Sunday, 15th December 2024

ಗ್ಯಾಸ್ ಅಕ್ರಮ ಬಳಕೆ: ಸರಕಾರಕ್ಕೆ ಕೋಟ್ಯಂತರ ನಷ್ಟ 

ತುಮಕೂರು: ಮನೆ ಬಳಕೆಯ ಅಡುಗೆ ಸಿಲಿಂಡರ್‌ನ್ನು ತೈಲಕಂಪನಿಗಳು ಹಾಗೂ ಗ್ಯಾಸ್ ಎಜೆನ್ಸಿಗಳು ಸೇರಿ ಅಕ್ರಮವಾಗಿ ವಾಣಿಜ್ಯ ಬಳಕೆಯ ಅಡುಗೆ ಅನಿಲವಾಗಿ ಪರಿವರ್ತಿಸಿ, ಸರಕಾರಕ್ಕೆ ಕೋಟ್ಯಂತರ  ನಷ್ಟ ಉಂಟು ಮಾಡುತ್ತಿದ್ದು, ಜನರು ಜಾಗೃತರಾಗಿ ಕಂಪನಿಗಳ ಅಕ್ರಮಕ್ಕೆ ಕಡಿವಾಣ ಹಾಕ ಬೇಕೆಂದು ಗ್ರಾಹಕ್ ದಕ್ಷತಾ ಕಲ್ಯಾಣ ಪೌಂಢೇಷನ್ ನ ಆಡಳಿತಾಧಿಕಾರಿ ಪ್ರಶಾಂತ್ ಜಾಮಗಡೆ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ವಾಣಿಜ್ಯ ಸಿಲಿಂಡರ್‌ಗಳ ಬೆಲೆಗಳು ಶೇ100 ರಷ್ಟು ಹೆಚ್ಚಾಗಿರುವ ಹಿನ್ನೆಲೆಯಲ್ಲಿ 14.2 ಕೆ.ಜಿಯ ಮನೆ ಬಳಕೆ ಸಿಲಿಂಡರ್‌ಗಳನ್ನು ವಾಣಿಜ್ಯ ಸಿಲಿಂಡರ್‌ಗೆ ರಿಫಿಲ್ ಮಾಡುವ ದಂಧೆ ಹೆಗ್ಗಿಲ್ಲದೆ ನಡೆಯುತ್ತಿದೆ. ವಾಹಹಗಳಲ್ಲಿಯೂ ಅತಿ ಹೆಚ್ಚಾಗಿ ಗೃಹ ಬಳಕೆ ಸಿಲಿಂಡರ್ ಬಳಕೆ ಮಾಡಲಾಗುತ್ತಿದೆ. ಇದರಿಂದ ಸರಕಾರಕ್ಕೆ ಕೋಟ್ಯಾಂತರ ರೂ ನಷ್ಟವಾಗುತ್ತಿದ್ದು, ಗ್ರಾಹಕರು ಪಡೆಯುವ ಸಬ್ಸಿಡಿಗೂ ಹೊಡೆತ ಬೀಳಲಿದೆ ಎಂದರು.
ಗ್ರಾಹಕ ದಕ್ಷತಾ ಕಲ್ಯಾಣ ಪೌಂಢೇಷನ್ ಅಯಿಲ್ ಕಂಪನಿಗಳು,ಗ್ಯಾಸ್ ಏಜೆನ್ಸಿಗಳು ಸರಕಾರಕ್ಕೆ ಮಾಡುತ್ತಿರುವ ಮೋಸವನ್ನು ಜನರಿಗೆ ತಿಳಿಸಿ,ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕೆಲಸ ಮಾಡುತ್ತಿದೆ.
ತೈಲಕಂಪನಿಗಳು ಮತ್ತು ಗ್ಯಾಸ್ ಏಜೆನ್ಸಿಗಳು ಗ್ರಾಹಕರಿಗೆ ಮತ್ತು ಸರಕಾರಕ್ಕೆ ಮಾಡುತ್ತಿರುವ ಮೋಸವನ್ನು ತಡೆಗಟ್ಟಬೇಕಾದರೆ ಮೊದಲು ಗ್ರಾಹಕರು ಜಾಗೃತರಾಗಬೇಕಾಗಿದೆ.ಪ್ರತಿ ಬಾರಿ ಸಿಲಿಂಡರ್ ನೀಡಲು ಬಂದಾಗ ತೂಕ ಚೆಕ್ ಮಾಡಿ ಪಡೆಯಬೇಕು.ಸಿಲಿಂಡರ್ ಸೋರಿಕೆಯಾಗುತ್ತಿದೆಯೇ ಎಂಬು ದನ್ನು ಪರಿಶೀಲಿಸಿ ಪಡೆದುಕೊಳ್ಳಬೇಕು ಮನವಿ ಮಾಡಿದ ಅವರು, ಸರಕಾರ ರೇಷನ್ ವಿತರಿಸುವಾಗ ಬೆರಳಚ್ಚು ಪಡೆಯುವ ರೀತಿ ಗ್ಯಾಸ್ ವಿತರಿಸು ವಾಗಲು ಪಡೆಯುವಂತಹ ವ್ಯವಸ್ಥೆಯನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾಹಕ್ ದಕ್ಷತಾ ಕಲ್ಯಾಣ ಪೌಂಡೇಷನ್‌ನ ಪಿ.ಆರ್.ಓ ಅರುಣ್‌ಕುಮಾರ್, ಯಶ್ ದೇಶಪಾಂಡೆ ಹಾಗೂ ಕರ್ನಾಟಕ ಮುಖ್ಯಸ್ಥ ಚೇತನಕುಮಾರ್ ಅವರುಗಳು ಪಾಲ್ಗೊಂಡಿದ್ದರು.