ತುಮಕೂರು: ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿ ವಿವಿಧ ದೇಶಗಳ ಸಂವಿಧಾನವನ್ನು ಹಾಗೂ ಭಾರತ ದೇಶದ ಮಹಾನ್ ಗ್ರಂಥಗಳು, ಆಚರಣೆ, ಸಂಪ್ರದಾಯಗಳ ಅಧ್ಯಯನ ಮಾಡಿ ಸಂವಿಧಾನ ರಚಿಸಿ ದೇಶಕ್ಕೆ ಅಮೂಲ್ಯವಾದ ಕೊಡುಗೆಯನ್ನು ನೀಡಿ ದ್ದಾರೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 67ನೇ ಪುಣ್ಯ ಸ್ಮರಣೆ ಕಾರ್ಯಕ್ರಮ ದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ಗೌರವ ಸಮರ್ಪಣೆ ಮಾಡಿ ಅವರು ಮಾತನಾಡಿದರು.
ಇಂದು ಡಿಸೆಂಬರ್ 6. ಈ ದಿನದಂದು ಭಾರತ ದೇಶಕ್ಕೆ ಬಹುದೊಡ್ಡ ಸಂವಿಧಾನದ ಕೊಡುಗೆ ನೀಡಿದ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ರವರ ಪುಣ್ಯತಿಥಿ ದಿನ. ಅವರ ಮಹಾಪರಿನಿರ್ವಾಣ ದಿನದಂದು ಪುಣ್ಯಸ್ಮರಣೆ ನಾವೆಲ್ಲ ಮಾಡಬೇಕಿದೆ. ಭಾರತದ ಕಾನೂನು ಸುವ್ಯವಸ್ಥೆ, ಅಸ್ಪೃಶ್ಯತೆ ನಿವಾರಣೆ, ಪ್ರಜೆಗಳ ಮೂಲಭೂತ ಕರ್ತವ್ಯ, ಸಮಾನತೆ, ಶಿಕ್ಷಣ ಕ್ಷೇತ್ರ, ಇತರೆ ಹಲವು ಕ್ಷೇತ್ರಗಳಿಗೆ ಅವರು ನೀಡಿದ ಕೊಡುಗೆಗಳು ಎಂದೂ ಸಹ ಮಾಸುವುದಿಲ್ಲ ಎಂದು ತಿಳಿಸಿದರು.
ಮನುಷ್ಯನು ತನ್ನ ಕರ್ಮಗಳನ್ನು ಪೂರ್ಣಗೊಳಿಸಲು 7 ಬಾರಿ ಜನ್ಮವೆತ್ತುತ್ತಾನೆ. ಕೊನೆಯ ಜನ್ಮವೇ ಪರಿನಿರ್ವಾಣವಾಗಿದೆ. ಪರಿನಿರ್ವಾಣ ಎಂದರೆ ಆತ್ಮಕ್ಕೆ ಶಾಂತಿ ಸಿಕ್ಕಿದೆ ಎಂದರ್ಥ. ಇದು ಬೌದ್ಧ ಧರ್ಮದಲ್ಲಿ ಪಾಲಿಸಿಕೊಂಡು ಬಂದ ನಂಬಿಕೆಯಾಗಿದೆ ಎಂದು ತಿಳಿಸಿದ ಜಿಲ್ಲಾಧಿಕಾರಿಗಳು, ಡಾ.ಬಿ.ಆರ್. ಅಂಬೇಡ್ಕರ್ ಅವರೊಂದು ಮಹಾ ಚೇತನ. ಇವರ ಸಾಧನೆಗಳನ್ನು ವರ್ಣಿಸಲು ಪದಗಳೇ ಸಾಲದು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, ದೇಶದ ಪ್ರಗತಿಯ ದಿಕ್ಕನ್ನು ಬದಲಾಯಿಸುವಲ್ಲಿ ಸಂವಿಧಾನದ ಪಾತ್ರ ಮಹತ್ತವಾದದ್ದು, ಅಂಬೇಡ್ಕರ್ ಅವರು ತಮ್ಮ ಅಧ್ಯಯನ ಮತ್ತು ಜ್ಞಾನವನ್ನು ಧಾರೆಯೆರೆದು ಸಂವಿಧಾನವನ್ನು ರಚಿಸಿದ್ದಾರೆ. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಸೇರಿದಂತೆ ವಿಶ್ವದ ಅನೇಕ ವಿಶ್ವವಿದ್ಯಾನಿಲಯಗಳು ಅಂಬೇಡ್ಕರ್ ಅಧ್ಯಯನ ಪೀಠವನ್ನು ಸ್ಥಾಪಿಸಿವೆ ಎಂದು ತಿಳಿಸಿದರು. ಅಂಬೇಡ್ಕರ್ ಅವರ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ಅವರ ಕೊಡುಗೆಗಳನ್ನು ಮನನ ಮಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಉಪವಿಭಾಗಾಧಿಕಾರಿ ಗೌರವ್‌ಕುಮಾರ್‌ಶೆಟ್ಟಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು, ಪ.ಜಾತಿ, ಪ.ವರ್ಗದ ಸಂಘ ಸಂಸ್ಥೆಗಳ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.