Thursday, 12th December 2024

ಸಂತ್ರಸ್ತರಿಗೆ ತ್ವರಿತ ಪರಿಹಾರ ವಿತರಣೆ: ಹಾಲಪ್ಪ ಆಚಾರ್

ಅತಿವೃಷ್ಟಿ ಹಾನಿ : ಪರಿಹಾರ ಮೊತ್ತ ಹೆಚ್ಚಿಸಿ ಆದೇಶ

ಹುಬ್ಬಳ್ಳಿ : ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದಾಗಿ ಜೂನ್ 1 ರ ನಂತರ ಬಿದ್ದ ಮನೆಗಳು, ಮಾನವ ಹಾಗೂ ಜಾನುವಾರು ಗಳ ಜೀವ ಹಾನಿ ,ಗೃಹೋಪಯೋಗಿ ವಸ್ತುಗಳ ಹಾನಿಗೆ ನೀಡುವ ಪರಿಹಾರದ ಮೊತ್ತವನ್ನು ಪರಿಷ್ಕರಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಜಿಲ್ಲೆಯಲ್ಲಿ ಕಳೆದ ವಾರದಿಂದ ಮಳೆಯ ಪ್ರಮಾಣ ಅಧಿಕವಾಗಿದೆ.

ಮಳೆಯಿಂದ ಬಾಧಿತರಾದ ಜನರಿಗೆ ಪರಿಹಾರ ವಿತರಿಸಲು ಹಣಕಾಸಿನ ಕೊರತೆ ಇಲ್ಲ ,ಸಂತ್ರಸ್ತರ ಖಾತೆಗಳಿಗೆ ತ್ವರಿತವಾಗಿ ಪರಿಹಾರ ಜಮೆ ಮಾಡಲು ಕ್ರಮ ವಹಿಸಲಾಗಿದೆ ಎಂದು ಗಣಿ,ಭೂವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ,ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಹೇಳಿದರು.

ಅತಿವೃಷ್ಟಿಯಿಂದ ಹಾನಿಗೊಳಗಾದ ವರೂರಿನ ಯಲ್ಲಪ್ಪ ಧೂಳಪ್ಪನವರ ಹಾಗೂ ರಾಮಪ್ಪ ಕಂತಿಗೌಡ್ರ ಅವರ ಮನೆಗಳಿಗೆ ಭೇಟಿ ನೀಡಿ, ಹಾನಿಯನ್ನು ವೀಕ್ಷಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ಎನ್‌ಡಿಆರ್‌ಎಫ್ ಮಾರ್ಗದರ್ಶಿ ಸೂತ್ರಗಳ ಪ್ರಕಾರ ನಿಗದಿಗೊಳಿಸಲಾಗಿದ್ದ ಪರಿಹಾರ ಮೊತ್ತವನ್ನು ರಾಜ್ಯ ಸರ್ಕಾರ ಪರಿಷ್ಕರಣೆ ಮಾಡಿದೆ.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅತಿವೃಷ್ಟಿ ಬಾಧಿತರ ಸಂಕಷ್ಟಗಳಿಗೆ ಸ್ಪಂದಿಸಲು ಸಕಾಲದಲ್ಲಿ ಈ ನಿರ್ಣಯ ಕೈಗೊಂಡಿದ್ದಾರೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಹಾನಿಗೊಳಗಾದ ಮನೆಗಳಿಗೆ ಅವುಗಳ ಹಾನಿಯ ಪ್ರಮಾಣ ಆಧರಿಸಿ 5 ಲಕ್ಷ,3 ಲಕ್ಷ ಹಾಗೂ 50 ಸಾವಿರ ರೂ.ಗಳ ಪರಿಹಾರ ದೊರೆಯಲಿದೆ.

