Saturday, 14th December 2024

ಜಿಲ್ಲೆಯಲ್ಲಿ 1400 ಕ್ಷಯರೋಗಿಗಳು:1255 ಮಂದಿಗೆ ಪೌಷ್ಠಿಕ ಆಹಾರದ ಕೊರತೆ

ತುಮಕೂರು: ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಕ್ಷಯಮುಕ್ತ ಭಾರತ  ಕಾರ್ಯಕ್ರಮದಡಿ 1400 ಕ್ಷಯ ರೋಗಿಗಳು ಹಾಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ 1255 ಕ್ಷಯ ರೋಗಿಗಳು ಪೌಷ್ಠಿಕ ಆಹಾರದ ಅವಶ್ಯಕತೆ ಇದೆ ಎಂದು ಮನವಿ ಮಾಡಿರುವ ಹಿನ್ನೆಲೆ ಯಲ್ಲಿ ವಿವಿಧ ಇಲಾಖೆಗಳ ಮುಖ್ಯಸ್ಥರು ತಲಾ ಒಬ್ಬ ಕ್ಷಯ ರೋಗಿಯನ್ನು ದತ್ತು ಪಡೆದು ಪೌಷ್ಠಿಕ ಆಹಾರ ಒದಗಿಸುವಲ್ಲಿ ಕೈ ಜೋಡಿಸಬೇಕೆಂದು ಜಿಪಂ ಸಿಇಒ ಕೆ. ವಿದ್ಯಾಕುಮಾರಿ ಸಲಹೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯಲ್ಲಿ ಬುಧವಾರ ಜರುಗಿದ ಜಿಲ್ಲಾ ಮಟ್ಟದ ಹೆಚ್‌ಐ-ಟಿಬಿ ಸಲಹಾ ಸಮಿತಿ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ ಸೇರಿ ದಂತೆ ಆರೋಗ್ಯ ಇಲಾಖೆಯಿಂದ ಅನುಷ್ಠಾನವಾಗುವ ವಿವಿಧ ರಾಷ್ಟ್ರೀಯ ಕಾರ್ಯಕ್ರಮ ಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ದತ್ತು ಪಡೆಯಲು ಮನವಿ

ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 1400 ಕ್ಷಯ ರೋಗಿಗಳ ಪೈಕಿ, 1255 ಕ್ಷಯ ರೋಗಿಗಳು ತಮಗೆ ಪೌಷ್ಠಿಕ ಆಹಾರದ ಅವಶ್ಯಕತೆ ಇದೆ ಎಂದು ಮನವಿ ಮಾಡಿದ್ದು, 1255 ಕ್ಷಯ ರೋಗಿಗಳ ಪೈಕಿ 230 ರೋಗಿಗಳನ್ನು ಈಗಾಗಲೇ 60 ದಾನಿಗಳು ದತ್ತು ಪಡೆದು ಪೌಷ್ಠಿಕ ಆಹಾರ ಪೂರೈಕೆಗೆ ಕೈಜೋಡಿಸಿದ್ದಾರೆ.

ಜಿಲ್ಲಾಧಿಕಾರಿಗಳನ್ನೊಳಗೊಂಡು ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ತಲಾ ಒಬ್ಬ ಕ್ಷಯ ರೋಗಿಯನ್ನು ದತ್ತು ಪಡೆದು ಪೌಷ್ಠಿಕ ಆಹಾರ ಒದಗಿಸುತ್ತಿದ್ದಾರೆ. ಇತರೆ ಇಲಾಖಾ ಮುಖ್ಯಸ್ಥರೂ ಸಹ ಕ್ಷಯ ರೋಗಿಗಳಿಗೆ ಪೌಷ್ಠಿಕ ಆಹಾರ ಒದಗಿಸುವ ನಿಟ್ಟಿನಲ್ಲಿ ದತ್ತು ಪಡೆದು ಕ್ಷಯಮುಕ್ತ ಜಿಲ್ಲೆಯನ್ನಾಗಿಸು ವಲ್ಲಿ ಸಹಕರಿಸಬೇಕೆಂದು ತಿಳಿಸಿದರು.

