ಗೌರಿಬಿದನೂರು: ಪಟ್ಟಣದ ಡಿಪಾಳ್ಯ ರಸ್ತೆಯಲ್ಲಿರುವ ಜಿ.ಎನ್.ಆರ್. ಗ್ಲೋಬಲ್ ಅಕಾಡೆಮಿ ಆಯೋಜಿಸಿದ್ದ ಸಂಯುಕ್ತ ಪಿಯು ಕಾಲೇಜಿನ ನಾಲ್ಕನೇ ವಾರ್ಷಿಕೋತ್ಸವದಲ್ಲಿ ಶಿಕ್ಷಣ ಪ್ರೇಮಿ ಗುಟ್ಟೇನಹಳ್ಳಿ ನರಸಿಂಹರೆಡ್ಡಿ ನೆನಪಿನಲ್ಲಿ ಪ್ರೊ.ಕೆ.ವಿ. ಪ್ರಕಾಶ್ ಅವರಿಗೆ ಜಿ.ಎನ್.ಆರ್. ವರ್ಷದ ವ್ಯಕ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಗರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮೂರು ದಶಕಗಳಿಂದ ಶಿಕ್ಷಣ, ಸಾಹಿತ್ಯ, ಸಂಸ್ಕೃತಿ ಮತ್ತು ಕಲಾ ಕ್ಷೇತ್ರಗಳಲ್ಲಿ ಅವಿರತ ಸೇವೆ ಸಲ್ಲಿಸಿರುವ ಮುನೇಶ್ವರ ಬಡಾವಣೆಯ ತೀರ್ಥ ಶಾಲೆಯ ಅಧ್ಯಕ್ಷರು ಹಾಗೂ ಚಿಕ್ಕ ಬಳ್ಳಾಪುರದ ಶ್ರೀ ಕೆ.ವಿ.ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿರುವ ಪ್ರೊ. ಕೆ.ವಿ.ಪ್ರಕಾಶ್ ರವರಿಗೆ ೨೦೨೪- ೨೫ ನೇ ಸಾಲಿನ ಜಿ.ಎನ್.ಆರ್ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಿ ಗೌರವಿಸಲಾಯಿತು.
ಪ್ರಶಸ್ತಿ ಪುರಸ್ಕೃತರಾದ ಪ್ರೊ.ಕೆ.ವಿ.ಪ್ರಕಾಶ್ ಮಾತನಾಡಿ, ಪ್ರಾತಃ ಸ್ಮರಣೀಯರಾದ ಗುಟ್ಟೇನಹಳ್ಳಿ ನರಸಿಂಹ ರೆಡ್ಡಿ ಅವರು ವೃತ್ತಿಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಅಭಿಯಂತರರಾಗಿ ಕೆಲಸ ನಿರ್ವಹಿಸಿ, ನಿವೃತ್ತಿಯಾದ ನಂತರ ಸಮಾಜದ ಲೋಕೋಪಕಾರಿ ಕಾಯಕಗಳಲ್ಲಿ ತೊಡಗಿಸಿಕೊಂಡಿದ್ದರು.ಆಧ್ಯಾತ್ಮಿಕ ಕ್ಷೇತ್ರದಿಂದ ಶಿಕ್ಷಣ ಕ್ಷೇತ್ರದ ಕಡೆ ಒಲವು ತೋರಿಸಿ ಬೆಂಗಳೂರು ಮತ್ತು ಗೌರಿಬಿದನೂರುನಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಅಕ್ಷರ ದಾನ ಮಾಡುತ್ತಿರುವ ಶ್ರೇಷ್ಠ ಶಿಕ್ಷಣ ದಾನಿಗಳು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಮಾತನಾಡಿ, ಜಿಎನ್‌ಆರ್ ವಿದ್ಯಾಸಂಸ್ಥೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು ಭವಿಷ್ಯದ ದಿನಗಳಲ್ಲಿ ಬೃಹತ್ ಸಂಸ್ಥೆಯಾಗಿ ಪ್ರಗತಿಯಾಗುತ್ತದೆ. ವರ್ಷದ ವ್ಯಕ್ತಿ ಪ್ರಶಸ್ತಿಯ ಸಾಧಕರಾದ ಪ್ರೊ.ಕೆ.ವಿ. ಪ್ರಕಾಶ್ ಮತ್ತು ವೇಣು ಮಾಧವರವರಿಗೆ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಜಿ.ಎನ್.ಆರ್ ಸಂಸ್ಥೆಯ ಅಧ್ಯಕ್ಷರಾದ ಜಿ.ಎನ್. ಚಂದ್ರಶೇಖರ ರೆಡ್ಡಿ ಜಿಲ್ಲಾ ಖಾಸಗಿ ಶಾಲೆಯ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷರಾದ ಬಿ.ವಿ.ಶ್ರೀನಿವಾಸ್, ಟ್ರಸ್ಟಿಗಳಾದ ಶ್ರೀಮತಿ ಪುಷ್ಪ ರೆಡ್ಡಿ, ಸ್ವರೂಪ ರೆಡ್ಡಿ, ಪ್ರಾಂಶುಪಾಲರಾದ ಸಿ.ಎಸ್.ನಾಗರಾಜ್, ಲವ್ ರೆಡ್ಡಿ ಸಿನಿಮಾದ ಚಿತ್ರನಟಿ ಶ್ರಾವಣಿ ರೆಡ್ಡಿ, ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.