ಗೃಹೋಪಯೋಗಿ ವಸ್ತುಗಳಿಗಾಗಿ 10 ಸಾವಿರ ರೂ.ತಕ್ಷಣ ನೀಡಲಾಗುವುದು.ಈ ಪರಿಷ್ಕೃತ ಆದೇಶವು ಜೂನ್ 1 ರ ನಂತರ ಹಾನಿ ಗೊಳಗಾದ ಮನೆಗಳಿಗೆ ಅನ್ವಯಿಸುತ್ತದೆ. ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಸುಮಾರು 157 ಮನೆಗಳು ಭಾಗಶಃ ಹಾನಿಯಾಗಿವೆ ಎಂದು ಅಂದಾಜಿಸಲಾಗಿದೆ. ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ನಿರೀಕ್ಷಕರು ಅತಿವೃಷ್ಟಿ ಬಾಧಿತರ ಸಂಕಷ್ಟಗಳಿಗೆ ಸ್ಪಂದನೆ ನೀಡುತ್ತಿದ್ದಾರೆ ಎಂದರು.

ಪರಿಹಾರ ಕಾರ್ಯಗಳಿಗೆ ಹಣಕಾಸಿನ ಕೊರತೆ ಇಲ್ಲ ಜಿಲ್ಲಾ ಖಜಾನೆಯಲ್ಲಿ ಸಾಕಷ್ಟು ಹಣದ ಲಭ್ಯತೆ ಇದೆ.ಸಂತ್ರಸ್ತರ ದಾಖಲೆಗಳನ್ನು ಕ್ರೋಢೀಕರಿಸಿ ತ್ವರಿತ ಪರಿಹಾರ ವಿತರಣೆ ಮಾಡಲು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಲಾಗಿದೆ ಎಂದು ಸಚಿವರು ವಿವರಿಸಿದರು.

ಮುಂಗಾರು ಪೂರ್ವದಲ್ಲಿ ಮೇ ತಿಂಗಳಲ್ಲಿ ಸುರಿದ ಮಳೆಗೆ ಹಾನಿಗೀಡಾದ ಮನೆಗಳಿಗೆ ಈ ಪರಿಷ್ಕೃತ ಪರಿಹಾರದ ಆದೇಶ ಅನ್ವಯಿ ಸುವುದಿಲ್ಲ. ಆ ಅವಧಿಯಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಮನೆಗಳು ಕುಸಿದಿವೆ ಅವರಿಗೂ ನ್ಯಾಯಸಿಗಬೇಕಲ್ಲವೇ ಎಂದು ಮಾಧ್ಯಮ ದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಸಮಸ್ಯೆಯ ಬಗ್ಗೆ ಮಾಹಿತಿ ಇದೆ, ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಪರಿಹಾರ ಒದಗಿಸಲು ಪ್ರಯತ್ನಿಸುತ್ತೇನೆ ಎಂದರು.

ಹುಬ್ಬಳ್ಳಿ ಆನಂದನಗರ ಘೋಡಕೆ ಪ್ಲಾಟಿನಲ್ಲಿ ಹಾನಿಗೊಳಗಾದ ಅಂಗನವಾಡಿ ಕಟ್ಟಡಕ್ಕೆ ಭೇಟಿ ನೀಡಿ,ಪರಿಶೀಲಿಸಿದರು. ಮನೆ ಕುಸಿದು ಗಾಯಗೊಂಡು ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕುಂದಗೋಳ ತಾಲೂಕು ಯಲಿವಾಳದ ಕಾಶವ್ವ ಹಿರೇಗೌಡ್ರ ಅವರನ್ನು ಸಚಿವರು ಭೇಟಿಯಾಗಿ,ಚಿಕಿತ್ಸೆಯ ಮಾಹಿತಿ ಪಡೆದರು. ಆದರ್ಶನಗರದಲ್ಲಿ ಮಳೆ ನೀರು ನುಗ್ಗಿ ಹಾನಿಗೊಳಗಾಗಿರುವ ಸರ್ಕಾರಿ ಪ್ರೌಢಶಾಲಾ ಕಟ್ಟಡಕ್ಕೆ ಸಚಿವರು ಭೇಟಿ ನೀಡಿ,ವೀಕ್ಷಿಸಿದರು.

ಶಾಸಕ ಅರವಿಂದ ಬೆಲ್ಲದ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುರೇಶ ಇಟ್ನಾಳ, ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂತರಠಾಣಿ ಮತ್ತಿತರರು ಇದ್ದರು.