Thursday, 12th December 2024

ವಿದ್ಯುತ್‌ ಬಿಲ್ ಪಾವತಿಸಲು ನಿರಾಕರಣೆ, ಸಿಬ್ಬಂದಿ ಮೇಲೆ ಹಲ್ಲೆ

ಹಾಸನ : ಕಾಂಗ್ರೆಸ್‌ ಸರ್ಕಾರ 200 ಯೂನಿಟ್‌ ಉಚಿತ ವಿದ್ಯುತ್‌ ಗ್ಯಾರಂಟಿ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯದ ಹಲವಡೆ ವಿದ್ಯುತ್ ಬಿಲ್ ಪಾವತಿಸಲು ಜನರು ನಿರಾಕರಿಸುತ್ತಿದ್ದು, ಕೆಲವಡೆ ಬಿಲ್ ಕಲೆಕ್ಷನ್ ಗೆ ಹೋದ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಲಾಗಿದೆ.

ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ, ಹಳೇ ಕೋರ್ಟ್ ರಸ್ತೆಯಲ್ಲಿರುವ ಕೋಳಿ ಅಂಗಡಿ ಮಾಲೀಕ ಸುರೇಶ್ ಎಂಬುವರು ಬಿಲ್ ಕಲೆಕ್ಷನ್‌ಗೆ ಹೋಗಿದ್ದ ಚೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ‌.

ಚೆಸ್ಕಾಂ ಸಿಬ್ಬಂದಿ ಸಂತೋಷ್ ಸುರೇಶ್ ಮನೆ ಬಳಿ ತೆರಳಿ ಬಾಕಿ 1,150 ರೂ. ವಿದ್ಯುತ್ ಬಿಲ್ ಪಾವತಿಸುವಂತೆ ಕೇಳಿದ್ದಾರೆ.

ಆದರೆ ಸುರೇಶ್‌ ನಾವು ಹಣ ಕಟ್ಟಲ್ಲ, ಸರ್ಕಾರ ಹೇಳಿದೆ ಆದರೂ ನೀನು ಬಿಲ್ ಕೇಳಲು ಬಂದಿದ್ದೀಯಾ ಅಂತಾ ಚೆಸ್ಕಾಂ ಸಿಬ್ಬಂದಿಯನ್ನ ನಿಂದಿಸಿ ಸುರೇಶ್ ಹಾಗೂ ಆತನ ಅಪ್ರಾಪ್ತ ಪುತ್ರ ಏಕಾಏಕಿ ಹಲ್ಲೆ ಮಾಡಿದ್ದಾರೆ ಎಂದು ಸಂತೋಷ್ ಆರೋಪಿಸಿದ್ದಾರೆ.