ಗದಗ: ಇದು ಚುನಾವಣೆಯ ಸಮಯ. ಸಹಜವಾಗಿ ಕಾಂಗ್ರೆಸ್ಗೆ ಇದು ಅಸ್ತಿತ್ವದ ಪ್ರಶ್ನೆ. ಹಾಗಾಗಿ ಭಾರತ್ ಜೋಡೊದಂಥ ಕಾರ್ಯ ಕ್ರಮ ಹಮ್ಮಿಕೊಳ್ಳುತ್ತಿರಬಹುದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ಹೇಳಿದರು.
ಗದಗನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜನರ ಬಳಿ ಹೋಗಲು ಏನಾದರೂ ನೆಪ ಬೇಕಲ್ಲವೇ? ಅದಕ್ಕೆ ಇಂಥ ಕಾರ್ಯಕ್ರಮ. ಹಿಂದಕ್ಕೆ ಸಿದ್ಧರಾಮಯ್ಯ ನವರು ಕಾಂಗ್ರೆಸ್ ಮುಖಂಡರೆಲ್ಲರನ್ನೂ ಕಟ್ಟಿಕೊಂಡು ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು ಪಾದಯಾತ್ರೆ ಮಾಡಿದರು. ಪ್ರತಿ ವರ್ಷ ಬಜೆಟ್ನಲ್ಲಿ ಕೃಷ್ಣಾ ನದಿ ನೀರಿನ ಯೋಜನೆಗೆ 10 ಸಾವಿರ ಕೋಟಿ ರೂಪಾಯಿ ಕೊಡುವುದಾಗಿ ಘೋಷಿಸಿದರು. ಸರಕಾರದ ಅವಧಿ ಮುಗಿದರೂ ಭರವಸೆಯಂತೆ ನಡೆದುಕೊಳ್ಳಲಿಲ್ಲ. ಭಾರತ್ ಜೋಡೋ ಸಹ ಅಂಥದ್ದೇ ಕಾರ್ಯಕ್ರಮ. ಭಾರತ ಏಕವಾಗಿದೆ. ಜೋಡಿಸುವ ಕೆಲಸ ಕಾಂಗ್ರೆಸ್ಗೆ ಬೇಕಿಲ್ಲ ಎಂದು ವ್ಯಂಗ್ಯವಾಡಿ ದರು.
ಸಿದ್ದರಾಮೋತ್ಸವವನ್ನು ಈಗ ಮಾಡುತ್ತಿರುವ ಉದ್ದೇಶವೂ ಬರಲಿರುವ ಚುನಾವಣೆ ಯಷ್ಟೇ. ಚುನಾವಣೆಗಾಗಿ ಇದೆಲ್ಲ ಗಿಮಿಕ್. ಇಷ್ಟು ವರ್ಷ ಸಿದ್ದರಾಮೋತ್ಸವ ಯಾಕೆ ನಡೆಯಲಿಲ್ಲ ಎಂದು ಅವರು ಪ್ರಶ್ನಿಸಿದರು.
ಅಂಗನವಾಡಿ ಕೇಂದ್ರಗಳಲ್ಲಿ ಪರಿಶಿಷ್ಟರು ಮಾಡಿದ ಅಡುಗೆಯನ್ನು ಸವರ್ಣೀಯ ಮಕ್ಕಳು ತಿನ್ನುತ್ತಿಲ್ಲ ಎಂಬುದು ಸಮಂಜಸ ವಲ್ಲ. ರಾಜ್ಯದ 20 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ. ಎಲ್ಲೂ ಈ ರೀತಿ ಆಗಿಲ್ಲ. ಒಂದು ವೇಳೆ ಆಗಿದ್ದರೆ ಅದು ತಿಳಿವಳಿಕೆಯ ಕೊರತೆ. ಜಾಗೃತಿ ಮೂಡಿಸುವ ಕೆಲಸವನ್ನು ಇಲಾಖೆ ಮಾಡುತ್ತದೆ ಎಂದು ಅವರು ತಿಳಿಸಿದರು.