ಕೆಲಸ ಕೊಡಿಸುವ ನೆಪದಲ್ಲಿ ಕೋಟ್ಯಂತರ ವಂಚನೆ
ಆರೋಪಿಗಳು ನಾಪತ್ತೆ
ತುಮಕೂರು: ಕೆಲಸ ಕೊಡಿಸುವ ಆಮಿಷ, ವ್ಯವಹಾರದ ನೆಪದಲ್ಲಿ ೧೬೦ಕ್ಕೂ ಹೆಚ್ಚು ಮಂದಿಗೆ ಪೊಲೀಸ್ ದಂಪತಿಗಳು ಮೋಸ ಮಾಡಿರುವ ಘಟನೆ ಜಯನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ತಿಪಟೂರು, ಪಾವಗಡ, ಕೊರಟಗೆರೆಯಲ್ಲಿ ಕೆಲಸ ಮಾಡಿದ್ದ ಪೊಲೀಸ್ ಸಿಬ್ಬಂದಿ ಮಹೇಶ್ ಹಾಗೂ ಪತ್ನಿ ಸುಧಾ ಜನರಿಗೆ ವಂಚಿಸಿರುವ ಬಗ್ಗೆ ದೂರು ದಾಖಲಾಗಿದೆ.
ತಿಲಕ್ ಪರ‍್ಕ್ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿದ್ದ ಮಹೇಶ್ ೨೦೧೯ರಲ್ಲಿ ರ‍್ತವ್ಯ ಲೋಪದ ಹಿನ್ನೆಲೆಯಲ್ಲಿ ವಜಾ ಗೊಂಡಿದ್ದರು. ಈತ ಕೆಲಸದಲ್ಲಿ ಇದ್ದಾಗಲೇ ಕೆಲಸದ ಆಮಿಷ ತೋರಿ ಒಬ್ಬೊಬ್ಬರಿಂದ ಸುಮಾರು ಐದಾರು ಲಕ್ಷ ಪೀಕಿದ್ದಾನೆ. ಈತನಿಗೆ ಪತ್ನಿ ಸುಧಾ ಸಾಥ್ ನೀಡಿದ್ದು, ಸುಮಾರು ೨ ಕೋಟಿಗೂ ಅಧಿಕ ಹಣವನ್ನು ಜನರಿಗೆ ಮೋಸಮಾಡಿದ್ದಾರೆ. ಪ್ರಕರಣ ಬಯಲಿಗೆ ಬಂದಾಗ ಇಬ್ಬರು ಕಾಣೆಯಾಗಿದ್ದಾರೆ.
ಆರೋಪಿ ಮಹೇಶ್ ವಾಸವಿದ್ದ ಜಯನಗರದ ಮನೆಯನ್ನು ಮೂವರ ಜನರಿಗೆ ಲೀಸ್ ಕೊಟ್ಟಿರುವುದು ಆಶ್ರ‍್ಯ ಮೂಡಿಸಿದೆ. ಮುಂದಿನ ತಿಂಗಳು ನಾನು ಬೇರೆ ಮನೆಗೆ ಶಿಫ್ಟ್ ಆಗುತ್ತೇನೆ ಎಂದು ನಂಬಿಸಿ ಮೂವರಿಂದ ಹಣ ಪಡೆದು ವಂಚಿಸಿದ್ದಾನೆ. ಮೂರು ತಿಂಗಳಲ್ಲಿ ಖಾಲಿ ಮಾಡುವೆ ಎಂದೇಳಿ ಒಬ್ಬರಿಂದ ೫ ಲಕ್ಷ, ೧೫ ದಿನದಲ್ಲಿ ಖಾಲಿ ಮಾಡುತ್ತೇನೆ ಎಂದು ಮತ್ತೊಬ್ಬರಿಂದ ೭ ಲಕ್ಷ ಹಾಗೂ ಮೂರು ದಿನದಲ್ಲಿ ಖಾಲಿ ಮಾಡುತ್ತೇನೆ ಎಂದೇಳಿ ೯ ಲಕ್ಷ ರೂಪಾಯಿ… ಹೀಗೆ ಮೂವರಿಗೂ ಲೀಸ್ ಒಡಂಬಡಿಕೆ ಮಾಡಿ ಕೊಟ್ಟು ಪತ್ನಿ, ಮಕ್ಕಳ ಸಮೇತ ಪರಾರಿಯಾಗಿದ್ದಾನೆ.
ಈ ಸಂಬಂಧ ಜಯನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮೋಸ ಹೋದವರಿಗೆ ನ್ಯಾಯ ಕೊಡಿಸುವ ಭರವಸೆಯನ್ನು ಎಸ್ಪಿ ರಾಹುಲ್ ಕುಮಾರ್ ನೀಡಿದ್ದಾರೆ.