Friday, 22nd November 2024

Haldiram Bhujiawala: ಹಲ್ದಿರಾಮ್ ಭುಜಿಯಾವಾಲಾದಲ್ಲಿ 235 ಕೋಟಿ ರೂ. ಹೂಡಿಕೆ ಮಾಡಿದ ಪಂಟೊಮಾಥ್ಸ್‌ನ ಭಾರತ್‌ ವ್ಯಾಲ್ಯು ಫಂಡ್‌

Haldiram Bhujiawala

ಬೆಂಗಳೂರು: ಪಂಟೊಮಾಥ್ಸ್‌ನ ಭಾರತ್‌ ವ್ಯಾಲ್ಯು ಫಂಡ್‌ (ಬಿವಿಎಫ್‌), ಕೋಲ್ಕತ್ತಾ ಮೂಲದ ಹಲ್ದಿರಾಮ್ ಭುಜಿಯಾವಾಲಾ ಲಿಮಿಟೆಡ್‌ನಲ್ಲಿ (Haldiram Bhujiawala) ರೂ. 235 ಕೋಟಿ ಹೂಡಿಕೆ ಮಾಡಿದೆ. ಈ ಮೂಲಕ ಖಾಸಗಿ ಹೂಡಿಕೆದಾರರಿಗೆ ಷೇರು ಮಾರಾಟದ ಸುತ್ತನ್ನು ಪೂರ್ಣಗೊಳಿಸಿರುವುದಾಗಿ ಹಲ್ದಿರಾಮ್‌ ಭುಜಿಯಾವಾಲಾ ಲಿಮಿಟೆಡ್ ಇಂದು ಪ್ರಕಟಿಸಿದೆ. ಈ ಹೂಡಿಕೆಯು ಕಂಪನಿಯ ಆಡಳಿತ ಮಂಡಳಿಯ ನಿಯಂತ್ರಣ ಹೊಂದಿಲ್ಲದ ಪಾಲುದಾರಿಕೆ (ಮೈನಾರಿಟಿ ಸ್ಟೇಕ್‌) ಆಗಿರಲಿದೆ. ಹಲ್ದಿರಾಮ್‌ ಭುಜಿಯಾವಾಲಾ ಲಿಮಿಟೆಡ್‌, ತನ್ನ ಉತ್ಪನ್ನಗಳನ್ನು ʼಪ್ರಭುಜಿʼ ಬ್ರ್ಯಾಂಡ್‌ ಹೆಸರಿನಡಿ ಮಾರಾಟ ಮಾಡುತ್ತಿದೆ.

ಕುರುಕುಲು ತಿಂಡಿಗಳ ಮಾರುಕಟ್ಟೆಯು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರಗಳಲ್ಲಿ ಒಂದಾಗಿದೆ. ಹಣಕಾಸು ವರ್ಷ 2024ರಲ್ಲಿ ಈ ಮಾರುಕಟ್ಟೆಯು ₹ 42,600 ಕೋಟಿ ಮೌಲ್ಯದ್ದಾಗಿದೆ ಎಂದು ಅಂದಾಜಿಸಲಾಗಿದೆ. ಇದು ಹಣಕಾಸು ವರ್ಷ 2032 ರ ವೇಳೆಗೆ ₹ 95,500 ಕೋಟಿಗೆ ತಲುಪುವ ನಿರೀಕ್ಷೆಯಿದೆ. ಮಾರುಕಟ್ಟೆಯ ಒಟ್ಟಾರೆ ವಾರ್ಷಿಕ ಬೆಳವಣಿಗೆ ದರವು (ಸಿಎಜಿಆರ್‌) ಶೇ.11 ರಷ್ಟಿದೆ. ಈ ಮಾರುಕಟ್ಟೆಯಲ್ಲಿ ಗಣನೀಯ ಮಾರುಕಟ್ಟೆ ಪಾಲು ಹೊಂದಿರುವ ಸಂಘಟಿತ ವಹಿವಾಟುದಾರರು ಈ ಬೆಳವಣಿಗೆಗೆ ಪ್ರಮುಖ ಕೊಡುಗೆದಾರರಾಗಿದ್ದಾರೆ ಎಂದು ಊಹಿಸಲಾಗಿದೆ. ವೈವಿಧ್ಯಮಯ ಉತ್ಪನ್ನಗಳನ್ನು ಪರಿಚಯಿಸಲು ಈ ಸಂಘಟಿತ ವಹಿವಾಟುದಾರರು ನಿರಂತರವಾಗಿ ಗಮನ ನೀಡುತ್ತಿದ್ದಾರೆ. ಗುಣಮಟ್ಟ, ಅನುಕೂಲತೆ ಮತ್ತು ಸುರಕ್ಷತಾ ಮಾನದಂಡಗಳಿಗೆ ಈ ಕಂಪನಿಗಳು ಹೊಂದಿರುವ ಬಲವಾದ ಬದ್ಧತೆಯು ಅವರ ವಹಿವಾಟನ್ನು ಇನ್ನಷ್ಟು ವಿಸ್ತರಿಸಲು ನೆರವಾಗುತ್ತಿದೆ.

