ತುಮಕೂರು : ತಿರುಪತಿ ದೇವಸ್ಥಾನಕ್ಕೆ ತೆರಳಲು ವಿಐಪಿ ಪಾಸ್ ಪಡೆಯಲು ಗೃಹ ಸಚಿವ ಜಿ.ಪರಮೇಶ್ವರ್ ಹೆಸರಿನಲ್ಲಿ ನಕಲಿ ಲೆಟರ್ ಹೆಡ್, ಸಹಿ ಸೃಷ್ಟಿಸಿ ವಂಚಿಸುತ್ತಿದ್ದ ಕಿರಾತಕರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೃಹ ಸಚಿವ ಪರಮೇಶ್ವರ್ ಚಿತ್ರವನ್ನು ವಾಟ್ಸಾಪ್ ಡಿ.ಪಿ ಹಾಕಿಕೊಂಡು ಆಂಧ್ರಪ್ರದೇಶದ ಮುಖ್ಯಮಂತ್ರಿ ಕಚೇರಿಗೆ ಕರೆ ಮಾಡಿ ಸಚಿವರಂತೆ ಮಾತನಾಡಿ, ದೇವಸ್ಥಾನಕ್ಕೆ ಹೋಗಲು ವಿಐಪಿ ಪಾಸ್ ಪಡೆದು ವಂಚಿಸುತ್ತಿದ್ದ ಆರೋಪದ ಮೇರೆಗೆ ಬೆಂಗಳೂರಿನ ಯಲಹಂಕದ ಮಾರುತಿ ಮತ್ತು ಇತರರ ವಿರುದ್ಧ ಗೃಹ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಕೆ.ನಾಗಣ್ಣ ದೂರು ನೀಡಿದ್ದು, ತುಮಕೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ಬಂಧಿಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಸಚಿವರ ನಕಲಿ ಲೆಟರ್ ಹೆಡ್, ಸಹಿ ಸೃಷ್ಟಿಸಿ ಅದನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ಕಚೇರಿಗೆ ವಾಟ್ಸಾಪ್ ಮೂಲಕ ಕಳುಹಿಸಿ, ತಿರುಪತಿ ದ್ದೇವಸ್ಥಾನಕ್ಕೆ ಹೋಗಲು ವಿಐಪಿ ಪಾಸ್ ಪಡೆದು ಸಚಿವರ ಹೆಸರು ದುರುಪಯೋಗ ಪಡಿಸಿಕೊಂಡಿದ್ದಾರೆ. ಹಾಗೂ ಸಚಿವರ ಹೆಸರಿನಲ್ಲಿ ದೇವರ ದರ್ಶನಕ್ಕೆ ಹೋಗುವ ಭಕ್ತರಿಂದ ಹಣ ಪಡೆದು ವಂಚಿಸುತ್ತಿದ್ದು, ಇವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೊಲೆ ಬೆದರಿಕೆ
ಸದರಿ ವಿಷಯದ ಬಗ್ಗೆ ಆರೋಪಿ ಹತ್ತಿರ ವಿಚಾರಿಸಿದ್ದು, ಇದು ಬಹಿರಂಗವಾದರೆ ನಿಮ್ಮನ್ನು ಕೊಲೆ ಮಾಡಿಸುತ್ತೇನೆ. ಇದನ್ನು ಮುಚ್ಚಿಹಾಕಲು ಎರಡು ಲಕ್ಷ ನೀಡಬೇಕು.ಗೃಹ ಇಲಾಖೆ ಮುಖ್ಯಸ್ಥರೇ ಇಂತಹ ಕೆಲಸ ಮಾಡಿಸಿದ್ದಾರೆ ಎಂದು ದೂರು ನೀಡುತ್ತೇನೆ. ಇದರ ಬಗ್ಗೆ ದೂರು ನೀಡಿದರೆ ನಿಮ್ಮನ್ನು ಜೈಲಿಗೆ ಕಳುಹಿಸಲಾಗುವುದು ಎಂದು ಆರೋಪಿ ಬೆದರಿಕೆ ಹಾಕಿದ್ದಾರೆ ಎಂದು ಗೃಹ ಸಚಿವರ ವಿಶೇಷ ಕರ್ತವ್ಯಾಧಿಕಾರಿ ನಾಗಣ್ಣ ದೂರಿನಲ್ಲಿ ಆರೋಪಿಸಿದ್ದಾರೆ.
ಇದನ್ನೂ ಓದಿ: #TumkurBreaking