ಗೌರಿಬಿದನೂರು: ಪಟ್ಟಣದ ಮುನೇಶ್ವರ ಬಡಾವಣೆಯ ತೀರ್ಥಶಾಲೆಯಲ್ಲಿ ಆದಿಕವಿ, ಶ್ರೇಷ್ಠ ಋಷಿ, ಮಹರ್ಷಿ ಶ್ರೀ ವಾಲ್ಮೀಕಿ ಜಯಂತಿಯನ್ನು ಭಕ್ತಿ ಪೂರ್ವಕವಾಗಿ ಆಚರಿಸಲಾಯಿತು.
ಸಂಸ್ಥೆ ಅಧ್ಯಕ್ಷ ಡಾ. ಕೆ.ವಿ.ಪ್ರಕಾಶ್ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪ ನಮನ ಮಾಡಿ ಮಾತನಾಡಿ, ಶ್ರೀ ವಾಲ್ಮೀಕಿ ರಚಿಸಿದ ರಾಮಾಯಣ ಮಹಾಕಾವ್ಯ 24000 ಶ್ಲೋಕಗಳು, 50 ಸರ್ಗಗಳು ಮತ್ತು ಸಪ್ತಕಾಂಡಗಳನ್ನು ಒಳಗೊಂಡಿದೆ. ರಾಮಾಯಣದಲ್ಲಿ ಪಿತೃ ಭಕ್ತಿ, ಮಾತಾ ಭಕ್ತಿ, ರಾಜ ಭಕ್ತಿ, ಗುರು ಭಕ್ತಿ ,ಸೋದರತ್ವ ಮತ್ತಿತರ ಮಾನವೀಯ ಮೌಲ್ಯಗಳಿಗೆ ಒತ್ತು ನೀಡಲಾಗಿದೆ. ಶ್ರೀವಾಲ್ಮೀಕಿ ಆಶ್ರಮದಲ್ಲಿಯೇ ಆಶ್ರಯ ನೀಡಿ ಸೀತೆಗೆ ಜನಿಸಿದ ಲವಕುಶರಿಗೆ ಸಾಹಿತ್ಯ, ಸಂಗೀತ, ಶಸ್ತಾçಭ್ಯಾಸ ಮತ್ತಿತರ ವಿದ್ಯೆ ಕಲಿಸಿದ ವಿಶ್ವದ ಪ್ರಪ್ರಥಮ ವಿಶ್ವವಿದ್ಯಾಲಯ ವಾಗಿತ್ತು.
ವಿದ್ವತ್ತು,ಪ್ರತಿಭೆ, ಜಾತಿ ಆಧಾರಿತವಲ್ಲ,ಅದು ಪರಿಶ್ರಮದಿಂದ ಪಡೆಯುವ ರತ್ನಗಳು ಎಂದು ಮಹರ್ಷಿ ಸಾರಿದ್ದಾರೆ.ಅಕ್ಷರ ಸಂಸ್ಕೃತಿಯನ್ನು ಪ್ರತಿಯೊಬ್ಬ ಮನುಷ್ಯನು ಮೈಗೂಡಿಸಿಕೊಳ್ಳುವ ಸಂದೇಶವನ್ನು ವಿಶ್ವಕ್ಕೆ ಸಾರಿದ ಮಹಾ ಋಷಿ ಮಹರ್ಷಿ ವಾಲ್ಮೀಕಿ ಆಗಿದ್ದಾರೆ.ಇವರ ಸಂದೇಶಗಳು ಸಾರ್ವಕಾಲಿಕ ಸತ್ಯ ಮತ್ತು ಅಮರವಾಗಿವೆ ಎಂದು ತಿಳಿಸಿದರು.
ಮುಖ್ಯ ಶಿಕ್ಷಕಿ ಎಂ. ಶೋಭಾ ಮಾತನಾಡಿ,ನಾವು ವಾಲ್ಮೀಕಿಯನ್ನು ಓದಿ ಅದರಲ್ಲಿರುವ ಮೌಲ್ಯಗಳನ್ನು ಗ್ರಹಿಸಿಕೊಂಡು ಹಿಂಸಾ ರಹಿತ ಸುಖಿ ಸಮಾಜ ಕಟ್ಟಬೇಕು. ರಾಮಾಯಣ ಮನುಷ್ಯನನ್ನು ದೈವತ್ವಕ್ಕೇರಿಸಿದ ಪ್ರಥಮ ಲಿಖಿತ ಸಾಹಿತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಭಾರ್ಗವಿ, ಸಂಧ್ಯಾ,ಸಾಯಿ ಪ್ರಿಯ ಮತ್ತು ಚಂದ್ರಮ್ಮ ಉಪಸ್ಥಿತರಿದ್ದರು. ಮಕ್ಕಳು ಮಹಾಕವಿಗೆ ಪುಷ್ಪ ನಮನ ಮಾಡಿದರು.