ಈ ಸುದ್ದಿಯನ್ನೂ ಓದಿ | SBI Q2 Results: ಎಸ್‌ಬಿಐ ಲಾಭ 18,331 ಕೋಟಿ ರೂ.; ಶೇ. 28ರಷ್ಟು ಏರಿಕೆ

ಹಲ್ದಿರಾಮ್ ಭುಜಿಯಾವಾಲಾ ಲಿಮಿಟೆಡ್ ಕುರುಕುಲು ತಿಂಡಿ ಮತ್ತು ಉಪ್ಪುಖಾರದ ಉತ್ಪನ್ನಗಳ ಉದ್ಯಮದಲ್ಲಿ 6 ದಶಕಗಳಿಗಿಂತಲೂ ಹೆಚ್ಚು ಕಾಲದ ಸದೃಢ ಪರಂಪರೆ ಹೊಂದಿದೆ. ಕಂಪನಿಯು ತನ್ನ ಉತ್ಪನ್ನಗಳನ್ನು “ಪ್ರಭುಜಿ” ಎಂಬ ಬ್ರ್ಯಾಂಡ್ ಹೆಸರಿನಲ್ಲಿ ಮಾರಾಟ ಮಾಡುತ್ತಿದೆ. ಇದು 100ಕ್ಕೂ ಹೆಚ್ಚು ಉತ್ಪನ್ನ ಗುರುತಿಸುವ ಸಂಕೇತ (ಎಸ್‌ಕೆಯು) ಗಳೊಂದಿಗೆ ವ್ಯಾಪಕ ಉತ್ಪನ್ನಗಳನ್ನು ನೀಡುತ್ತಿದೆ. ಇದು ದೇಶದಲ್ಲಿ ಅದರಲ್ಲೂ ವಿಶೇಷವಾಗಿ ಪೂರ್ವ ಮತ್ತು ಈಶಾನ್ಯ ಭಾರತದ ಮಾರುಕಟ್ಟೆಗಳಲ್ಲಿ ಬಲವಾದ ಬ್ರ್ಯಾಂಡ್ ಮನ್ನಣೆಯನ್ನೂ ಹೊಂದಿದೆ. ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳಲ್ಲಿ ತ್ವರಿತ ಸೇವಾ ರೆಸ್ಟೋರೆಂಟ್‌ಗಳನ್ನು ನಿರ್ವಹಿಸುತ್ತಿದೆ. ಆಧುನಿಕ ಬ್ರ್ಯಾಂಡ್ ಆಗಿರುವ, ‘ಪ್ರಭುಜಿ’ ಎಂಬುದು ಕಂಪನಿಯ ಹೊಸ-ಯುಗದ ಮಾರಾಟ ಕಾರ್ಯತಂತ್ರದಿಂದ ಬೆಂಬಲಿತವಾದ ಬಹು ಜನಪ್ರಿಯ ಪದವಾಗಿದೆ. ಈ ಪದವನ್ನು ಇನ್ನಷ್ಟು ಜನಪ್ರಿಯಗೊಳಿಸಲು ಕಂಪನಿಯು ಅತ್ಯಾಧುನಿಕ ಮಾರುಕಟ್ಟೆ ಕಾರ್ಯತಂತ್ರ ಅನುಸರಿಸುತ್ತಿದೆ. ಬಾಲಿವುಡ್‌ನ ದಂತಕತೆ ತಾರೆಯರಾದ ಶಾರುಖ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಅವರು ಈ ಉತ್ಪನ್ನಗಳ ಪ್ರಚಾರ ರಾಯಭಾರಿ ಆಗಿದ್ದಾರೆ.

