Thursday, 21st November 2024

ಶೃಂಗೇರಿಯಲ್ಲಿ ಡ್ರೈವರ್‌ ಸೀಟ್‌ನಿಂದಲೇ ಬಸ್‌ ಹತ್ತಿದ ಮಹಿಳೆ…!

ಚಿಕ್ಕಮಗಳೂರು: ರಾಜ್ಯದಾದ್ಯಂತ ಮಹಿಳೆಯರಿಗೆ ಉಚಿತ ಬಸ್‌ ಆರಂಭವಾಗಿ ಬಸ್‌ ಹತ್ತಲು ಹಾಗೂ ಸೀಟ್‌ಗಳಿಗಾಗಿ ಮಹಿಳೆ ಯರು ಪರದಾಡುತ್ತಿದ್ದು, ಮಹಿಳೆಯೊಬ್ಬರು ಡ್ರೈವರ್‌ ಸೀಟ್‌ನಿಂದಲೇ ಬಸ್‌ ಹತ್ತಿರುವ ಪ್ರಸಂಗ ಶೃಂಗೇರಿಯಲ್ಲಿ ನಡೆದಿದೆ.

ಉಚಿತ ಬಸ್‌ ಪ್ರಯಾಣದ ಹಿನ್ನೆಲೆಯಲ್ಲಿ ಪುಣ್ಯ ಕ್ಷೇತ್ರಗಳಿಗೆ ತೆರಳುವ ಸಾರಿಗೆ ಬಸ್‌ಗಳು ಫುಲ್‌ ರಶ್‌ ಆಗಿದ್ದು, ಸಾವಿರಾರು ಮಹಿಳೆಯರು ಚಿಕ್ಕ  ಮಗಳೂರು ಜಿಲ್ಲೆಯ ಶೃಂಗೇರಿ ಶಾರದಾಂಬ ದೇವಾಲಯಕ್ಕೆ ಆಗಮಿಸಿದ್ದಾರೆ. ಶೃಂಗೇರಿ ಬಸ್‌ ನಿಲ್ದಾಣ ಸಂಪೂರ್ಣವಾಗಿ ಮಹಿಳೆಯ ರಿಂದ ತುಂಬಿದ್ದು, ಸಾರಿಗೆ ಬಸ್ ಹತ್ತಲು ಮಹಿಳೆಯರು ಪರದಾಡುತ್ತಿದ್ದಾರೆ.

ಈ ವೇಳೆ ಮಹಿಳೆಯೊಬ್ಬರು ಡ್ರೈವರ್‌ ಸೀಟ್‌ನಿಂದಲೇ ಬಸ್‌ ಹತ್ತಿದ ಘಟನೆ ನಡೆದಿದೆ. ಮೊದಲು ಮಕ್ಕಳನ್ನು ಡ್ರೈವರ್‌ ಸೀಟ್‌ನಲ್ಲಿ ಕೂರಿಸಿದ ಮಹಿಳೆ, ಬಳಿಕ ತಾನೂ ಡ್ರೈವರ್‌ ಸೀಟ್‌ನಿಂದಲೇ ಬಸ್‌ ಏರಿದ್ದಾರೆ.

ಹೊರನಾಡು ಅನ್ನಪೂಣೇಶ್ವರಿ ದರ್ಶನಕ್ಕೂ ಮಹಿಳೆಯರ ದಂಡು ಹೊರ ಟ್ಟಿದ್ದು, ಧಾರವಾಡ, ಹುಬ್ಬಳ್ಳಿ, ಹರಿಹರ, ಚಿತ್ರದುರ್ಗ, ಹರಿಹರ, ಹಾಸನ ದಿಂದ ಸುಮಾರು 400ಕ್ಕೂ ಹೆಚ್ಚು ಮಹಿಳೆಯರು ಆಗಮಿಸಿದ್ದಾರೆ. ಕೊಟ್ಟಿಗೆಹಾರದಿಂದ ಹೊರನಾಡಿಗೆ ಹೋಗಲು ಉಚಿತ ಬಸ್‌ಗಾಗಿ ಮಹಿಳೆಯರು ಇಡೀ ದಿನ ಕಾದಿದ್ದು, ಖಾಸಗಿ ಬಸ್‌ ಏರಲು ಮಹಿಳೆಯರು ಹಿಂದೇಟು ಹಾಕಿದ್ದಾರೆ.

ಕೊಟ್ಟಿಗೆಹಾರದಿಂದ ಹೊರನಾಡಿಗೆ ಬಸ್‌ಗಳ ಸಂಖ್ಯೆ ತೀರಾ ಕಡಿಮೆ ಇದೆ. ಉಚಿತ ಬಸ್‌ಗಾಗಿ ಮಹಿಳೆಯರು ಕಾದಿದ್ದು, ಬಸ್‌ ನಿಲ್ದಾಣದಲ್ಲಿಯೇ ತಾವು ತಂದ ರೊಟ್ಟಿ, ಚಟ್ನಿ ತಿಂದು ಸಮಯ ಕಳೆಯುತ್ತಿದ್ದಾರೆ. ಸುಮಾರು 400-500 ಮಹಿಳೆಯರು ಬಸ್‌ ನಿಲ್ದಾಣದಲ್ಲಿಯೇ 100-200 ರೂಪಾಯಿ ಖರ್ಚು ಮಾಡುತ್ತಿದ್ದರೂ, 60-70 ರೂ ಟಿಕೆಟ್ ಹಣ ನೀಡಿ ಖಾಸಗಿ ಬಸ್‌ನಲ್ಲಿ ಪ್ರಯಾಣಿಸಲು ಹಿಂದೇಟು ಹಾಕಿದ್ದಾರೆ.

ಸ್ಥಳೀಯ ಪ್ರಯಾಣಿಕರು ದಂಗಾಗಿದ್ದು, ಖಾಸಗಿ ಬಸ್‌ಗಳನ್ನೇರಿ ಪ್ರಯಾಣ ನಡೆಸಿದ್ದಾರೆ.