಿ ನಡೆಸಿಕೊಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಆಯೋಜಕರುಗಳಾದ ಡೈರಿ ಕೃಷ್ಣಪ್ಪ,ರಂಗಸ್ವಾಮಿ,ಉಪ್ಪಾರಹಳ್ಳಿ ಕುಮಾರ್, ಅಯೂಬ್, ಬಾಲಾಜಿ, ಭೈರವ ಮೂರ್ತಪ್ಪ, ಪ್ರಕಾಶ್, ಸುರೇಶ್, ರಂಗ, ರವಿ, ನಟರಾಜ್ ಹಾಗೂ ವಿವಿಧ ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘಗಳ ಪದಾಧಿಕಾರಿಗಳು ಮತ್ತು ಮುಖಂಡರುಗಳು ಹಾಜರಿದ್ದರು.

ಇದನ್ನೂ ಓದಿ: Puneeth Death Anniversary: ಅಪ್ಪು ಇಲ್ಲದೆ ಮೂರು ವರ್ಷ, ಇಂದು ಪುಣ್ಯಸ್ಮರಣೆ