2,000 ವಿತರಕರ ಜಾಲ

ಹಲ್ದಿರಾಮ್ ಭುಜಿಯಾವಾಲಾ ಲಿಮಿಟೆಡ್, ತುಂಬ ಪರಿಣಾಮಕಾರಿ ಹಾಗೂ ಶಕ್ತಿಯುತವಾದ ರಿಟೇಲ್‌ ವಹಿವಾಟು ಮತ್ತು ವಿತರಣಾ ವಹಿವಾಟಿನ ಮಿಶ್ರಣ ಹೊಂದಿದೆ. ಕಂಪನಿಯು ಸರಿಸುಮಾರು 2,000 ವಿತರಕರ ಜಾಲ ಹೊಂದಿದ್ದು, ದೇಶದಾದ್ಯಂತ 2,00,000 ದಷ್ಟು ರಿಟೇಲ್‌ ವ್ಯಾಪಾರಿಗಳಿಗೆ ಸೇವೆ ಸಲ್ಲಿಸುತ್ತಿದೆ. ಕಂಪನಿಯು 19 ರಿಟೇಲ್‌ ಮಾರಾಟ ಮಳಿಗೆಗಳನ್ನು ಮತ್ತು ಜನಪ್ರಿಯ ಬ್ರ್ಯಾಂಡ್‌ ಹೆಸರಿನಡಿ 60 ವಿಶಾಲ ಮಾರಾಟ ಮಳಿಗೆಗಳ (ಫ್ರಾಂಚೈಸಿ) ಮೂಲಕ ತನ್ನ ಗ್ರಾಹಕರನ್ನು ನೇರವಾಗಿ ತಲುಪುತ್ತಿದೆ. ಸದ್ಯಕ್ಕೆ ಕಂಪನಿಯ ಮಾರುಕಟ್ಟೆಗಳಲ್ಲಿ ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್ ಮತ್ತು ಈಶಾನ್ಯ ರಾಜ್ಯಗಳು ಸೇರಿವೆ. ಕಂಪನಿಯು ಪೂರ್ವ ಮತ್ತು ಈಶಾನ್ಯ ಭಾರತದ ಮಾರುಕಟ್ಟೆಗಳ ಆಚೆಗೆ ತನ್ನ ಉತ್ಪಾದನೆ ಮತ್ತು ಮಾರುಕಟ್ಟೆಗಳನ್ನು ವಿಸ್ತರಿಸಲು ಹಣ ಬಳಸಲಿದೆ. ಹಲ್ದಿರಾಮ್ ಭುಜಿಯಾವಾಲಾ ಲಿಮಿಟೆಡ್, ಪ್ರತಿ ವರ್ಷಕ್ಕೆ 6,035 ಮೆಟ್ರಿಕ್ ಟನ್‌ಗಳ (ಎಂಟಿಪಿಎ) ಒಟ್ಟಾರೆ ಸಾಮರ್ಥ್ಯದೊಂದಿಗೆ ಮೂರು ಉತ್ಪಾದನಾ ಘಟಕಗಳನ್ನು ನಿರ್ವಹಿಸುತ್ತಿದೆ.

ಈ ಸಂದರ್ಭದಲ್ಲಿ ಹಲ್ದಿರಾಮ್ ಭುಜಿಯಾವಾಲಾ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಅಗರ್ವಾಲ್ ಮಾತನಾಡಿ, ʼಕಳೆದ 60ಕ್ಕೂ ಹೆಚ್ಚು ವರ್ಷಗಳಲ್ಲಿ, ನಾವು ರುಚಿಕರವಾದ ತಿಂಡಿಗಳು ಮತ್ತು ಸಿಹಿತಿಂಡಿಗಳನ್ನು ನೀಡುವ ಮೂಲಕ ನಿಷ್ಠಾವಂತ ಗ್ರಾಹಕರ ನೆಲೆಯನ್ನು ವಿಸ್ತರಿಸಿದ್ದೇವೆ. ನಮ್ಮ ಕಂಪನಿಯು ಹೊಸತನ್ನು ಜನಪ್ರಿಯಗೊಳಿಸುವುದರಲ್ಲಿ ಮುಂಚೂಣಿಯಲ್ಲಿದ್ದು, ಭಾರತದ ಆಹಾರ ಪ್ರವೃತ್ತಿ ಮತ್ತು ಅಭಿರುಚಿಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದೆʼ ಎಂದು ಹೇಳಿದ್ದಾರೆ.