ಜಿಲ್ಲಾ ಕ್ಷಯ ರೋಗ ಹಾಗೂ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಸನತ್ ಕುಮಾರ್ ಮಾತನಾಡಿ, ಕ್ಷಯ ಮುಕ್ತ ಜಿಲ್ಲೆ ವಿಭಾಗದಲ್ಲಿ ಜಿಲ್ಲೆಯು ಬೆಳ್ಳಿ ಪದಕಕ್ಕೆ ಆಯ್ಕೆಯಾಗಿದೆ ಎಂದು ತಿಳಿಸಿದರಲ್ಲದೆ, ಜಿಲ್ಲೆಯಲ್ಲಿ ಹೆಚ್‌ಐವಿ ಸೋಂಕಿತ,ಬಾಧಿತರಿಗೆ ಧನಶ್ರೀ ಯೋಜನೆಯಡಿ 25 ಹೆಚ್‌ಐವಿ ಸೋಂಕಿತರು, ಚೇತನ ಯೋಜನೆಯಡಿ 15 ದಮನಿತ ಮಹಿಳೆಯರು ಹಾಗೂ ಮೈತ್ರಿ ಯೋಜನೆ ಯಡಿ 12 ಲೈಂಗಿಕ ಅಲ್ಪಸಂಖ್ಯಾತ ಫಲಾನುಭವಿಗಳು ಆರ್ಥಿಕಾಭಿವೃದ್ಧಿ ಹೊಂದಲು 30ಸಾವಿರ ರೂ.ಗಳ ಸಹಾಯಧನ ಒದಗಿಸಲಾಗಿದೆ ಹಾಗೂ 18 ವರ್ಷದೊಳಗಿನ 279 ಹೆಚ್‌ಐವಿ ಸೋಂಕಿತ ಮತ್ತು ಬಾಧಿತ ಮಕ್ಕಳಿಗೆ ವಿದ್ಯಾಭ್ಯಾಸ ಹಾಗೂ ಪೌಷ್ಠಿಕ ಆಹಾರಕ್ಕಾಗಿ ಮಾಸಿಕ 1000 ರು.ಗಳ ನೆರವು ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಆಭಾ ಕಾರ್ಡ್ ಕಡ್ಡಾಯ

ಜಿಲ್ಲೆಯಲ್ಲಿರುವ ಶಾಲಾ,ಕಾಲೇಜು ಮಕ್ಕಳಿಗೆ ಕಡ್ಡಾಯವಾಗಿ ಆಯುಷ್ಮಾನ್ (ಆಭಾ) ಕಾರ್ಡ್ ವಿತರಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರೋಗ್ಯ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಅಂಗನವಾಡಿ, ಶಾಲೆ ಹಾಗೂ ಕಾಲೇಜಿನ 0-19 ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ವೈದ್ಯಾಧಿಕಾರಿಗಳು ಶಾಲಾ, ಕಾಲೇಜು ಗಳಿಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸಬೇಕು. ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಕಂಡು ಬಂದರೆ ಅವರ ಪೋಷಕರ ಗಮನಕ್ಕೆ ತಂದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಬೇಕು. ಹೆಚ್ಚಿನ ಚಿಕಿತ್ಸೆ ಅವಶ್ಯಕವಿದ್ದಲ್ಲಿ ತಾಲ್ಲೂಕು ಆಸ್ಪತ್ರೆ, ಜಿಲ್ಲಾಸ್ಪತ್ರೆಗೆ ರೆಫರ್ ಮಾಡಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಕೇಶವ್‌ರಾಜ್ ಮಾತನಾಡಿ, ಡಿಸೆಂಬರ್ ಮಾಹೆಯಲ್ಲಿ ಜಾಪ್ನೀಸ್ ಎನ್ಸೆಫೆಲೈಟಿಸ್(ಜೆಇ) ಲಸಿಕೆ ನೀಡಲು ಜಿಲ್ಲಾದ್ಯಂತ ಅಭಿಯಾನ ಹಮ್ಮಿಕೊಳ್ಳಲಾಗುವುದು. ಈ ಅಭಿಯಾನದಡಿ 1-15 ವರ್ಷದೊಳಗಿನ ಮಕ್ಕಳಿಗೆ ಜೆಇ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎನ್. ಮಂಜುನಾಥ್, ಜಿಲ್ಲಾ ಶಸ್ತçಚಿಕಿತ್ಸಕಿ ಡಾ.ವೀಣಾ, ಜಿಲ್ಲಾ ಸರ್ವೇಕ್ಷಾಣಾಧಿಕಾರಿ ಡಾ. ಮೋಹನ್‌ದಾಸ್ ಸೇರಿದಂತೆ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ, ಮತ್ತಿತರರು ಉಪಸ್ಥಿತರಿದ್ದರು.