Thursday, 12th December 2024

ಎಲ್ಲಾ ಜಾತಿ, ಎಲ್ಲಾ ಧರ್ಮದ ಬಡವರು, ಮಧ್ಯಮ ವರ್ಗಗಳು ಗ್ಯಾರಂಟಿ ಯೋಜನೆಗಳ ಹಕ್ಕುದಾರರು: ಸಿ.ಎಂ.ಸಿದ್ದರಾಮಯ್ಯ

ದೇಶದ ಸಂಪತ್ತನ್ನು ಸೃಷ್ಟಿಸುವವರು ಶ್ರಮಿಕರು ಮತ್ತು ದುಡಿಯುವ ವರ್ಗಗಳು: ಇವರಿಗೆ ಆರ್ಥಿಕ ಶಕ್ತಿ ನೀಡುವುದೇ ಗ್ಯಾರಂಟಿ ಯೋಜನೆ ಗಳ ಗುರಿ

ಕೊಟ್ಟ ಮಾತಿನಂತೆ ನಡೆದುಕೊಂಡು ನಿಮ್ಮ ಓಟಿಗೆ ಗೌರವ ತಂದುಕೊಟ್ಟವರು ನಾವು: ಇದನ್ನು ನಿಮ್ಮ ಹೃದಯಕ್ಕೆ ಕೇಳಿಕೊಂಡು ತೀರ್ಮಾ ನಿಸಿ: ಸಿಎಂ

ದೇವನಹಳ್ಳಿ: ಕೊಟ್ಟ ಮಾತಿನಂತೆ ನಡೆದುಕೊಂಡು ನಿಮ್ಮ ಓಟಿಗೆ ಗೌರವ ತಂದುಕೊಟ್ಟವರು ನಾವು. ಬಿಜೆಪಿ ಕೊಟ್ಟ ಮಾತಿನಂತೆ ನಡೆದುಕೊಂಡಿ ದೆಯಾ ? ನಿಮ್ಮ ಖಾತೆಗಳಿಗೆ ನೇರವಾಗಿ ಹಣ ಜಮೆ ಮಾಡುತ್ತಿರುವವರು ನಾವಾ? ಬಿಜೆಪಿಯಾ? ಇದನ್ನು ನಿಮ್ಮ ಹೃದಯಕ್ಕೆ ಕೇಳಿಕೊಂಡು ತೀರ್ಮಾನಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಆಯೋಜಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಹಾಗೂ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ, ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿ ಮಾತನಾಡಿದರು.

ಅನ್ನಭಾಗ್ಯ, ಕೃಷಿಭಾಗ್ಯ, ಕ್ಷೀರಧಾರೆ ಸೇರಿ ಹತ್ತಾರು ಭಾಗ್ಯಗಳು, ಐದು ಗ್ಯಾರಂಟಿಗಳನ್ನು ಜಾರಿ ಮಾಡಿ ಪ್ರತೀ ತಿಂಗಳು ನಾವು ಕೊಟ್ಟ ಮಾತಿನಂತೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡುತ್ತಿರುವವರು ನಾವು. ಉಚಿತ ಬಸ್, ಉಚಿತ ವಿದ್ಯುತ್ ಕೊಡುತ್ತಿರುವವರು ನಾವು‌ . ತಿಂಗಳಿಗೆ 2 ಸಾವಿರ ಪ್ರತೀ ಮಹಿಳೆಯ ಖಾತೆಗೆ ಹಾಕುತ್ತಿರುವವರು ನಾವು ಎನ್ನುತ್ತಾ, ನಾವು ಮಾಡಿದ ಕೆಲಸಕ್ಕೆ ಕೂಲಿ ಕೊಡಿ ಎಂದು ಕೈ ಮುಗಿದು ಕೇಳಿದರು.

ಆದರೆ ಮೋದಿಯವರು ವಿದೇಶದಿಂದ ಕಪ್ಪು ಹಣ ತಂದು ಪ್ರತಿಯೊಬ್ಬ ಭಾರತೀಯರ ಖಾತೆಗೆ 15 ಲಕ್ಷ ಹಣ ಹಾಕ್ತೀವಿ ಅಂದರು. ಮೋದಿಯವರು ಈ ಹಣ ಹಾಕಿದ್ರಾ ನಿಮ್ಮ ಖಾತೆಗೆ? ವಿದೇಶದಿಂದ ಕಪ್ಪು ಹಣ ತಂದರಾ ಎಂದು ನೆರೆದಿದ್ದ ಜನರನ್ನು ಪ್ರಶ್ನಿಸಿದರು.

ಅಚ್ಚೆದಿನ್ ಆಯೆಗಾ ಎಂದು ಡೈಲಾಗ್ ಹೊಡೆದದ್ದು ಮೋದಿಯವರು. ಆದರೆ ಪೆಟ್ರೋಲ್, ಡೀಸೆಲ್ ಬೆಲೆ, ಗ್ಯಾಸ್ ಬೆಲೆ, ರಸಗೊಬ್ಬರದ ಬೆಲೆ ಎಲ್ಲಾ ಏರಿಸಿ ಏರಿಸಿ ಬಡವರ, ಮಧ್ಯಮ ವರ್ಗದವರು ಬದುಕುವುದೇ ದುಸ್ತರ ಮಾಡಿಬಿಟ್ಟರು ಎಂದು ಒಂದೊಂದಾಗಿ ವಿವರಿಸಿದರು.

BJP ಸಮಾಜದಲ್ಲಿರುವ ಅಸಮಾನತೆಯ ಮಹಾನ್ ಪೋಷಕರು. ಬಡವರು ಇನ್ನಷ್ಟು ಬಡವರಾಗುತ್ತಲೇ ಹೋಗಬೇಕು, ಮಧ್ಯಮ ವರ್ಗದವರು ಬಡತನಕ್ಕೆ ಜಾರಬೇಕು ಎನ್ನುವುದು ಬಿಜೆಪಿಯ ಅಜೆಂಡಾ. ಹೀಗಾಗಿ ಮಧ್ಯಮ ವರ್ಗದವರು, ಬಡವರಿಗೆ ಕಾಂಗ್ರೆಸ್ ಸರ್ಕಾರ ಕೊಡುವ ಎಲ್ಲಾ ಕಾರ್ಯ ಕ್ರಮಗಳನ್ನೂ ವಿರೋಧಿಸುತ್ತಾರೆ, ಫಲಾನುಭವಿಗಳನ್ನು ಅವಮಾನಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಸರ್ಕಾರ ಸಂವಿಧಾನದ ಆಶಯಗಳಂತೆ ಸರ್ವರ ಕಲ್ಯಾಣದ ಕಾರ್ಯಕ್ರಮ ರೂಪಿಸುತ್ತಿದೆ. ನಮ್ಮ ಸಂವಿಧಾನ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಮಹಿಳೆಯರು, ಯುವ ಸಮೂಹ ಸೇರಿ ಸರ್ವರಿಗೂ ಅವಕಾಶಗಳನ್ನು ಕೊಡುತ್ತದೆ. ಈ ಅವಕಾಶಗಳನ್ನು ನಾಶ ಮಾಡಬೇಕು ಎನ್ನುವ ಕಾರಣಕ್ಕೆ ಬಿಜೆಪಿ ನಮ್ಮ ಸಂವಿಧಾನವನ್ನು ಬದಲಾಯಿಸಿ ಅವರ ಮನುಸ್ಮೃತಿ ಪರವಾಗಿ ಮಾತನಾಡುತ್ತಿದೆ.

ಬಿಜೆಪಿಯ ಹಾಲಿ ಸಂಸದ, ಮಾಜಿ ಕೇಂದ್ರ ಸಚಿವ ಅನಂತ ಕುಮಾರ ಹೆಗ್ಡೆ ಅವರು ಪದೇ ಪದೇ ಸಂವಿಧಾನ ಬದಲಾಯಿಸುವ ಮಾತಾಡುತ್ತಿದ್ದಾರೆ. ಇವರು ಬಹಿರಂಗವಾಗಿ ಸಂವಿಧಾನ ಬದಲಾಯಿಸುವ ಮಾತಾಡಿದರೂ ಪ್ರಧಾನಿ ಮೋದಿಯವರಾಗಲೀ, ಬಿಜೆಪಿ ಹೈ ಕಮಾಂಡ್ ಆಗಲಿ ಇದನ್ನು ವಿರೋಧಿಸಿಲ್ಲ. ಹೀಗಾಗಿ ಬಿಜೆಪಿಯ ಅಜೆಂಡಾವನ್ನು ನಾಡಿನ ಜನತೆ ಅರ್ಥಮಾಡಿಕೊಳ್ಳಬೇಕು. ನಮ್ಮ ಸಂವಿಧಾನ ಹೋದರೆ ನಾಡಿನ ಜನರ ಮಕ್ಕಳ ಭವಿಷ್ಯಕ್ಕೆ, ಅವರ ಬದುಕುವ-ದುಡಿಯುವ ಅವಕಾಶಗಳಿಗೆ ಕಂಟಕ ಬರುತ್ತದೆ ಎಂದು ಎಚ್ಚರಿಸಿದರು.

ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಜನಿಸುತ್ತೇನೆ ಎಂದಿದ್ದ ಮಾಜಿ ಪ್ರಧಾನಿ ದೇವೇಗೌಡರು ಈಗ ಬಿಜೆಪಿ ಜತೆ ಸೇರಿಕೊಂಡು ಬಿಜೆಪಿ ಮತ್ತು ಮೋದಿ ಯನ್ನು ಹೊಗಳುತ್ತಿದ್ದಾರೆ. ಇವರನ್ನು ಹೇಗೆ ನಂಬುತ್ತೀರಿ ಎಂದು ಪ್ರಶ್ನಿಸಿದರು.

ಮೊನ್ನೆ ನಡೆದ ವಿಧಾನ‌ಪರಿಷತ್ ಚುನಾವಣೆ ನಾಳೆ ಬರಲಿರುವ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದು ಹೆಚ್.ಡಿ.ಕುಮಾರಸ್ವಾಮಿಯವರು ಹೇಳಿದ್ದರು. ಆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ದೋಸ್ತಿಯನ್ನು ಸೋಲಿಸಿ ಕಾಂಗ್ರೆಸ್ ಪಕ್ಷದಿಂದ ಪುಟ್ಟಣ್ಣ ಜಯಭೇರಿ ಭಾರಿಸಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಅವರ ಮಾತಿನಂತೆ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ-ಜೆಡಿಎಸ್ ಸೋಲುತ್ತದೆ. ಕಾಂಗ್ರೆಸ್ ಗೆಲ್ಲುತ್ತದೆ ಎಂದು ಖಚಿತವಾಗಿ ನುಡಿದರು.

ಮಾದರಿ ದೇವನಹಳ್ಳಿ

ಸಚಿವ ಕೆ.ಹೆಚ್.ಮುನಿಯಪ್ಪ ಅವರು ಹಿಡಿದ ಕೆಲಸ ಬಿಡುವವರಲ್ಲ. ದೇವನಹಳ್ಳಿ ವಿಧಾನಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಮಾಡಲು ಪಣತೊಟ್ಟು ಕೆಲಸ ಮಾಡುತ್ತಿದ್ದಾರೆ. ಅವರು ದೇವನಹಳ್ಳಿ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ರೆಡಿ ಮಾಡಿಕೊಂಡು ಬಂದಿದ್ದಾರೆ. ಅದೆಲ್ಲಕ್ಕೂ ಹಣ ಬಿಡುಗಡೆ ಮಾಡಲಾಗುವುದು, ಅನುದಾನ ನೀಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.

ನೇಕಾರರ ಬಹುವರ್ಷಗಳ ಬೇಡಿಕೆಗಳನ್ನು ಈಡೇರಿಸಿದ್ದು ಕಾಂಗ್ರೆಸ್ ಸರ್ಕಾರ. ಹೀಗಾಗಿ ಯಾರು ನಿಮ್ಮ ಬದುಕಿನ ಪರವಾಗಿ ಇದ್ದಾರೋ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಿ ಎಂದು ಕರೆ ನೀಡಿದರು.

ಡಿಸಿಎಂ ಡಿ.ಕೆ.ಶಿವಕುಮಾರ್, ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ, ನಗರಾಭಿವೃದ್ಧಿ ಸಚಿವರಾದ ಬೈರತಿ ಸುರೇಶ್ ಸೇರಿ ಪಕ್ಷದ ಶಾಸಕರು ಮತ್ತು ಇಲಾಖೆಗಳ ಅಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.