ʼಭಾರತ್ ವ್ಯಾಲ್ಯು ಫಂಡ್‌ನ (ಬಿವಿಎಫ್‌) ಬೆಂಬಲದೊಂದಿಗೆ ನಮ್ಮ ಉದ್ಯಮದ ಒಳನೋಟಗಳನ್ನು ಬಳಸಿಕೊಂಡು, ಷೇರುದಾರರ ಮೌಲ್ಯವನ್ನು ಹೆಚ್ಚಿಸಲು ಮತ್ತು ವಹಿವಾಟಿನ ಬೆಳವಣಿಗೆ ಮುಂದುವರೆಸಲು ನಾವು ಮುಂಚೂಣಿಯಲ್ಲಿ ಇದ್ದೇವೆ. ಈ ಪಾಲುದಾರಿಕೆಯು ದೀರ್ಘಾವಧಿಯ ಆರ್ಥಿಕ ಪ್ರಯೋಜನಗಳನ್ನು ಸೃಷ್ಟಿಸಲು ಭದ್ರ ಬುನಾದಿ ಹಾಕಲಿದ್ದು, ಎಲ್ಲಾ ಭಾಗಿದಾರರಿಗೆ ಸಮೃದ್ಧ ಭವಿಷ್ಯವನ್ನು ಖಾತ್ರಿಪಡಿಸುತ್ತದೆʼ ಎಂದೂ ಮನಿಶ್‌ ಅಗರ್ವಾಲ್‌ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ | Aadhar Card update: 10 ವರ್ಷಗಳಿಂದ ಆಧಾರ್​ ಕಾರ್ಡ್ ಅಪ್‌ಡೇಟ್‌ ಮಾಡಿಲ್ವಾ? ಕೊನೆಯ ದಿನ, ವಿವರ ಇಲ್ಲಿದೆ

ಹಲ್ದಿರಾಮ್ ಭುಜಿಯಾವಾಲಾ ಲಿಮಿಟೆಡ್‌ನಲ್ಲಿನ ತನ್ನ ಬಂಡವಾಳ ಹೂಡಿಕೆ ಕುರಿತು ಮಾತನಾಡಿರುವ ಭಾರತ್ ವ್ಯಾಲ್ಯೂ ಫಂಡ್‌ನ ಸಿಐಒ ಮಧು ಲುನಾವತ್ ಮಾತನಾಡಿ, ʼಹಲ್ದಿರಾಮ್ ಭುಜಿಯಾವಾಲಾ ಲಿಮಿಟೆಡ್‌ ಜತೆಗೆ ಪಾಲುದಾರಿಕೆ ಹೊಂದಲು ನಮಗೆ ಖುಷಿಯಾಗುತ್ತಿದೆ. 1958 ರಲ್ಲಿ ಕಂಪನಿಯು ಸ್ಥಾಪನೆಯಾದಾಗಿನಿಂದ ಆರು ದಶಕಗಳ ಮಾರುಕಟ್ಟೆ ಒಳನೋಟದೊಂದಿಗೆ ಕಂಪನಿಯು ಗ್ರಾಹಕರ ನಡವಳಿಕೆ ಮತ್ತು ಮಾರುಕಟ್ಟೆ ಪ್ರವೃತ್ತಿಗಳ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದಿದೆ. ಹೊಸ ಪೀಳಿಗೆಯು ಆಧುನಿಕ ಬ್ರ್ಯಾಂಡ್, ‘ಪ್ರಭುಜಿ,’ ಬಗ್ಗೆ ಹೆಚ್ಚಿನ ಗಮನ ನೀಡುತ್ತಿರುವುದು ಗಮನಾರ್ಹ ಸಂಗತಿಯಾಗಿದೆ. ಆಹಾರ, ತ್ವರಿತವಾಗಿ ಬಿಕರಿಯಾಗುವ ಗ್ರಾಹಕರ ಉತ್ಪನ್ನ (ಎಫ್‌ಎಂಸಿಜಿ) ಮತ್ತು ಗ್ರಾಹಕ ವಸ್ತುಗಳ ವಲಯಗಳ ವಹಿವಾಟು ವಿಸ್ತರಣೆಯಾಗುವ ಬಗ್ಗೆ ನಾವು ಹೆಚ್ಚು ಆಶಾವಾದಿಗಳಾಗಿದ್ದೇವೆ. ಮುಂದಿನ ವರ್ಷಗಳಲ್ಲಿ ಗಣನೀಯ ಬೆಳವಣಿಗೆಯನ್ನು ಸಾಧಿಸಲು ಹಲ್ದಿರಾಮ್ ಉತ್ತಮ ಸ್ಥಾನದಲ್ಲಿದೆʼ ಎಂದು ಹೇಳಿದ್ದಾರೆ.