Thursday, 12th December 2024

ದೇಶದ ಅಭಿವೃದ್ಧಿಯಲ್ಲಿ ಉದ್ಯಮಶೀಲತೆ ಪ್ರಮುಖ ಪಾತ್ರ ವಹಿಸುತ್ತದೆ: ಮುರುಳೀಧರ ಹಾಲಪ್ಪ

ತುಮಕೂರು: ಯಾವುದೇ ದೇಶದ ಸುಸ್ಥಿರ ಅಭಿವೃದ್ಧಿಯಲ್ಲಿ ಕೌಶಲ್ಯ ಮತ್ತು ಉದ್ಯಮಶೀಲತೆ ಬಹುಮುಖ್ಯ ಪಾತ್ರ ವಹಿಸುತ್ತವೆ ಎಂದು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಮುರಳೀಧರ ಹಾಲಪ್ಪ ತಿಳಿಸಿದರು.
ನಗರದ ಕುಣಿಗಲ್ ರಸ್ತೆಯ ಎಸ್‌ಎಸ್‌ಐಟಿ ಕ್ಯಾಂಪಸ್‌ನ ಪಿ.ಜಿ.ಸಭಾಂಗಣದಲ್ಲಿ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ, ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಹಾಲಪ್ಪ ಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ ಇಂಜಿನಿ ಯರಿಂಗ್ ಮತ್ತು ಪ್ರಥಮ ದರ್ಜೆ ಕಾಲೇಜಿನ ಬೋಧಕ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ಶನಿವಾರ ಹಮ್ಮಿಕೊಂಡಿದ್ದ ಯುವ ಸಬಲೀಕರಣ ಮತ್ತು ಉದ್ಯಮ ಶೀಲತೆ ಹಾಗೂ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತ ನಾಡಿದ ಅವರು, ದೇಶದ ಆರ್ಥಿಕ ಸ್ಥಿತಿಗತಿಗಳ ಉನ್ನತೀಕರಣಕ್ಕೆ ಕೌಶಲ್ಯ ಮತ್ತು ಉದ್ಯಮಶೀಲತೆ ಲಾಭದಾಯಕ ವಾಗಿದೆ ಎಂದರು.
ತುಮಕೂರಿನಲ್ಲಿ ಐಟಿ ಹಬ್ ಸ್ಥಾಪನೆಯಾಗಬೇಕು, ಇದು ತುಮಕೂರಿನ ಬ್ರಾಂಡ್ ಎಂಬ ಹೆಗ್ಗಳಿಕೆಗೆ ತುಮಕೂರು ಪಾತ್ರವಾಗ ಬೇಕು, ಈ ನಿಟ್ಟಿನಲ್ಲಿ ಇಂದಿನ ಯುವಪೀಳಿಗೆ ಯೋಚನೆ ಮಾಡುವಂತಾಗಬೇಕು ಎಂದು ಸಲಹೆ ನೀಡಿದರು.
ತುಮಕೂರಿನ ಎಸ್‌ಎಸ್‌ಐಟಿ ಕ್ಯಾಂಪಸ್‌ನಲ್ಲಿ ಎರಡು ದಿನಗಳ ಬೃಹತ್ ಉದ್ಯೋಗಮೇಳವನ್ನು ಆಯೋಜಿಸಿ ಯುವಕರಿಗೆ ಉದ್ಯೋಗ ಕಲ್ಪಿಸುವ ಗುರಿಯನ್ನು ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಕುಲಾಧಿಪತಿಗಳು ಹಾಗೂ ಮಾಜಿ ಉಪಮುಖ್ಯಮಂತ್ರಿಗಳಾದ ಡಾ.ಜಿ.ಪರಮೇಶ್ವರ್ ಅವರು ಹೊಂದಿದ್ದು, ಶೀಘ್ರವಾಗಿ ಉದ್ಯೋಗ ಮೇಳ ಆಯೋಜಿಸಲಾಗುವುದು ಎಂದು ತಿಳಿಸಿದರು.
ಕರ್ನಾಟಕ ಸಂಕಲ್ಪ್ ಸಂಸ್ಥೆಯ ಸತೀಶ್ ಮಾತನಾಡಿ, ಪ್ರಧಾನಮಂತ್ರಿ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ಬರುವ ಉಡುಪು, ವಿನ್ಯಾಸ, ಅಡುಗೆ ಕೌಶಲ್ಯ ಸೇರಿದಂತೆ ವಿವಿಧ ರೀತಿಯ ತರಬೇತಿಗಳನ್ನು ಪಡೆದು ಸ್ವಯಂ ಉದ್ಯೋಗಿಗಳಾಗಿ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಸಿಡಾಕ್ ಸಂಸ್ಥೆಯ ಜಂಟಿ ನಿರ್ದೇಶಕ ಅಶ್ವಿನ್ ಮಾತನಾಡಿ, ಉದ್ದಿಮೆ ಮಾಡಬೇಕೆಂದರೆ ಅವರಲ್ಲಿ ಉದ್ಯಮ ಶೀಲತೆ ಇರಬೇಕು ಆಗ ಮಾತ್ರ ಉದ್ದಿಮೆಯಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದರು.
