Thursday, 12th December 2024

ಗಾಂಧೀಜಿಯವರ ಆದರ್ಶಗಳನ್ನು ವಿಶ್ವವೇ ಒಪ್ಪಿದೆ- ಸಚಿವ ಪರಮೇಶ್ವರ್

ತುಮಕೂರು: ಅಹಿಂಸೆ, ಶಾಂತಿ ಮಾರ್ಗದಿಂದ ಸ್ವಾತಂತ್ರ‍್ಯ ಗಳಿಸಬಹುದು ಎಂಬುದನ್ನು ಮಹಾತ್ಮ ಗಾಂಧೀಜಿ ಅವರು ವಿಶ್ವಕ್ಕೆ ತೋರಿಸಿಕೊಟ್ಟಿದ್ದಾರೆ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು.

ಮಹಾನಗರ ಪಾಲಿಕೆ ವತಿಯಿಂದ ನಗರದ ಅಮಾನಿಕೆರೆ ಉದ್ಯಾನವನದಲ್ಲಿ ನಿರ್ಮಿಸಿರುವ ಗ್ಯಾರಮೂರ್ತಿ ಕಲಾ ಕೃತಿ ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತಿನ ಹಲವಾರು ದೇಶಗಳು ಗಾಂಧೀಜಿಯವರ ಆದರ್ಶಗಳನ್ನು ಒಪ್ಪಿ, ಅಳವಡಿಸಿಕೊಂಡಿವೆ. ಇದಕ್ಕೆ ಸಾಕ್ಷಿಯಾಗಿ ಬಹುತೇಕ ಪ್ರಪಂಚದ ಎಲ್ಲ ದೇಶಗಳಲ್ಲಿ ಗಾಂಧೀಜಿ ಅವರ ಪ್ರತಿಮೆ ಗಳನ್ನು ಕಾಣಬಹುದಾಗಿದೆ. ಆಫ್ರಿಕಾ ದೇಶವನ್ನು ಸ್ವತಂತ್ರಗೊಳಿಸುವಲ್ಲಿ ನೆಲ್ಸನ್ ಮಂಡೇಲಾ ಅವರಿಗೆ ಗಾಂಧೀಜಿ ಯವರ ಆದರ್ಶಗಳೇ ಪ್ರೇರಣೆಯಾಗಿದ್ದವು. ಗಾಂಧಿ ಭಾರತದ ಶಕ್ತಿಯಾಗಿದ್ದರು. ಗಾಂಧೀಜಿಯವರನ್ನು ಪಡೆದ ನಾವೆಲ್ಲ ಅದೃಷ್ಟವಂತರು ಎಂದು ಅವರು ಎಂದು ಹೇಳಿದರು.

ಕೇಂದ್ರದ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವ ಹಾಗೂ ಸಂಸದ ವಿ. ಸೋಮಣ್ಣ ಮಾತನಾಡಿ ಸ್ವಚ್ಛ ಭಾರತ ಗಾಂಧಿಯವರ ಕನಸಾಗಿತ್ತು. ಗಾಂಧಿ ಕನಸನ್ನು ನನಸಾಗಿಸಲು ಕೇಂದ್ರ ಸರ್ಕಾರದಿಂದ ದೇಶದಾದ್ಯಂತ ಹಮ್ಮಿ ಕೊಂಡಿರುವ ಸ್ವಚ್ಛ ಭಾರತ್ ಅಭಿಯಾನ ಕಾರ್ಯಕ್ರಮವು ಯಶಸ್ವಿ ಕಂಡಿದೆ. ವಿಶ್ವದ ಭೂಪಟದಲ್ಲಿ ದೇಶದ ಹೆಸರನ್ನು ಗುರುತಿಸುವಂತೆ ಮಾಡಿರುವ ಗಾಂಧೀಜಿ, ಲಾಲ್‌ಬಹದ್ದೂರ್ ಶಾಸ್ತಿçಯರಂತಹ ಸಾಧಕರ ಮಾರ್ಗದಲ್ಲಿ ನಮ್ಮ ಮಕ್ಕಳು ನಡೆಯುವಂತಾಗಬೇಕು ಎಂದು ಕರೆ ನೀಡಿದರು.

ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜಾ ಗ್ಯಾರಾ ಮೂರ್ತಿಗಳ ಬಗ್ಗೆ ಮಾಹಿತಿ ನೀಡುತ್ತಾ ಅಮಾನಿಕೆರೆಯ ಗ್ಯಾರಾ ಮೂರ್ತಿ(ಹನ್ನೊಂದು ಮೂರ್ತಿ) ಎಂಬುದು ಭಾರತದ ಸ್ವಾತಂತ್ರ‍್ಯ ಸಂಗ್ರಾಮದ ಪ್ರಮುಖ ಚಳುವಳಿಯಾದ ‘ದಂಡಿಯಾತ್ರೆ’ ಅಥವಾ ಉಪ್ಪಿನ ಸತ್ಯಾಗ್ರಹವನ್ನು ಬಿಂಬಿಸುವ ಕಲಾಕೃತಿಯಾಗಿದೆ ಎಂದು ತಿಳಿಸಿದರು.

ಅಮಾನಿಕೆರೆ ಉದ್ಯಾನವನದಲ್ಲಿ ಈ ಗ್ಯಾರಾಮೂರ್ತಿಯ ಕಲಾಕೃತಿಯ ಪ್ರತಿರೂಪವನ್ನು ಸ್ಥಾಪಿಸಲಾಗಿದ್ದು ಆಕೃತಿಯು ಒಟ್ಟು 50 ಅಡಿ ಉದ್ದ ಹಾಗೂ ಸರಾಸರಿ 10 ಅಡಿ ಎತ್ತರವಿದ್ದು ನಿಂದ ಸೃಷ್ಟಿಸಲ್ಪಟ್ಟಿದ್ದಾಗಿರುತ್ತದೆ ಎಂದು ತಿಳಿಸಿದರು.

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಜಿಲ್ಲೆಯ ಮಾಜಿ ಸೈನಿಕರಾದ ಸುಬೇದಾರ್ ಬಿ. ಲಿಂಗಣ್ಣ, ಸಾರ್ಜೆಂಟ್ ಸಿ. ಪಾಂಡುರಂಗ, ಹವಾಲ್ದಾರರುಗಳಾದ ಪ್ರಸನ್ನಕುಮಾರ್, ನವೀನ್, ಗಂಗಯ್ಯ, ವಿ.ಡಿ. ನಾಗರಾಜು, ಪುಟ್ಟ ಬಾಲಯ್ಯ, ರಾಜಣ್ಣ, ಡಿ.ಎಲ್ ರಾಜಣ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕರಾದ ಜ್ಯೋತಿಗಣೇಶ್ ಹಾಗೂ ಬಿ.ಸುರೇಶ್‌ಗೌಡ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಭು, ಅವರು ಇದ್ದರು.

ಇದನ್ನೂ ಓದಿ: Dr G Parameshwar: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