Sunday, 15th December 2024

ಸರಕಾರಿ ಗೋಮಾಳದಲ್ಲಿ ಪುರಾತನ ಟಾಮ್ಲಿನ್ ಚರ್ಚ್ ನಿರ್ಮಾಣ

ತುಮಕೂರು : ನಗರದ ಶಿರಾಗೇಟ್ ಬಳಿಯಿರುವ ಪುರಾತನ ಟಾಮ್ಲಿನ್‌ಸನ್ ಚರ್ಚ್ ಭೂ ವಿವಾದ ತಿರುವು ಪಡೆದುಕೊಂಡಿದ್ದು, ಸರ್ಕಾರಿ ಗೋಮಾಳದಲ್ಲಿ ಚರ್ಚ್  ನಿರ್ಮಾಣ ಮಾಡಲಾಗಿದೆ ಎಂದು ಬಜರಂಗದಳದ ಕಾರ್ಯಕರ್ತ ರಾಕೇಶ್  ಆರೋಪಿಸಿದ್ದಾರೆ.
ಹಿಂದು ದೇವಾಲಯದ ಮಾದರಿಯಲ್ಲಿರುವ ಟಾಮ್ಲಿನ್‌ಸನ್ ಚರ್ಚ್, ಚಾಲುಕ್ಯರ ವಾಸ್ತು ಶಿಲ್ಪ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಚರ್ಚ್ ಪಾಯ ಕೂಡ ಹಿಂದು ದೇವಾಲ ಯದ ಪಾಯದಂತೆ ಇದೆ. ಹಿಂದೂ ದೇವಾಲಯದಲ್ಲಿ ಇರುವಂತೆಯೇ ಕಳಸ ಇಡುವ ಗುಮ್ಮಟ ಕೂಡ ಇದೆ.
ದೇವಸ್ಥಾನ ಕೆಡವಿ ಚರ್ಚ್ ಕಟ್ಟಲಾಗಿದೆ ಎಂದು ಹಿಂದುಪರ ಕಾರ್ಯಕರ್ತ ರಾಕೇಶ್ ಆರೋಪಿಸಿದ್ದಾರೆ. ಈ ಸಂಬ0ಧ ಪ್ರತಿಕ್ರಿಯಿಸಿರುವ ಚರ್ಚ್ ಏರಿಯಾ ಚೇರ್‌ಮ್ಯಾನ್ ಮನೋಜ್, ಇದು ಚಾಲುಕ್ಯರ ವಾಸ್ತುಶಿಲ್ಪದಲ್ಲಿ ಜ್ಯಾತ್ಯತೀತವಾಗಿ ಕಟ್ಟಿರುವ ದೇವಾಲಯ, ಹಾಗಾಗಿ ಹಿಂದೂ ದೇವಾಲಯದಂತೆ ಕಾಣುತ್ತದೆ ಎಂದಿದ್ದಾರೆ. ಸರ್ವೇ ೨೦೦ರ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಕಾಂಪೌಂಡ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಬಿಜೆಪಿ ಎಸ್ಟಿ ಮೋರ್ಚಾ ಕಾರ್ಯದರ್ಶಿ ರಾಕೇಶ್, ಮಹಾನಗರ ಪಾಲಿಕೆ ಹಾಗೂ ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಕೇವಲ ಇದು ಸರ್ಕಾರದ ಜಾಗ ಅಷ್ಟೇ ಅಲ್ಲ ಚರ್ಚ್ ಇರುವ ಜಾಗದಲ್ಲಿ ಹಿಂದುಗಳ ದೇವಸ್ಥಾನ ಇದ್ದು, ಅಲ್ಲಿ ನಾಗರ ಪೂಜೆ ಕೂಡ ನಡಿಯುತ್ತಿತ್ತು ಎಂದು ರಾಕೇಶ್ ಆರೋಪಿಸಿದ್ದರು.
ದೂರಿನನ್ವಯ ಮಹಾನಗರ ಪಾಲಿಕೆ ಅಧಿಕಾರಿಗಳು, ಹೊಸದಾಗಿ ಕಟ್ಟಲಾಗುತಿದ್ದ ಚರ್ಚ್ ಕಾಂಪೌ0ಡ್‌ಗೆ ತಡೆಯೊಡ್ಡಿ ನೋಟಿಸ್ ನೀಡಿದ್ದರು. ಈ ನಡುವೆ ಭಾನುವಾರ ಎರಡೂ ಕಡೆಯವರು ದಾಖಲಾತಿ ಬಿಡುಗಡೆ ಮಾಡಿದ್ದು ಹಿಂದು ಕಾರ್ಯಕರ್ತ ರಾಕೇಶ್ ಬಿಡುಗಡೆ ಮಾಡಿದ್ದ ಆರ್‌ಟಿಸಿಯಲ್ಲಿ ಚರ್ಚ್ ಇರುವ ಜಾಗ ಕರಾಬ್ ಅಂದರೆ ಗೋಮಾಳ ಎಂದಿದೆ. ಆದರೆ ಚರ್ಚ್ನವರು ಮೂಲ ದಾಖಲೆ ಯಾವುದನ್ನೂ ಬಿಡುಗಡೆ ಮಾಡದೆ ತಾವು ಚರ್ಚ್ ಹೆಸರಿನಲ್ಲಿ ಕಂದಾಯ ಕಟ್ಟಿಕೊಂಡು ಬಂದಿರುವ ದಾಖಲೆ ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ.