Thursday, 19th September 2024

ಗ್ಯಾರಂಟಿಗಳಿಂದ ಫಲಾನುಭವಿಗಳ ಗಮನ ಬೇರೆಡೆ ಸೆಳೆಯಲು ಬಿಜೆಪಿ ಡ್ರಾಮಾ ಮಾಡುತ್ತಿದೆ

ಹಾಸನ ಜಿಲ್ಲೆಯ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮಾಡಿದ್ದಕ್ಕಾಗಿ 166 ಕೋಟಿ, ಗೃಹಲಕ್ಷ್ಮಿ ಯೋಜನೆಯಡಿ ಹಾಸನ ಜಿಲ್ಲೆಯ ಮಹಿಳೆಯರಿಗೆ 477, ಉಚಿತ ವಿದ್ಯುತ್ ನಿಂದಾಗಿ ಹಾಸನ ಜಿಲ್ಲೆಯೊಂದರಲ್ಲೇ 89 ಕೋಟಿ ರೂಪಾಯಿ ಹಣ ಜನರಿಗೆ ಉಳಿತಾಯವಾಗಿ, ಅನ್ನಭಾಗ್ಯ ಯೋಜನೆಯಡಿ ಯಲ್ಲಿ 135.33 ಕೋಟಿ ರೂಪಾಯಿ ಹಣ ಹಾಸನ ಜಿಲ್ಲೆಗೆ ನೀಡಲಾಗಿದೆ: ಜಿಲ್ಲೆಯ ಮಹಿಳೆಯರಿಗಾದ ಲೆಕ್ಕ ಬಿಚ್ಚಿಟ್ಟ ಸಿಎಂ

ಹಾಸನ: ಗ್ಯಾರಂಟಿಗಳಿಂದ ನೆಮ್ಮದಿ ಗಳಿಸಿರುವ ಫಲಾನುಭವಿಗಳ ಗಮನ ಬೇರೆಡೆ ಸೆಳೆಯಲು ಬಿಜೆಪಿ ಡ್ರಾಮಾ ಮಾಡುತ್ತಿದೆ. ಬಿಜೆಪಿಯ ಟೀಕೆ ಡ್ರಾಮಾ ಗಳಿಗೆ ಮರುಳಾಗಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.‌

ವಿವಿಧ ಇಲಾಖೆಗಳ ಪೂರ್ಣಗೊಂಡ ಕಾಮಗಾರಿಗಳ ಉದ್ಘಾಟನೆ, ಹೊಸ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ರಾಜ್ಯದಲ್ಲಿ ಜನರ ತಲಾ ಆದಾಯ ಹೆಚ್ಚಳವಾಗಿದೆ. ಈ ಜಿಡಿಪಿ ಬೆಳವಣಿಗೆಗೆ ರಾಜ್ಯದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಕಾರಣ. ಇಡೀ ದೇಶ ದಲ್ಲಿ 18% GDP ಬೆಳವಣಿಗೆ ಆಗಿ ದೇಶದ ಅಭಿವೃದ್ಧಿಗೆ ಅತಿ ಹೆಚ್ಚು ಕೊಡುಗೆ ನೀಡಿದ ಪ್ರಥಮ ರಾಜ್ಯ ನಮ್ಮದಾಗಿದೆ. ಈ ಬೆಳವಣಿಗೆ ನಮ್ಮ ಗ್ಯಾರಂಟಿ ಯೋಜನೆಗಳ ಫಲ ಎಂದು ಅಂಕಿ ಅಂಶಗಳ ಸಮೇತ ವಿವರಿಸಿದರು.

ಹಾಸನ ಜಿಲ್ಲೆಯ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮಾಡಿದ್ದಕ್ಕಾಗಿ 166 ಕೋಟಿ ಕೊಟ್ಟಿದ್ದೇವೆ. ಈ ಮಟ್ಟದ ಹಣ ಹಾಸನ ಮಹಿಳೆಯರಿಗೆ ಉಳಿತಾಯವಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ ಹಾಸನ ಜಿಲ್ಲೆಯ ಮಹಿಳೆಯರಿಗೆ 477 ಕೋಟಿ ರೂಪಾಯಿ ನೀಡಿದ್ದೇವೆ. ಈ ಹಣವೂ ಮಹಿಳೆಯರ ಖಾತೆಗೆ ನೇರವಾಗಿ ಹೋಗಿದೆ. ಉಚಿತ ವಿದ್ಯುತ್ ನಿಂದಾಗಿ ಹಾಸನ ಜಿಲ್ಲೆಯೊಂದರಲ್ಲೇ 89 ಕೋಟಿ ರೂಪಾಯಿ ಹಣ ಜನರಿಗೆ ಉಳಿತಾಯವಾಗಿದೆ. ಅನ್ನಭಾಗ್ಯ ಯೋಜನೆಯಡಿಯಲ್ಲಿ 135.33 ಕೋಟಿ ಹಣ ಹಾಸನ ಜಿಲ್ಲೆಗೆ ನೀಡಲಾಗಿದೆ. ಯುವನಿಧಿಯಲ್ಲಿ ಮಾಡಿರುವ ಹಣ ಕೂಡ ಜಿಲ್ಲೆಯ ಯುವ ಜನತೆಗೆ ಉಳಿತಾಯವಾಗಿದೆ. ಹೀಗೆ ಪ್ರತೀ ಒಂದೊಂದು ಗ್ಯಾರಂಟಿ ಯೋಜನೆಯಲ್ಲಿ ಜಿಲ್ಲೆಯ ಜನರಿಗೆ ನೂರಾರು ಕೋಟಿ ಹಣ ಉಳಿತಾಯವಾಗಿದೆ ಎಂದು ಅಂಕಿ ಅಂಶಗಳ ಸಮೇತ ವಿವರಿಸಿದರು.

ಹೀಗೆ ಜಿಲ್ಲೆಯ ಜನರ ಖಾತೆಗೆ ಬಂದ ನೇರ ಹಣದಿಂದಾಗಿ ಜನರ ಕೊಳ್ಳುವ ಶಕ್ತಿ, ಉಳಿತಾಯದ ಶಕ್ತಿ ಹೆಚ್ಚಾಗಿ ಇದರ ಒಟ್ಟು ಪರಿಣಾಮ ರಾಜ್ಯದಲ್ಲಿ ಆರ್ಥಿಕ ಚಟುವಟಿಕೆ ತೀವ್ರಗೊಂಡು ಆರ್ಥಿಕ ಪ್ರಗತಿ ಕಂಡಿದೆ ಎಂದರು.

ಮಹಿಳೆಯರು, ರೈತರು, ಕಾರ್ಮಿಕರು, ಹಿಂದುಳಿದವರು, ದುಡಿಯುವವರು, ಶ್ರಮಿಕರು ಎಲ್ಲರಿಗೂ ಅನುಕೂಲ ಆಗುವ ಜಾತಿ, ಧರ್ಮದ ಮಿತಿ ಇಲ್ಲದ ಕಾರ್ಯಕ್ರಮಗಳನ್ನು ನಾವು ರೂಪಿಸಿ, ಜಾರಿ ಮಾಡಿದ್ದೇವೆ.

ನಮ್ಮ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಜನರು ನೆಮ್ಮದಿ ಕಂಡುಕೊಳ್ಳುತ್ತಿದ್ದಾರೆ. ಈ ಫಲಾನುಭವಿಗಳ ಗಮನ ಬೇರೆಡೆ ಸೆಳೆಯಲು ಬಿಜೆಪಿ ನಾನಾ ಡ್ರಾಮಗಳನ್ನು ಸೃಷ್ಟಿಸುತ್ತಿದೆ, ಭರ್ಜರಿ ನಾಟಕ ಆಡುತ್ತಿದೆ ಎಂದು ಟೀಕಿಸಿದರು.

ಹಾಸನದ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಬದ್ದವಾಗಿದ್ದು, ಏರ್ ಪೋರ್ಟ್ ನಿರ್ಮಾಣಕ್ಕೆ ರಾಜ್ಯದ ಪಾಲಿನ ಹಣವನ್ನು ನಿರಂತರವಾಗಿ ನೀಡುತ್ತಿದೆ. ಅಭಿವೃದ್ಧಿ ವಿಚಾರದಲ್ಲಿ ಪಕ್ಷ ರಾಜಕಾರಣಕ್ಕೆ ಅವಕಾಶ ಕೊಡದೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ಆಧ್ಯತೆ ನೀಡಲಾಗುವುದು ಎಂದರು.

ಡಿಸಿಎಂ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್.ರಾಜಣ್ಣ, ಕೃಷಿ ಸಚಿವರಾದ ಚಲುವರಾಯಸ್ವಾಮಿ, ನಗರಾಭಿವೃದ್ಧಿ ಸಚಿವರಾದ ಬೈರತಿ ಸುರೇಶ್, ಶಾಸಕರಾದ ಶಿವಲಿಂಗೇಗೌಡರು ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *