Sunday, 15th December 2024

ಮಹಿಳೆಯ ಶಕ್ತಿಯು ಸ್ವಾವಲಂಬಿ ಮತ್ತು ಆತ್ಮವಿಶ್ವಾಸದ ಬೆಳಕು : ಶ್ರೀ ಗುರುಕುಲ ಸ್ವಾಮೀಜಿ ಅಭಿಮತ

ಅರ್ಥಪೂರ್ಣವಾಗಿ ಹೆಣ್ಣು ಮಕ್ಕಳ ದಿನಾಚರಣೆ : ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘದಿoದ ವಿಶೇಷ ಕಾರ್ಯಗಾರ

ತಿಪಟೂರು : ಭಾರತದ ನಾರೀಶಕ್ತಿಯು ಇಂದಿನ ಆಧುನಿಕ ಜಗತ್ತಿನ ಸ್ವಾವಲಂಬಿ, ಪ್ರಗತಿ ಹಾಗೂ ಭರವಸೆಯ ಸಂಕೇತವಾಗಿ ಜಗತ್ತಿಗೆ ಮಾದರಿಯಾಗಿದೆ ಎಂದು ಗುರುಕುಲನಂದಾಶ್ರಮದ ಇಮ್ಮಡಿ ಕರಿಬಸವ ದೇಶೀಕೇಂದ್ರ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ತಿಪಟೂರು ತಾಲ್ಲೂಕಿನ ಗುರುಕುಲ ಸಮುದಾಯ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ವಿಭಾಗದಿಂದ ಹೆಣ್ಣು ಮಕ್ಕಳ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಮಹಿಳಾ ವಿಚಾರಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತ ದೇಶದ ಮಹಿಳೆಯರು ಪುರಾತನ ಕಾಲದಿಂದಲೂ ವಿಶಿಷ್ಟ ಶಕ್ತಿಯನ್ನು ಹೊಂದಿಕೊ0ಡು, ಮಹಾರಾಜ ಕಾಲದಲ್ಲಿ ರಾಜರಿಗೆ ಸ್ಪೂರ್ತಿಯನ್ನು ತುಂಬುತ್ತಾ, ಶರಣರ ಕಾಲದಲ್ಲಿ ವಚನಾಗಾರ್ತಿಯಾಗಿ, ಆಧುನಿಕ ವಿಜ್ಞಾನದ ಕಾಲದಲ್ಲಿ ವಿಜ್ಞಾನಿ ಗಳಾಗಿ, ಶಿಕ್ಷಕಿಯಾಗಿ, ರಾಜಕಾರಣಿಯಾಗಿ ಆತ್ಮವಿಶ್ವಾಸದಿಂದ ಎಲ್ಲಾ ಕ್ಷೇತ್ರಗಳಲ್ಲಿಯೂ ಭರವಸೆಯ ಬೆಳಕಾಗಿ ಎಲ್ಲರಿಗೂ ದಾರಿದೀಪವಾಗಿ ಮಾದರಿಯಾಗಿದ್ದಾರೆ ಎಂದರು.

ರೋಟರಿ ಸಂಸ್ಥೆ ಅಧ್ಯಕ್ಷೆ ಡಾ ಟಿ.ಆರ್ ವಿಜಯಕುಮಾರಿ ಮಾತನಾಡಿ ಕೇವಲ ಅಡುಗೆ ಮನೆಗೆ ಸೀಮಿತಿಗೊಂಡಿದ್ದ ಹೆಣ್ಣುಮಕ್ಕಳ ಪರಿಸ್ಥಿತಿ ಇಂದು ಸುಧಾರಿಸಿ ಯಾರೂ ಊಹಿಸಲಾಗದ ಹಂತಕ್ಕೆ ಪುರುಷರಿಗೆ ಸವಾಲೆಸೆಯುವ ರೀತಿಯಲ್ಲಿ ಸ್ವಾವಲಂಬಿ ಜೀವನ ಸಾಗಿಸುತ್ತಿರುವುದು ಅನುಕರಣೀಯ ಎಂದರು.

ಕುಮಾರ್ ಆಸ್ಪತೆಯ ಡಾ. ಶ್ರೀಧರ್ ಮಾತನಾಡಿ ಹಿಂದಿನ ಕಾಲದಲ್ಲಿ ಕೇವಲ ಹೊಲ ಗದ್ದೆಗಳಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಹೆಣ್ಣು ಮಗಳು ಬದಲಾದಂತೆ ಇಂದು ಅಂತರಾಷ್ಟ್ರೀಯ ಕಂಪನಿಗಳು, ಸಾಫ್ಟ್ ವೇರ್ ಕಂಪನಿಗಳು ಇನ್ನೂ ಹೆಚ್ಚಿನ ಕ್ಷೇತ್ರಗಳಲ್ಲಿ ತಮ್ಮ ಕಬಂಧಬಾಹು ಗಳನ್ನು ಚಾಚಿ ತಮ್ಮದಾಗಿಸಿಕೊಂಡಿದ್ದಾರೆ. ಎಂದರು ಮಹಿಳಾ ಸಬಲೀಕರಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಯೋಜನೆಯ ಜಿಲ್ಲಾ ನಿರ್ದೇಶಕಿ ದಯಾಶೀಲ ಮಾತನಾಡಿ ಯೋಜನೆಯಲ್ಲಿ ಸ್ವ ಸಹಾಯ ಸಂಘದ ಪರಿಕಲ್ಪನೆ ಪ್ರಾರಂಭ ಮಾಡಿದ್ದೇ ಮಹಿಳೆಯರ ಆರ್ಥಿಕ ಹಾಗೂ ಸ್ವಾವಲಂಬಿ ಜೀವನ ನಡೆಸಲು ಅದನ್ನು ಅನುಷ್ಠಾನ ಮಾಡಲು ಮಾತೃ ಸ್ವರೂಪಿ ಶ್ರೀಮತಿ ಹೇಮಾವತಿ ಹೆಗ್ಗಡೆಯವರ ಜ್ಞಾನ ವಿಕಾಸ ವಿಭಾಗವು ಬಹಳ ಶ್ರಮಿಸಿದ್ದು ಇಂದು ಮಹಿಳೆಯರ ವಿವಿಧ ಉದ್ದೇಶಗಳಿಗೆ ಆರ್ಥಿಕ ನೆರವು ನೀಡುವಲ್ಲಿ ಸಹಕಾರಿಯಾಗಿದೆ. ಇದೇ ವಿಷಯ ಮುಂದುವರೆದು ಮಾತೃಶ್ರೀಯವರ ಕನಸಿನಂತೆ ಇಂದು ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಂದ ತಯಾರಿಸಿದ ಉತ್ಪನ್ನಗಳಿಗೆ ಸಿರಿ ಎಂಬ ಹೆಸರು ನೀಡಿ ಇಡೀ ರಾಜ್ಯಾದ್ಯಂತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ತಾಲ್ಲೂಕು ಯೋಜನಾಧಿಕಾರಿ ಉದಯ್ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯಲ್ಲಿ ಹಲವಾರು ವಿಶೇಷ ಕರ‍್ಯಕ್ರಮಗಳನ್ನು ಮಹಿಳೆಯ ಶ್ರೇಯೋಭಿವೃದ್ದಿಗೆ ಅನುಷ್ಠಾನಗೊಳಿಸಲಾಗಿದೆ ಇದರ ಪ್ರಯೋಜನವನ್ನು ಪೆರದುಕೊಳ್ಳಿ ಎಂದು ತಿಳಿಸಿದರು.

ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿ ರೂಪಾ, ಆರ್ಥಿಕ ಸಮಾಲೋಚಕಿ ರೇಖಾ, , ಜ್ಞಾನ ವಿಕಾಸ ಸಮನ್ವಯಾಧಿಕಾರಿ ಪದ್ಮಾವತಿ, ಸೇವಾ ಪ್ರತಿನಿಧಿಗಳು ಹಾಗೂ ಜ್ಞಾನವಿಕಾಸ ಕೇಂದ್ರದ ಸದಸ್ಯರು ಉಪಸ್ಥಿತರಿದ್ಧರು. ಕಾರ್ಯಕ್ರಮದಲ್ಲಿ ಮಹಿಳೆಯರು ತಾವೇ ತಯಾರಿಸಿದ ಉತ್ಪನ್ನಗಳ ಸ್ಟಾಲ್ ವಿಶೇಷವಾಗಿತ್ತು.