ಬೆಂಗಳೂರು: ಕೊನೆ ಹಂತದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದ 32 ವರ್ಷದ ಮಹಿಳೆಗೆ ನಾಗರಭಾವಿ ಫೋರ್ಟಿಸ್ ಆಸ್ಪತ್ರೆ ವೈದ್ಯರ ತಂಡ ಅತ್ಯಾಧುನಿಕ ತಂತ್ತಜ್ಞಾನದಿಂದ ಯಶಸ್ವಿಯಾಗಿ ಕಿಡ್ನಿಕಸಿ ಮಾಡಿದೆ.
ಫೋರ್ಟಿಸ್ ಆಸ್ಪತ್ರೆಯ ನೆಫ್ರಾಲಜಿಯ ಹಿರಿಯ ಸಲಹೆಗಾರ ಡಾ ಮಂಜುನಾಥ್, ಮೂತ್ರಶಾಸ್ತ್ರ ವಿಭಾಗದ ಹಿರಿಯ ಸಲಹೆಗಾರ ಡಾ. ಪ್ರೇಮ್‌ಕುಮಾರ್ ಅವರ ತಂಡ ಈ ಶಸ್ತ್ರಚಿಕಿತ್ಸೆ ನಡೆಸಿದೆ.
ಈ ಕುರಿತು ಮಾತನಾಡಿದ ಡಾ.ಎಸ್. ಮಂಜುನಾಥ್, 32 ವರ್ಷದ ರೇಖಾ ಎಂಬುವ ಮಹಿಳೆಯು ಟೈಪ್ II ಡಯಾಬಿಟಿಸ್, ಬಿಪಿ, ಹೈಪೋಥೈರಾಯ್ಡ್ ಹೊಂದಿದ್ದ ಕಾರಣ ಕ್ರಮೇಣ ಅವರು ಮೂತ್ರಪಿಂಡದ ಕಾಯಿಲೆಗೆ ತುತ್ತಾಗಿದ್ದರು. ಅವರನ್ನು ಅನೇಕ ಪರೀಕ್ಷೆಗೆ ಒಳಪಡಿಸಿದ ನಂತರ ಅವರು ಕೊನೆಹಂತದ ಮೂತ್ರಪಿಂಡ ಕಾಯಿಲೆಗೆ ತುತ್ತಾಗಿರುವುದು ತಿಳಿದುಬಂತು. ಕೂಡಲೇ ಅವರಿಗೆ ಕಿಡ್ನಿಯ ಅವಶ್ಯಕತೆ ಇತ್ತು. ಇವರ ರಕ್ತಕ್ಕೆ ಹೊಂದುವ ಕಿಡ್ನಿ ಲಭ್ಯವಾಗುವ ಭವರಸೆ ಇರಲಿಲ್ಲ. ಆದರೆ, ಈಗಾಗಲೇ ಮೆದುಳು ನಿಷ್ಕ್ರಿಯದಿಂದ ಸಾವನ್ನಪ್ಪಿದ್ದ ವ್ಯಕ್ತಿಯ ಕಿಡ್ನಿಯು ಸಕಾಲದಲ್ಲಿ ದೊರೆತ ಕಾರಣದಿಂದ ರೇಖಾ ಅವರಿಗೆ ಸಕಾಲದಲ್ಲಿ ಕಿಡ್ನಿ ಕಸಿಯನ್ನು ಯಶಸ್ವಿಯಾಗಿ ನಡೆಸಲಾಯಿತು ಎಂದು ಹೇಳಿದರು.
ಮೂತ್ರಶಾಸ್ತ್ರ ವಿಭಾಗದ ಹಿರಿಯ ಸಲಹೆಗಾರ ಡಾ. ಪ್ರೇಮ್‌ಕುಮಾರ್ ಮಾತನಾಡಿ, ದೇಹ ದಾನ ಅತಿ ಮುಖ್ಯವಾದದ್ದು. ರೇಖಾ ಅವರಿಗೆ ಸಕಾಲದಲ್ಲಿ ಕಿಡ್ನಿ ದೊರೆತ ಕಾರಣದಿಂದ ಹಾಗೂ ಅವರ ಧನಾತ್ಮಕ ಪ್ರತಿಕ್ರಿಯಿಂದ ಈ ಕಿಡ್ನಿ ಕಸಿ ಪ್ರಕ್ರಿಯೆ ಸರಾಗವಾಗಿ ನಡೆಯಿತು ಎಂದು ವಿವರಿಸಿದರು.