ರಾಜಸ್ತಾನದಿ0ದ ಬಂದವರು ಇಲ್ಲಿ ಸಾಲ ಪಡೆದು ಉದ್ಯಮದಲ್ಲಿ ಶೇ.90 ರಷ್ಟು ಯಶಸ್ಸು ಗಳಿಸುತ್ತಾರೆ. ಆದರೆ ನಮ್ಮಲ್ಲಿ ಬಹಳ ಕಡಿಮೆ ಎಂದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸಿದ್ಧೇಶ್ ಮಾತನಾಡಿ, ಸರ್ಕಾರದಿಂದ ಉದ್ದಿಮೆ ಸ್ಥಾಪನೆಗೋಸ್ಕರ ಹಲವಾರು ಯೋಜನೆಗಳಿದ್ದು, 25 ಲಕ್ಷ ಇದ್ದ ಸಾಲದ ಮೊತ್ತವನ್ನು 50 ಲಕ್ಷಕ್ಕೆ ಏರಿಸಿದ್ದು, ಉದ್ಯಮ ಆರಂಭಿಸುವವರು ಅರ್ಜಿ ಸಲ್ಲಿಸಿ ಮಾಹಿತಿಯನ್ನು ಪಡೆಯಬಹುದು ಎಂದು ತಿಳಿಸಿದರು.
ಜಿಲ್ಲಾ ಉದ್ಯೋಗ ಮತ್ತು ತರಬೇತಿ ಇಲಾಖೆ ಅಧಿಕಾರಿ ಕೆ. ಶ್ರೀನಿವಾಸ್ ಮಾತನಾಡಿ, ಸ್ಕಿಲ್ ಕನೆಕ್ಟ್ ಆಥರೈಸ್ಡ್ ಜಾಬ್ ಪೋರ್ಟಲ್ ಈ ತಿಂಗಳ 16 ರಂದು ಉದ್ಘಾಟನೆಗೊಳ್ಳಲಿದ್ದು, ಇದರಲ್ಲಿ ವಿದ್ಯಾರ್ಥಿಗಳು ನೊಂದಾಯಿಸಿಕೊಂಡರೆ ಉದ್ಯೋಗವಕಾಶಗಳು ಲಭ್ಯವಾಗಲಿವೆ ಎಂದರು.
ವಿದ್ಯಾರ್ಥಿಗಳು ನಕಾರಾತ್ಮಕ ಯೋಚನೆಗಳನ್ನು ಬಿಟ್ಟು, ಸಕಾರಾತ್ಮಕ ಯೋಚನೆ ಮಾಡಿದರೆ ನಿಮ್ಮ ಭವಿಯ ಉಜ್ವಲಗೊಳ್ಳಲಿದೆ ಎಂದು ಸಲಹೆ ನೀಡಿದರು. ಈ ಕಾರ್ಯಕ್ರಮದಲ್ಲಿ ಎಸ್‌ಎಸ್‌ಐಟಿ ಡೀನ್ ಡಾ.ಕೆ.ಕರುಣಾಕರ್, ಇನ್‌ಕ್ಯಾಬ್ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಪ್ರಕಾಶ್, ಹೆಚ್‌ಸಿಎಲ್‌ನ ಪವನ್ ಶರ್ಮಾ, ಮೈಕ್ರೋಸಾಫ್ಟ್ ಸಂಸ್ಥೆಯ ರಾಜ್ಯ ಮುಖ್ಯಸ್ಥ ಕಿಶೋರ್ ತಂಗವೇಲು, ಸಿಡಾಕ್ ಸಂಸ್ಥೆಯ ಜಂಟಿ ನಿರ್ದೇಶಕ ಅಶ್ವಿನ್, ಸಿದ್ಧಾರ್ಥ್, ಡಾ.ಎಲ್.ಸಂಜೀವ್ ಕುಮಾರ್, ಜಿಲ್ಲಾ ಉದ್ಯೋಗ ಮತ್ತು ತರಬೇತಿ ಇಲಾಖೆ ಅಧಿಕಾರಿ ಕೆ. ಶ್ರೀನಿವಾಸ್, ಯುಕ್ತ ಕೌಶಲ್ಯ ಸಂಸ್ಥೆಯ ದಿಲೀಪ್ ಸೇರಿದಂತೆ, ಎಸ್‌ಎಸ್‌ಐಟಿ ಕಾಲೇಜಿನ ಪ್ರಾಂಶುಪಾಲರು, ಬೋಧಕ ಸಿಬ್ಬಂದಿ, ವಿವಿಧ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಿಡಾಕ್, ಲೀಡ್ ಬ್ಯಾಂಕ್, ಬಾಷ್, ಮೈಕ್ರೋಸಾಪ್ಟ್, ಫ್ಲಿಫ್ ಕಾರ್ಟ್, ಎಲ್ಸಿಯಾ, ಹೆಚ್‌ಸಿಎಲ್, ಮಹಿಂದ್ರಾ ಟೆಕ್ ಸೇರಿದಂತೆ ಹಲವಾರು ಕಂಪನಿಗಳ ಪ್ರತಿನಿದಿಗಳು ಭಾಗವಹಿಸಿ ವಿದ್ಯಾರ್ಥಿಗಳಿಗೆ ಅಗತ್ಯ ಮಾಹಿತಿಯನ್ನು ನೀಡಿದರು
ಪೋಟೋ: ಎಸ್ಎಸ್ಐಟಿಯಲ್ಲಿ ಉದ್ಯಮಶೀಲತೆ ತರಬೇತಿ ಹಮ್ಮಿಕೊಳ್ಳಲಾಗಿತ್ತು.